ನವದೆಹಲಿ, ಜೂನ್ 07, 2021 (ಕರಾವಳಿ ಟೈಮ್ಸ್) : ದೇಶದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಜೂ 21 ರಿಂದ ಪ್ರತಿಯೊಬ್ಬರಿಗೂ ಉಚಿತ ಲಸಿಕೆ ನೀಡಲಾಗುವುದು ಹಾಗೂ ಪ್ರಧಾನ ಮಂತ್ರಿ ಗರೀಬ್ ಅನ್ನ ಯೋಜನೆಯಡಿ ನೀಡಲಾಗುವ ಉಚಿತ ಅಕ್ಕಿ ವಿತರಣೆ ಮುಂದಿನ ನವೆಂಬರ್ ವರೆಗೂ ವಿಸ್ತರಿಸಲಾಗುವುದು ಎಂದು ಪ್ರಧಾನಿ ಮೋದಿ ಘೋಷಿಸಿದ್ದಾರೆ.
ಸೋಮವಾರ ಸಂಜೆ ದೇಶವನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಸಕ್ತ ಶತಮಾನದ ಮಹಾಮಾರಿ ಕೋವಿಡ್-19 ವಿರುದ್ಧ ಹೋರಾಟಕ್ಕೆ ಲಸಿಕೀಕರಣವೇ ಮಹಾಮದ್ದು, ದೇಶಾದ್ಯಂತ ಶೇ. 100ರಷ್ಟು ಲಸಿಕೆ ಪೂರೈಕೆಗೆ ತ್ವರಿತಗತಿಯಲ್ಲಿ ಕೆಲಸ ನಿರ್ವಹಿಸಲಾಗುತ್ತಿದೆ ಎಂದರು.
ಕೇಂದ್ರ ಸರ್ಕಾರ ಲಸಿಕಾ ಕಂಪನಿಗಳಿಂದ ಲಸಿಕೆ ಖರೀದಿಸಿ ಎಲ್ಲಾ ರಾಜ್ಯಗಳಿಗೂ ಹಂಚಲಿದೆ. ಜೊತೆಗೆ, ಜೂ 21 ರಿಂದ ಲಸಿಕೆ ನೀಡುವ ನಿಟ್ಟಿನಲ್ಲಿ ಶೀಘ್ರವೇ ಪ್ರತ್ಯೇಕ ಮಾರ್ಗಸೂಚಿ ಪ್ರಕಟಿಸಲಾಗುವುದು. ದೇಶಾದ್ಯಂತ ಉಚಿತ ಲಸಿಕೆ ನೀಡಲಾಗುವುದು. ಜನರು ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಪಡೆಯಲು ಬಯಸಿದರೆ, 150 ರೂಪಾಯಿ ಮಾತ್ರ ಸೇವಾ ಶುಲ್ಕ ಪಾವತಿಸಿ ಪಡೆಯಬಹುದು ಎಂದರು.
ಕಳೆದ ಏಪ್ರಿಲ್ ತಿಂಗಳಲ್ಲಿ ಘೋಷಣೆಯಾದ ಬಡಜನರಿಗೆ ಉಚಿತ ಪಡಿತರ ವಿತರಿಸುವ ಪ್ರಧಾನ ಮಂತ್ರಿ ಗರೀಬ್ ಅನ್ನ ಯೋಜನೆಯನ್ನು ಈ ಬಾರಿಯೂ ದೀಪಾವಳಿವರೆಗೆ ಅಂದರೆ, ನವೆಂಬರ್ ತಿಂಗಳವರೆಗೆ ವಿಸ್ತರಿಸಲಾಗುವುದು. ಈ ಯೋಜನೆಯಡಿ ಬಡಜನರಿಗೆ ಪ್ರತಿ ತಿಂಗಳು ಉಚಿತ ಪಡಿತರ ದೊರೆಯಲಿದೆ ಎಂದರು. ಕಳೆದ ವರ್ಷ ಎಪ್ರಿಲ್, ಮೇ ತಿಂಗಳಿಗಾಗಿ ಆರಂಭಿಸಲಾಗಿದ್ದ ಈ ಯೋಜನೆಯನ್ನು ನಂತರ ವಿಸ್ತರಿಸಲಾಗಿತ್ತು. ಮಹಾಮಾರಿಯ ಸಮಯದಲ್ಲಿ ಸರ್ಕಾರ ಬಡವರ ಜೊತೆಗಿದೆ. ಯಾವುದೇ ಬಡ ಸಹೋದರರು ಹಸಿವಿನಿಂದ ಮಲಗಬಾರದು ಎಂಬುದು ಇದರ ಉದ್ದೇಶ ಎಂದು ಪ್ರಧಾನಿ ಹೇಳಿದರು.
