ಬೆಂಗಳೂರು, ಜೂನ್ 02, 2021 (ಕರಾವಳಿ ಟೈಮ್ಸ್) : ಲಾಕ್ ಡೌನ್ ಕಾರಣದಿಂದ ಹಸಿದಿರುವವರಿಗೆ ಆಹಾರ ಪೊಟ್ಟಣಗಳನ್ನು ವಿತರಿಸುವ ನೆಪದಲ್ಲಿ ಸಾರ್ವಜನಿಕರು ಕೋವಿಡ್ ಶಿಷ್ಟಾಚಾರ ಉಲ್ಲಂಘಿಸಿ ತಮ್ಮ ಸ್ವಂತ ವಾಹನಗಳನ್ನು ರಸ್ತೆಗೆ ಇಳಿಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದು ಸರಿಯಲ್ಲ. ಇನ್ನು ಮುಂದೆ ಆಹಾರ ವಿತರಿಸುವವರು ಸರಕು ವಾಹನಗಳನ್ನು ಅಥವಾ ವಿತರಣಾ ಕಂಪನಿಗಳ ಮೂಲಕ ಹಂಚುವ ವ್ಯವಸ್ಥೆ ಮಾಡಬೇಕು ಎಂದು ಬೆಂಗಳೂರು ಪೊಲೀಸರು ಸೂಚಿಸಿದ್ದಾರೆ.
ಸಾರ್ವಜನಿಕರು ತಮ್ಮ ಖಾಸಗಿ ವಾಹನಗಳನ್ನು ರಸ್ತೆಗೆ ಇಳಿಸಲು ಆಹಾರ ವಿತರಣೆ ಹಾಗೂ ಮಾಸ್ಕ್ ವಿತರಣೆ ಇಂತಹ ನೆಪಗಳನ್ನು ಮುಂದಿಡುತ್ತಿರುವ ಪ್ರಕರಣಗಳು ನಗರಗಳಲ್ಲಿ ಅತೀ ಹೆಚ್ಚಾಗುತ್ತಿದ್ದು, ಇಂತಹ ನಿರ್ಲಕ್ಷ್ಯದ ಕ್ರಮಗಳನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಹಾಗೂ ಇದು ಕ್ಷಮಾರ್ಹವಲ್ಲ ಎಂದಿರುವ ನಗರ ಪೊಲೀಸರು ಇಂತಹ ಕಾರಣಕ್ಕೆ ರಸ್ತೆಗೆ ಇಳಿದ ಕಾರು ಹಾಗೂ ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬೊಮ್ಮನಹಳ್ಳಿ ಸಿಗ್ನಲ್ ಬಳಿ ಚಾಲಕ ಅಗತ್ಯವಿರುವವರಿಗೆ ಆಹಾರವನ್ನು ವಿತರಿಸುತ್ತಿದ್ದೇನೆ ಎಂದು ಚಲಾಯಿಸುತ್ತಿದ್ದ ಬಿಎಂಡಬ್ಲ್ಯು ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕಾರಿನಲ್ಲಿ ಸುಮಾರು 10 ಆಹಾರ ಪೊಟ್ಟಣಗಳು ಪತ್ತೆಯಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಬಡವರು ಹಾಗೂ ನಿರ್ಗತಿಕರಿಗೆ ಆಹಾರ ಪೊಟ್ಟಣ ವಿತರಿಸಲು ಬಯಸುವವರು ಸರಕು ವಾಹನಗಳನ್ನು ಮಾತ್ರ ಬಳಸಬೇಕು ಅಥವಾ ವಿತರಣಾ ಕಂಪೆನಿಗಳನ್ನು ಬಳಸಿಕೊಳ್ಳಬೇಕು. ಹೀಗಾದಾಗ ಖಾಸಗಿ ವಾಹನಗಳು ರಸ್ತೆಗೆ ಇಳಿಯುವುದನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
0 comments:
Post a Comment