ಬೆಂಗಳೂರು, ಜೂನ್ 15, 2021 (ಕರಾವಳಿ ಟೈಮ್ಸ್) : ದ್ವಿತೀಯ ಪಿಯುಸಿ ಅನುತ್ತೀರ್ಣರಾಗಿ ಪುನಃ ಪರೀಕ್ಷೆ ತೆಗೆದುಕೊಂಡಿರುವ 1 ಲಕ್ಷ ಪುನರಾವರ್ತಿತ ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ ನಡೆಸುವುದಾದರೆ, ಮೊದಲ ಬಾರಿಗೆ ಪರೀಕ್ಷೆ ಬರೆಯುವವರಿಗೆ ಪರೀಕ್ಷೆ ನಡೆಸಲು ಏಕೆ ಸಾಧ್ಯವಿಲ್ಲ ಎಂದು ರಾಜ್ಯ ಹೈಕೋರ್ಟ್ ರಾಜ್ಯ ಸರಕಾರಕ್ಕೆ ಪ್ರಶ್ನಿಸಿದ್ದು, ಈ ಬಗ್ಗೆ ಸರಕಾರ ತನ್ನ ನಿಲುವು ಸ್ಪಷ್ಟಪಡಿಸುವಂತೆ ನೋಟೀಸ್ ಜಾರಿಗೊಳಿಸಿದೆ.
ಪಿಯುಸಿಯಲ್ಲಿ ಅನುತ್ತೀರ್ಣರಾಗಿ ಪುನಃ ಪರೀಕ್ಷೆ ತೆಗೆದುಕೊಂಡಿರುವ ಪುನರಾವರ್ತಿತ ವಿದ್ಯಾರ್ಥಿಗಳಿಗೆ ಮಾತ್ರ ದ್ವಿತೀಯ ಪಿಯುಸಿ ಪರೀಕ್ಷೆ ನಡೆಸುವ ನಿರ್ಧಾರ ಪ್ರಶ್ನಿಸಿ ಸಲ್ಲಿಕೆಯಾದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಬಿ ವಿ ನಾಗರತ್ನ ನೇತೃತ್ವದ ವಿಭಾಗೀಯ ಪೀಠ ಈ ನೋಟೀಸು ಜಾರಿಗೊಳಿಸಿದೆ.
ಮೊದಲ ಬಾರಿಗೆ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳನ್ನು ಪ್ರಥಮ ಪಿಯುಸಿ ಅಂಕ ಮಾನದಂಡವಾಗಿ ತೇರ್ಗಡೆಗೊಳಿಸುವ ನಿರ್ಧಾರ ಪುನರಾವರ್ತಿತ ವಿದ್ಯಾರ್ಥಿಗಳಿಗೂ ಅನ್ವಯವಾಗುವುದಿಲ್ಲವೇ ಎಂಬುದನ್ನು ಪದವಿಪೂರ್ವ ಶಿಕ್ಷಣ ಇಲಾಖೆ ಜೂನ್ 17ರೊಳಗೆ ತನ್ನ ನಿಲುವು ಸ್ಪಷ್ಟಪಡಿಸುವಂತೆ ಸೂಚಿಸಿರುವ ಹೈಕೋರ್ಟ್ ವಿಚಾರಣೆ ಮುಂದೂಡಿದೆ.
ಮೊದಲ ಬಾರಿಗೆ ಪರೀಕ್ಷೆ ಬರೆಯುವವರಿಗೆ ಕೋವಿಡ್ ಕಾರಣಕ್ಕೆ ಪರೀಕ್ಷೆ ನಡೆಸದೆ ರದ್ದುಗೊಳಿಸಿ, ಪುನರಾವರ್ತಿತ ವಿದ್ಯಾರ್ಥಿಗಳು ಮಾತ್ರ ಪರೀಕ್ಷೆಗೆ ಹಾಜರಾಗಬೇಕು ಎಂಬುದು ತಾರತಮ್ಯ ಆಗಲಿದೆ. ಪ್ರಥಮ ಪಿಯುಸಿ ಅಂಕಗಳನ್ನು ಆಧರಿಸಿ ಅವರನ್ನೂ ಮುಂದಿನ ತರಗತಿಗೆ ಪ್ರವೇಶ ಪಡೆಯಲು ಅವಕಾಶ ನೀಡಿ ಸಮಾನತೆ ಕಾಪಾಡಬೇಕು ಎಂದು ಕೋರಿ ಜ್ಞಾನಮಂದಿರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಸ್.ವಿ. ಶ್ರೀನಿವಾಸಗೌಡ ಅರ್ಜಿ ರಾಜ್ಯ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು.
0 comments:
Post a Comment