ನವದೆಹಲಿ, ಜೂನ್ 21, 2021 (ಕರಾವಳಿ ಟೈಮ್ಸ್) : ಕೊರೋನಾ ಮಹಾಮಾರಿಯ ಆರ್ಭಟಕ್ಕೆ ಇಡೀ ಜಗತ್ತು ಸಿಲುಕಿ ನಲುಗುತ್ತಿದ್ದರೂ ಇಂದು ಯೋಗವು ಭರವಸೆಯ ಆಶಾ ಕಿರಣವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
7ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ದೇಶವನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ ಎರಡು ವರ್ಷಗಳಿಂದ ದೇಶದಲ್ಲಿ ಯಾವುದೇ ಸಭೆ-ಸಮಾರಂಭಗಳು, ಕಾರ್ಯಕ್ರಮಗಳು ನಡೆಯುತ್ತಿಲ್ಲ. ಆದರೂ ಜನರಲ್ಲಿ ಕೊರೋನಾ ಮಧ್ಯೆಯೂ ಯೋಗದ ಬಗ್ಗೆ ಇರುವ ಉತ್ಸಾಹ ಕುಂದಿಲ್ಲ ಎಂದರು.
ಜಗತ್ತಿಗೆ ಬಾಧಿಸಿದ ಮಾರಕ ಕಾಯಿಲೆಗಳು ಜನರಲ್ಲಿ ಯೋಗದ ಬಗ್ಗೆ ಇನ್ನಷ್ಟು ಆಸಕ್ತಿಯನ್ನು ಉಂಟು ಮಾಡಿದೆ. ‘ಸ್ವಾಸ್ಥ್ಯಕ್ಕಾಗಿ ಯೋಗ’ ಎಂಬ ಧ್ಯೇಯ ವಾಕ್ಯದೊಂದಿಗೆ ಇರುವ ಈ ದಿನ ಜನ ಆರೋಗ್ಯವಂತರಾಗಿ ಬಾಳಲಿ ಎಂದು ಹಾರೈಸುತ್ತೇನೆ ಎಂದ ಪ್ರಧಾನಿ ಮೋದಿ ವೈದ್ಯಕೀಯ ವಿಜ್ಞಾನವು ಇಂದು ವೈದ್ಯಕೀಯ ಚಿಕಿತ್ಸೆಯ ಜೊತೆ ಗುಣಪಡಿಸುವ ಪ್ರಕ್ರಿಯೆಗೆ ಪ್ರಾಮುಖ್ಯತೆ ನೀಡುತ್ತದೆ. ಯೋಗವು ಗುಣ ಪಡಿಸುವ ಪ್ರಕ್ರಿಯೆಗೆ ಯೋಗವು ಸಹಕಾರಿಯಾಗಿದೆ. ವೈದ್ಯರು ರೋಗಿಗಳಿಗೆ ಚಿಕಿತ್ಸೆ ನೀಡುವ ಸಂದರ್ಭ ಯೋಗವನ್ನು ರಕ್ಷಾ ಕವಚವಾಗಿ ಬಳಸಿದ್ದಾರೆ. ಕೊರೋನಾ ಚಿಕಿತ್ಸೆಯ ಮಧ್ಯೆ ಇಂದು ಆಸ್ಪತ್ರೆಗಳಲ್ಲಿ ವೈದ್ಯರು, ದಾದಿಯರು ಯೋಗವನ್ನು ಕಲಿಸುತ್ತಾ ಜನರಿಗೆ ವ್ಯಾಯಾಮ ಮಾಡಿಸುತ್ತಿದ್ದಾರೆ ಎಂದು ಹೇಳಿದರು.
ವಿಶ್ವ ಆರೋಗ್ಯ ಸಂಸ್ಥೆಯ ಸಹಯೋಗದೊಂದಿಗೆ ಭಾರತ ಮತ್ತೊಂದು ಪ್ರಮುಖ ಹೆಜ್ಜೆ ಇಟ್ಟಿದ್ದು, ಈಗ ಎಂ-ಯೋಗ ಅಪ್ಲಿಕೇಶನ್ ಲಭ್ಯವಿದೆ. ಇದು ವಿಶ್ವದಾದ್ಯಂತ ವಿವಿಧ ಭಾಷೆಗಳಲ್ಲಿ ಜನರಿಗೆ ಯೋಗ ತರಬೇತಿ ವೀಡಿಯೋಗಳನ್ನು ಪ್ರಸ್ತುತಪಡಿಸುತ್ತಿದೆ. ಇದು ‘ಒಂದು ವಿಶ್ವ, ಒಂದು ಆರೋಗ್ಯ’ ಧ್ಯೇಯ ವಾಕ್ಯದಲ್ಲಿ ನಮಗೆ ಸಹಾಯ ಮಾಡುತ್ತದೆ ಎಂದು ಪ್ರಧಾನಿ ಹೇಳಿದರು.
0 comments:
Post a Comment