ದೇಶದಲ್ಲಿ ಅತ್ಯಂತ ವೇಗವಾಗಿ ಲಸಿಕೆಗಳು ತಯಾರಾಗುತ್ತಿವೆ. ಇಡೀ ವಿಶ್ವವೇ ನಿಬ್ಬೆರಗಾಗುವಂತೆ ನಮ್ಮ ವಿಜ್ಞಾನಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಮೇಲಿನ ವಿಶ್ವಾಸದಿಂದ 2020ರ ಏಪ್ರಿಲ್ ನಲ್ಲಿ ಸಂಶೋಧನೆ ನಡೆಯುತ್ತಿದ್ದಾಗಲೇ ಲಾಜಿಸ್ಟಿಕ್ ಇತರ ತಯಾರಿ ಆರಂಭಿಸಿದ್ದೆವು. ಅದಕ್ಕಾಗಿ ಲಸಿಕಾ ಟಾಸ್ಕ್ ಫೋರ್ಸ್ ಕೂಡ ರಚಿಸಲಾಗಿತ್ತು. ಸಂಶೋಧನೆಗೆ ಅಗತ್ಯ ಹಣ ನೀಡಲಾಯಿತು ಎಂದರು. ಈಗ ದೇಶದಲ್ಲಿ ಏಳು ಕಂಪನಿ ವಿಭಿನ್ನ ಪ್ರಕಾರದ ಲಸಿಕೆ ತಯಾರಿಸುತ್ತಿವೆ. 3 ಲಸಿಕೆ ಅಡ್ವಾನ್ಸ್ ಹಂತದಲ್ಲಿ ಪ್ರಯೋಗ ನಡೆಯುತ್ತಿದೆ. ಜೊತೆಗೆ, ಜನರಿಗೆ ಅಗತ್ಯ ಪ್ರಮಾಣದ ಬೇರೆ ದೇಶಗಳಿಂದ ಲಸಿಕೆ ಖರೀದಿಸುವ ಪ್ರಕ್ರಿಯೆಗೆ ವೇಗ ನೀಡಲಾಗಿದೆ ಎಂದರು.
ಕೋವಿಡ್-19 ಮೂರನೇ ಅಲೆಯಲ್ಲಿ ಮಕ್ಕಳಿಗೆ ಹಾನಿಯಾಗಲಿದೆ ಎಂಬ ತಜ್ಞರ ಹೇಳಿಕೆಯಿಂದ ಜನರು ಆತಂಕಪಡುವ ಅಗತ್ಯವಿಲ್ಲ. ಅದಕ್ಕಾಗಿಯೇ ಮಕ್ಕಳಿಗಾಗಿ ಲಸಿಕೆ ತಯಾರಿಸಲಾಗುತ್ತಿದ್ದು, ಪ್ರಯೋಗದ ಹಂತದಲ್ಲಿವೆ. ಒಂದು ನೇಸಲ್ ಲಸಿಕೆ ಕುರಿತು ಸಂಶೋಧನೆ ನಡೆಯುತ್ತಿದೆ. ಇದು ಮೂಗಿನಲ್ಲಿ ಸ್ಪ್ರೇ ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ ಇದರಲ್ಲಿ ಸಫಲತೆ ದೊರೆತರೆ ಅದು ಲಸಿಕಾ ಅಭಿಯಾನಕ್ಕೆ ವೇಗ ನೀಡಲಿದೆ ಎಂದರು. ಇಷ್ಟು ಕಡಿಮೆ ಸಮಯದಲ್ಲಿ ಲಸಿಕೆ ತಯಾರಿಸುವುದು ಮಾನವತೆಗೆ ಒಂದು ದೊಡ್ಡ ಕೊಡುಗೆಯಾಗಿದೆ ಎಂದು ಹೇಳಿದರು.
ಇಂತಹ ಸಂಕಷ್ಟದ ಸಂದರ್ಭದಲ್ಲಿ ಲಸಿಕೆ ಕುರಿತು ರಾಜಕೀಯ ಹೇಳಿಕೆಗಳನ್ನು ಯಾರು ಮೆಚ್ಚುವುದಿಲ್ಲ. ಲಸಿಕೆ ಕುರಿತು ಕೆಲವರು ಹುಟ್ಟಿಸುವ ಭ್ರಮೆ, ಅಪಪ್ರಚಾರಗಳು ಚಿಂತೆಗೀಡು ಮಾಡುತ್ತಿವೆ. ಲಸಿಕೆ ಕುರಿತು ದೇಶದಲ್ಲಿ ಕೆಲಸ ಆರಂಭಿಸಿದಾಗಿಲಿನಿಂದ ಆ ಕುರಿತು ಜನರಲ್ಲಿ ಶಂಕೆ ಉತ್ಪನ್ನ ಮಾಡುವ ಹೇಳಿಕೆಗಳನ್ನು ನೀಡಲಾಗುತ್ತಿದೆ. ಲಸಿಕೆ ಹಾಕದಂತೆ ತರ್ಕ ವಿತರ್ಕ ಮಾಡಲಾಯಿತು. ಅದನ್ನು ದೇಶ ನೋಡುತ್ತಿದೆ. ಯುವಕರು ಇಂತಹ ಹೇಳಿಕೆಗಳನ್ನು ನಂಬಬಾರದು. ಜಾಗೃತಿ ಮೂಡಿಸಲು ಸರ್ಕಾರದೊಂದಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.
0 comments:
Post a Comment