ಮುಂದಿನ ಆರು ತಿಂಗಳು ರಕ್ಷಾ ರಾಮಯ್ಯ, ಬಳಿಕ ಒಂದು ವರ್ಷ ನಲಾಡ್ ಅವರಿಗೆ ಯುವಕರ ಅಧ್ಯಕ್ಷ ಪಟ್ಟ
ಬೆಂಗಳೂರು, ಜೂನ್ 29, 2021 (ಕರಾವಳಿ ಟೈಮ್ಸ್) : ರಾಜ್ಯದಲ್ಲಿ ಕಾಂಗ್ರೆಸ್ ನಾಯಕರು ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಬಗ್ಗೆ ಫೈಟ್ ನಡೆಸುತ್ತಿದ್ದ ಮಧ್ಯೆಯೇ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಪಟ್ಟದ ಬಗ್ಗೆ ಇದ್ದ ಜಂಘೀ ಕುಸ್ತಿಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಸಂಧಾನ ಸೂತ್ರವೊಂದನ್ನು ನಡೆಸುವ ಮೂಲಕ ಕೊನೆಗೂ ಯೂತ್ ಫೈಟ್ ಗೆ ಸುಖಾಂತ್ಯ ನೀಡುವಲ್ಲಿ ಸಫಲರಾಗಿದ್ದಾರೆ.
ಯೂತ್ ಅಧ್ಯಕ್ಷತೆಗಾಗಿ ಜಂಘೀ ಕುಸ್ತಿಯಲ್ಲಿದ್ದ ರಕ್ಷಾ ರಾಮಯ್ಯ ಹಾಗೂ ಮೊಹಮ್ಮದ್ ನಲಪಾಡ್ ಅವರ ಮಧ್ಯೆ ಸಂಧಾನ ಏರ್ಪಡಿಸಿದ ಡಿಕೆಶಿ ಇಬ್ಬರಿಗೂ ಅಧಿಕಾರ ಹಂಚಿಕೆ ಮಾಡಿ ಇಬ್ಬರನ್ನೂ ಸಮಾಧಾನಪಡಿಸುವ ಮೂಲಕ ಯುವಕರ ನಡುವಿನ ಗೊಂದಲಕ್ಕೆ ತೆರೆ ಎಳೆದಿದ್ದಾರೆ.
ಡಿಸೆಂಬರ್ ತಿಂಗಳ ವರೆಗೆ ಅಂದರೆ ಮುಂದಿನ ಆರು ತಿಂಗಳು ರಕ್ಷಾ ರಾಮಯ್ಯ ಯೂತ್ ಅಧ್ಯಕ್ಷರಾದರೆ, ಬಳಿಕ ಮುಂದಿನ ಜನವರಿವರೆಗೆ ಅಂದರೆ ಒಂದು ವರ್ಷ ಮೊಹಮ್ಮದ್ ನಲಪಾಡ್ ಯುವ ಕಾಂಗ್ರೆಸ್ ಅಧ್ಯಕ್ಷರು ಎಂದು ಡಿಕೆಶಿ ಘೋಷಿಸಿದ್ದಾರೆ.
ಕರ್ನಾಟಕ ರಾಜ್ಯ ಕಾಂಗ್ರೆಸ್ ಯುವ ಘಟಕಕ್ಕೆ ಕಳೆದ 6 ತಿಂಗಳ ಹಿಂದೆ ರಾಜ್ಯಾದ್ಯಂತ ಚುನಾವಣೆ ನಡೆದು ಮಹಮ್ಮದ್ ನಲಪಾಡ್ ಅತೀ ಹೆಚ್ಚಿನ ಮತಗಳನ್ನು ಅಂದರೆ 64,203 ಮತಗಳನ್ನು ಪಡೆದು ಅಧ್ಯಕ್ಷ ಪಟ್ಟಕ್ಕೆ ಅರ್ಹತೆ ಪಡೆದಿದ್ದರು. ರಕ್ಷಾ ರಾಮಯ್ಯ ಅವರು 57,271 ಮತಗಳನ್ನು ಪಡೆದು ಎರಡನೇ ಸ್ಥಾನ ಪಡೆದಿದ್ದರು.
ಆದರೆ ಬಳಿಕ ನಡೆದ ನಾಟಕೀಯ ಬೆಳವಣಿಗೆಯಲ್ಲಿ ಅಪರಾಧ ಪ್ರಕರಣ ನೆಪವೊಡ್ಡಿ ನಲಪಾಡ್ ಅವರನ್ನು ಅನರ್ಹ ಎಂದು ಸಾರಲಾಗಿ, ರಕ್ಷಾ ರಾಮಯ್ಯ ಅವರನ್ನು ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಎಂದು ಘೋಷಿಸಲಾಗಿತ್ತು.
ಬಳಿಕ ಈ ಬಗ್ಗೆ ಪರ-ವಿರೋಧ ಅಭಿಪ್ರಾಯಗಳು ಪಕ್ಷದೊಳಗೂ ಹೊರಗೂ ಮೂಡಿಬಂದು ಇಡೀ ಪ್ರಕರಣ ಗೊಂದಲದ ಗೂಡಾಗಿಯೇ ಮುಂದುವರೆದಿತ್ತು.
ಇದೀಗ ಕೊನೆಗೂ ಯುವ ನಾಯಕರನ್ನು ವಿಶ್ವಾಸಕ್ಕೆ ಪಡೆದ ಕೆಪಿಸಿಸಿ ಸಾರಥಿ ಡಿ ಕೆ ಶಿವಕುಮಾರ್ ಅವರು ಸಂಧಾನ ಸೂತ್ರ ಏರ್ಪಡಿಸಿ ಯುವ ಪಟ್ಟವನ್ನು ಹಂಚಿಕೆ ಮಾಡಿ ಪ್ರಕರಣಕ್ಕೆ ಸುಖಾಂತ್ಯ ನೀಡಿದ್ದಾರೆ.
0 comments:
Post a Comment