ಬಂಟ್ವಾಳ, ಜೂನ್ 13, 2021 (ಕರಾವಳಿ ಟೈಮ್ಸ್) : ಕೊರೋನಾ ಸಂದರ್ಭ ಜನ ಒಪ್ಪೊತ್ತಿನ ಊಟಕ್ಕೂ ಪರದಾಟ ನಡೆಸುತ್ತಿರುವ ಅತ್ಯಂತ ಕ್ಲಿಷ್ಟಕರ ಸನ್ನಿವೇಶದಲ್ಲಿ ಜನರ ರಕ್ತ ಹೀರುವುದಕ್ಕೆ ಸಮನಾದ ರೀತಿಯಲ್ಲಿ ಇಂಧನ ಸಹಿತ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಣ್ಣು ಮುಚ್ಚಿ ಅನುಮೋದನೆ ನೀಡುತ್ತಿರುವ ಮೋದಿ ಹಾಗೂ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರಗಳ ಪಾಪದ ಕೊಡ ತುಂಬಿದ್ದು, ಮುಂದಿನ ದಿನಗಳಲ್ಲಿ ಜನರ ಕಣ್ಣೀರ ಶಾಪ ಅನುಭವಿಸಿಯೇ ತೀರಲಿದೆ ಎಂದು ಜಿ ಪಂ ಮಾಜಿ ಸದಸ್ಯ ಉಮ್ಮರ್ ಫಾರೂಕ್ ಫರಂಗಿಪೇಟೆ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಇಂಧನ ಬೆಲೆ ಏರಿಕೆ ವಿರುದ್ದ ಪುದು ವಲಯ ಕಾಂಗ್ರೆಸ್ ಹಾಗೂ ಪುದು ಯುವ ಕಾಂಗ್ರೆಸ್ ವತಿಯಿಂದ ಭಾನುವಾರ ಫರಂಗಿಪೇಟೆ ಪೆಟ್ರೋಲ್ ಪಂಪ್ ಮುಂಭಾಗ ನಡೆದ “100 ನಾಟೌಟ್” ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಯುಪಿಎ ಸರಕಾರದ ಅವಧಿಯಲ್ಲಿ ತೈಲ ಬೆಲೆ ಅಂತರಾಷ್ಟ್ರೀಯ ಮಟ್ಟದಲ್ಲಿ ಗಗನಕ್ಕೇರಿದ್ದರೂ ದೇಶದಲ್ಲಿ ಜನ ಸಾಮಾನ್ಯರಿಗೆ ತೊಂದರೆ ಆಗದ ರೀತಿಯಲ್ಲಿ ಡಾ ಮನಮೋಹನ್ ಸಿಂಗ್ ಅವರ ವಿಶೇಷ ಆರ್ಥಿಕ ನೈಪುಣ್ಯತೆಯಿಂದ ಆರ್ಥಿಕ ಸಮತೋಲನ ಕಾಪಾಡಿಕೊಂಡು ಬಂದಿದೆ. ಈ ಮೂಲಕ ಜನ ಸಾಮಾನ್ಯರೊಂದಿಗಿನ ಕಾಂಗ್ರೆಸ್ ಪಕ್ಷದ ಬದ್ದತೆಯನ್ನು ಪ್ರದರ್ಶಿಸಿತ್ತು ಎಂದರು.
ಪ್ರಧಾನಿ ಮೋದಿ ಅವರೇ ನಿಮ್ಮ ಅಚ್ಛೆ ದಿನ್ ಕನಸಿನ ಸ್ವರ್ಗ ಸಾಕು. ಕಳೆದ 7 ವರ್ಷಗಳಲ್ಲಿ ನಿಮ್ಮ ಸರಕಾರದ ಉತ್ತಮ ದಿನಗಳನ್ನು ದೇಶದ ಜನ ಅನುಭವಿಸಿ ಅನುಭವಿಸಿ ಬಳಲಿ ಬೆಂಡಾಗಿ ಹೋಗಿದ್ದಾರೆ. ಪೆಟ್ರೋಲ್ 60 ರೂಪಾಯಿಗೆ ಸಿಗುತ್ತಿದ್ದ ಆ ಕಾಲವೇ ಮರಳಿ ಬರಲಿ ಎಂದು ದೇಶದ ಜನ ಆಶಿಸುತ್ತಿದ್ದಾರೆ ಎಂದು ಉಮ್ಮರ್ ಫಾರೂಕ್ ಸರಕಾರದ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದರು.
ಕಪ್ಪು ಹಣ ವಾಪಾಸಾತಿ, ಉದ್ಯೋಗ ಸೃಷ್ಟಿ ಎಂಬೆಲ್ಲಾ ಬಣ್ಣದ ಮಾತುಗಳಿಗೆ ಕಟ್ಟು ಬಿದ್ದ ದೇಶದ ಜನತೆ ಕೊನೆಗೆ ಇದ್ದ ಉದ್ಯೋಗವನ್ನೇ ಕಳೆದುಕೊಂಡು ಬೀದಿಗೆ ಬಂದು ನಿಲ್ಲುವಂತಹ ಸಂಕಷ್ಟದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಫಾರೂಕ್ ವಾಗ್ದಾಳಿ ನಡೆಸಿದರು.
