ಶಿವಮೊಗ್ಗ, ಜೂನ್ 04, 2021 (ಕರಾವಳಿ ಟೈಮ್ಸ್) : ಜುಲೈ 31 ರಂದು ಸೇವಾ ನಿವೃತ್ತಿ ಪಡೆಯಲಿದ್ದ ಜಿಲ್ಲೆಯ ಭದ್ರಾವತಿ ಟ್ರಾಫಿಕ್ ಪೊಲೀಸ್ ಸಬ್ ಇನ್‍ಸ್ಪೆಕ್ಟರ್ ರಮೇಶ್ ಕೆ ಬಿ (60) ಅವರು ಕೋವಿಡ್ ಸೋಂಕಿಗೆ ತುತ್ತಾಗಿ ಶುಕ್ರವಾರ ಮೃತಪಟ್ಟಿದ್ದಾರೆ. ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಭದ್ರಾವತಿಯಲ್ಲಿ ನಡೆದಿದೆ.
ಮೂಲತಃ ಸಾಗರ ತಾಲೂಕಿನ ಬಾಳೆಗುಂಡಿ ಗ್ರಾಮದ ನಿವಾಸಿಯಾಗಿರುವ ಇವರು, ಪೊಲೀಸ್ ಇಲಾಖೆಯಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು. ರಮೇಶ್ ಅವರಿಗೆ ಮೇ.14 ರಂದು ಕೊರೊನಾ ಸೋಂಕು ದೃಢವಾಗಿತ್ತು. ಸೋಂಕು ಕಾಣಿಸಿಕೊಂಡ ಬಳಿಕ ಒಂದು ವಾರಗಳ ಕಾಲ ಹೋಮ್ ಐಸಲೋಷನ್ ಗೆ ಒಳಗಾಗಿದ್ದರು.
ಹೋಮ್ ಐಸಲೋಷನ್ ನಲ್ಲಿರುವಾಗ ಉಸಿರಾಟದ ಸಮಸ್ಯೆ ತೀವ್ರವಾಗಿ ಉಲ್ಬಣಿಸಿದೆ. ಹೀಗಾಗಿ ರಮೇಶ್ ಕುಟುಂಬಸ್ಥರು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಿದ್ದರು. ಮೃತ ರಮೇಶ್ ಅವರಿಗೆ ಕೋವಿಡ್ ಸೋಂಕಿನ ಜೊತೆಗೆ ಹೃದಯ ಸಂಬಂಧಿ ಕಾಯಿಲೆ ಸಹ ಇದ್ದಿದ್ದರಿಂದ ಆರೋಗ್ಯದಲ್ಲಿ ಚೇತರಿಕೆ ಕಾಣಲಿಲ್ಲ ಎನ್ನಲಾಗಿದೆ.
ಶುಕ್ರವಾರ ಮಧ್ಯಾಹ್ನ ಆರೋಗ್ಯದಲ್ಲಿ ಏರುಪೇರು ಆಗಿದ್ದು, ತೀವ್ರ ಅಸ್ವಸ್ಥಗೊಂಡಿದ್ದರು. ಪರೀಕ್ಷೆ ನಡೆಸಿದ ವೈದ್ಯರು ಬದುಕುವ ಸಾಧ್ಯತೆ ತೀರಾ ಕಡಿಮೆ ಇದ್ದು, ಮನೆಗೆ ಕರೆದುಕೊಂಡು ಹೋಗುವಂತೆ ಸಲಹೆ ನೀಡಿದ್ದಾರೆ. ವೈದ್ಯರ ಸಲಹೆಯಂತೆ ಸ್ವಗ್ರಾಮ ಸಾಗರ ತಾಲೂಕಿನ ಬಾಳೆಗುಂಡಿಗೆ ಕರೆದುಕೊಂಡು ಹೋಗುತ್ತಿರುವ ಸಂದರ್ಭ ದಾರಿ ಮಧ್ಯೆ ಪಿಎಸ್ ಐ ರಮೇಶ್ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ನಿವೃತ್ತಿಗೆ ಕೇವಲ 2 ತಿಂಗಳು ಇರುವಾಗ ದುರಂತ ಮರಣ ಹೊಂದಿದ ಪಿಎಸ್ಐ ಅವರಿಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ ತೀವ್ರ ಸಂತಾಪ ಸೂಚಿಸಿದೆ.
0 comments:
Post a Comment