ಬೆಂಗಳೂರು, ಜೂನ್ 10, 2021 (ಕರಾವಳಿ ಟೈಮ್ಸ್) : ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಜುಲೈ 3ನೇ ವಾರದಲ್ಲಿ ನಡೆಸಲು ಸರಕಾರ ಈಗಾಗಲೇ ನಿರ್ಧರಿಸಿದ್ದು, ಅದರಂತೆ ಶಿಕ್ಷಣ ಇಲಾಖಾಧಿಕಾರಿಗಳು ಸಿದ್ದತೆ ಆರಂಭಿಸಿದ್ದಾರೆ.
ಈಗಾಗಲೇ ಬುಧವಾರ ರಾಜ್ಯ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಎಸ್ಸೆಸ್ಸೆಲ್ಸಿ ಪರೀಕ್ಷಾ ಪೂರ್ವ ಸಿದ್ದತೆ ನಡೆಸುವ ಕುರಿತಂತೆ ರಾಜ್ಯದ ಎಲ್ಲಾ 34 ಶೈಕ್ಷಣಿಕ ಜಿಲ್ಲೆಗಳ ಜೊಲ್ಲಾ ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಜೊತೆ ವೀಡಿಯೋ ಕಾನ್ಫರೆನ್ಸ್ ಮೂಲಕ ಚರ್ಚಿಸಿದ್ದು, ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲು ವಿದ್ಯಾರ್ಥಿಗಳು ಹಾಗೂ ಪೋಷಕರ ವಿಶ್ವಾಸ ಗಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಇನ್ನು ಒಂದು ವಾರದೊಳಗೆ ರಾಜ್ಯದ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮೂಲಕ ಶಾಲೆಗಳಿಗೆ ಮಾದರಿ ಪ್ರಶ್ನೆ ಪತ್ರಿಕೆ ಕಳಿಸಲಾಗುವುದು. ಎಂ.ಆರ್.ಒ. ಶೀಟ್ ರೂಪದಲ್ಲಿರುವ ಪ್ರಶ್ನೆ ಪತ್ರಕೆಗಳಿಗೆ ಯಾವ ರೀತಿ ಉತ್ತರಿಸಬೇಕೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡುವಂತೆ ಸೂಚಿಸಲಾಗಿದೆ.
ಪ್ರತಿ ವಿಷಯಕ್ಕೆ 40 ಅಂಕಗಳ ಪ್ರಶ್ನೆಗಳಿರುತ್ತವೆ. ಬಹು ಆಯ್ಕೆ ರೀತಿಯಲ್ಲಿರುವ ಪ್ರಶ್ನೆ ಪತ್ರಿಕೆಯಲ್ಲಿ ಪ್ರತೀ ಪ್ರಶ್ನೆಗೂ ನಾಲ್ಕು ಉತ್ತರಗಳನ್ನು ಪ್ರಶ್ನೆ ಪತ್ರಿಕೆಯಲ್ಲೇ ನೀಡಲಾಗಿರುತ್ತದೆ. ಸರಿಯಾದ ಉತ್ತರ ಗುರುತು ಮಾಡಬೇಕು. ಪ್ರಶ್ನೆಗಳು ನೇರ ಮತ್ತು ಸುಲಭವಾಗಿದ್ದು, ವಿದ್ಯಾರ್ಥಿಗಳು ಯಾವುದೇ ಗೊಂದಲಕ್ಕೆ ಒಳಗಾಗದಂತೆ ನೋಡಿಕೊಳ್ಳಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಪಾಲಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಭವಿಷ್ಯದ ದಿಕ್ಸೂಚಿಯಾಗಿದ್ದು, ಮಹತ್ವಪೂರ್ಣವಾಗಿರುತ್ತದೆ. ಈ ನಿಟ್ಟಿನಲ್ಲಿ ಕೋವಿಡ್ 2ನೇ ಅಲೆ ನಿಯಂತ್ರಣಕ್ಕೆ ಬಂದ ಬಳಿಕ ಪರೀಕ್ಷೆ ನಡೆಸಲು ಸರಕಾರ ತೀರ್ಮಾನಿಸಿದೆ. ಕೋವಿಡ್ ಕಾರಣದಿಂದ ಬದಲಾಗಿರುವ ಪರೀಕ್ಷಾ ಪದ್ದತಿ ಬಗ್ಗೆ ಮಕ್ಕಳಲ್ಲಿ ಆತ್ಮ ವಿಶ್ವಾಸ ಹಾಗೂ ಧೈರ್ಯ ಮೂಡಿಸುವ ಕೆಲಸ ಶಿಕ್ಷಕರಿಂದ ಆಗಬೇಕು. ಸಾಧ್ಯವಾದರೆ ಶಿಕ್ಷಕರು ಕೆಲ ಕೆಲ ವಿದ್ಯಾರ್ಥಿಗಳನ್ನು ತರಗತಿಗೆ ಕರೆಸಿಕೊಂಡಾದರೂ ಸೂಕ್ತ ಸಲಹೆ ನೀಡುವಂತೆ ಸಚಿವರು ಸೂಚಿಸಿದ್ದಾರೆ. ಕಳೆದ ಬಾರಿಗಿಂತಲೂ ಈ ಬಾರಿ ಹೆಚ್ಚಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದ ಸಚಿವರು ಪರೀಕ್ಷಾ ಕೋಣೆಗೆ ಬರುವ ಶಿಕ್ಷಕರು 2 ಡೋಸ್ ಲಸಿಕೆ ಪಡೆಯುವುದನ್ನು ಕಡ್ಡಾಯ ಮಾಡಲಾಗಿದೆ. ಈ ಬಗ್ಗೆ ಈಗಾಗಲೇ ಆರೋಗ್ಯ ಇಲಾಖೆಯೊಂದಿಗೂ ಮಾತುಕತೆ ನಡೆಯುತ್ತಿದೆ ಎಂದಿದ್ದಾರೆ.
0 comments:
Post a Comment