ಪುದು ಗ್ರಾ ಪಂ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಮಾತನಾಡಿ, ಬಿಜೆಪಿ ಸರಕಾರಗಳ ಜನ ವಿರೋಧಿ ನೀತಿಗಳಿಂದಾಗಿ ಜನ ಬೇಸತ್ತು ಹೋಗಿದ್ದು, ಮುಂದಿನ ದಿನಗಳಲ್ಲಿ ಜನ ಇಂತಹ ಜನ ವಿರೋಧಿ ಸರಕಾರಗಳನ್ನು ಕಿತ್ತೊಗೆದು ಜನಸೇವೆ ಮಾಡಲು ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದು ಶತಸ್ಸಿದ್ದ ಎಂದು ವಿಶ್ವಾಸ ವ್ಯಕ್ತಪಡಿಸಿದರಲ್ಲದೆ, ಸರಕಾರ ಇಂಧನ ಬೆಲೆ ಏರಿಕೆಯನ್ನು ತಕ್ಷಣ ನಿಯಂತ್ರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬೀದಿ ಬೀದಿಗಳಲ್ಲಿ ಉಗ್ರ ಹೋರಾಟ ನಡೆಸಲಿದ್ದಾರೆ ಎಂದು ಎಚ್ಚರಿಸಿದರು.
ಪುದು ಗ್ರಾ ಪಂ ಉಪಾಧ್ಯಕ್ಷೆ ಲಿಡಿಯಾ ಪಿಂಟೋ, ಸದಸ್ಯರಾದ ಭಾಸ್ಕರ್ ರೈ , ಇಕ್ಬಾಲ್ ಸುಜೀರ್ , ರಝಾಕ್ ಅಮ್ಮೆಮಾರ್ , ಮುಮ್ತಾಝ್ ಸುಜೀರ್ , ಫಝಲ್ ಅಮ್ಮೆಮಾರ್ , ಹೇಮಲತಾ ಕುಂಪನಮಜಲು, ಲವಿನಾ ಕುಂಪನಮಜಲು, ರಿಯಾಜ್ ಕುಂಪನಮಜಲು , ಝಾಹೀರ್ ಕುಂಪನಮಜಲು, ಮೊಹಮ್ಮದ್ ಮೋನು ಫರಂಗಿಪೇಟೆ, ಜೀನತ್ ಕುಂಜತ್ಕಲ, ಹುಸೈನ್ ಪಾಡಿ , ರಶೀದಾ ಮಾರಿಪಳ್ಳ , ಕಿಶೋರ್ ಸುಜೀರ್ , ರೆಹನಾ ಮಾರಿಪಳ್ಳ, ಪುದು ವಲಯ ಕಾಂಗ್ರೆಸ್ ಅಧ್ಯಕ್ಷ ರಫೀಕ್ ಫೆರಿಮಾರ್, ಮುಡಿಪು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕಾಧ್ಯಕ್ಷ ಇಂತಿಯಾಝ್ ತುಂಬೆ ಮುಡಿಪು ಬ್ಲಾಕ್ ಯುವ ಕಾಂಗ್ರೆಸ್ ಉಪಾಧ್ಯಕ್ಷ ಮಜೀದ್ ಪೇರಿಮಾರ್, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದೀಕ್ಷಿತ್ ಅತ್ತಾವರ, ಪುದು ಯುವ ಕಾಂಗ್ರೆಸ್ ಅಧ್ಯಕ್ಷ ನಿಝಾಂ ಕುಂಜತ್ಕಲ, ಜಿಲ್ಲಾ ಯುವ ಕಾಂಗ್ರೆಸ್ ಮುಖಂಡ ಹಿಶಾಂ ಫರಂಗಿಪೇಟೆ, ಪುದು ವಲಯ ಕಾಂಗ್ರೆಸ್ ಸದಸ್ಯರಾದ ಹಕೀಂ ಮಾರಿಪಳ್ಳ , ಫಯಾಜ್ ಅಮ್ಮೆಮಾರ್ , ಸಲೀಂ ಫರಂಗಿಪೇಟೆ , ಸಲಾಂ ಮಲ್ಲಿ, ಗಪೂರ್ ಫರಂಗಿಪೇಟೆ , ಇಸ್ಮಾಯಿಲ್ ಮಾಜಪೆ , ರಿಲ್ವಾನ್ ಅಮ್ಮೆಮಾರ್ , ಇಂಶಾದ್ ಮಾರಿಪಳ್ಳ , ಸಮೀಜ್ ಫರಂಗಿಪೇಟೆ , ಆತೀಕ್ ಫರಂಗಿಪೇಟೆ , ಕಿಶೋರ್ ಕುಂಬೈಲು , ಕೆರೀಂ ಮಾರಿಪಳ್ಳ, ಲತೀಫ್ ಮಾರಿಪಳ್ಳ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
0 comments:
Post a Comment