ಬಂಟ್ವಾಳ, ಜೂನ್ 18, 2021 (ಕರಾವಳಿ ಟೈಮ್ಸ್) : ಕೋವಿಡ್ ಮಹಾಮಾರಿಯ ವಿರುದ್ದದ ಹೋರಾಟದಲ್ಲಿ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುತ್ತಿರುವ ಪತ್ರಕರ್ತರು ನಿಜವಾದ ಕೋವಿಡ್ ವಾರಿಯರ್ಸ್ ಗಳಾಗಿದ್ದು, ಅವರ ಸೇವೆ ನಿಜಕ್ಕೂ ಶ್ಲಾಘನೀಯವಾಗಿದ್ದು, ಅವರ ಸೇವೆಯನ್ನು ಸರಕಾರ ಹಾಗೂ ಸಂಘ-ಸಂಸ್ಥೆಗಳು ಆದ್ಯತೆಯ ಮೇರೆಗೆ ಪರಿಗಣಿಸಬೇಕು ಎಂದು ಎಸ್ ಸಿ ಡಿ ಸಿ ಸಿ ಬ್ಯಾಂಕ್ ಹಿರಿಯ ನಿರ್ದೇಶಕ ಟಿ ಜಿ ರಾಜಾರಾಮ ಭಟ್ ಅಭಿಪ್ರಾಯಪಟ್ಟರು.
ಬಿ ಸಿ ರೋಡಿನಲ್ಲಿ ಎಸ್ ಸಿ ಡಿ ಸಿ ಸಿ ಬ್ಯಾಂಕ್ ವತಿಯಿಂದ ಪತ್ರಕರ್ತರಿಗೆ ನೀಡುವ ಆಹಾರ ಕಿಟ್ ವಿತರಿಸಿ ಮಾತನಾಡಿದ ಅವರು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ ಎಂ ಎನ್ ರಾಜೇಂದ್ರ ಕುಮಾರ್ ನೇತೃತ್ವದಲ್ಲಿ ನೀಡುತ್ತಿರುವ ಕೋವಿಡ್ ಕಿಟ್ ಬ್ಯಾಂಕ್ ಪರವಾಗಿ ಪತ್ರಕರ್ತರಿಗೆ ಸಣ್ಣ ಸಹಕಾರವಾಗಿದೆ ಎಂದರು.
ಕೋವಿಡ್ ಮಾರಕ ರೋಗಕ್ಕೆ ಧೈರ್ಯವೇ ಮೊದಲ ಔಷಧಿಯಾಗಿದ್ದು, ಯಾವುದೇ ಕಾರಣಕ್ಕೂ ದೃಢಿಗೆಡದೆ ಚಿಕಿತ್ಸೆಗೆ ಸ್ಪಂದಿಸಿದರೆ ಎಲ್ಲವೂ ಸರಿ ಹೋಗುತ್ತದೆ ಎಂದ ಅವರು ಕೋವಿಡ್ ಮೊದಲ ಅಲೆಯಲ್ಲಿ ಶ್ವಾಸಕೋಶಕ್ಕೆ ಸಮಸ್ಯೆಯಾದರೆ, 2ನೇ ಅಲೆಯಲ್ಲಿ ನರಗಳ ರಕ್ತ ಹೆಪ್ಪುಗಟ್ಟುವಿಕೆ ಮೂಲಕ ಹೃದಯಾಘಾತ ಕಾರಣದಿಂದ ಹೆಚ್ಚಿನ ಮರಣ ಸಂಭವಿಸಿದೆ ಎಂದರು.
ರೋಗದ ಬಗ್ಗೆ ನಿರ್ಲಕ್ಷ್ಯ ಹಾಗೂ ತಾತ್ಸಾರ ಧೋರಣೆ ತಾಳದಂತೆ ಜನರನ್ನು ನಿರಂತರವಾಗಿ ಎಚ್ಚರಿಸುವ ದೊಡ್ಡ ಹೊಣೆಯನ್ನು ಪತ್ರಕರ್ತರು ನಿಭಾಯಿಸಿದ್ದಾರೆ ಎಂದವರು ಶ್ಲಾಘಿಸಿದರು.
ಹಿರಿಯ ಪತ್ರಕರ್ತರಾದ ರಾಜಾ ಬಂಟ್ವಾಳ, ಜಯಾನಂದ ಪೆರಾಜೆ, ಹರೀಶ್ ಮಾಂಬಾಡಿ ಹಾಗೂ ಮೋಹನ್ ಕೆ ಶ್ರೀಯಾನ್ ಅವರಿಗೆ ಸಾಂಕೇತಿಕವಾಗಿ ಕಿಟ್ ಹಸ್ತಾಂತರಿಸಲಾಯಿತು.
ಈ ಸಂದರ್ಭ ಜಿ ಪಂ ಸದಸ್ಯರುಗಳಾದ ಬಿ ಪದ್ಮಶೇಖರ ಜೈನ್, ರವೀಂದ್ರ ಕಂಬಳಿ, ಡಿಸಿಸಿ ಬ್ಯಾಂಕ್ ವಸೂಲಾತಿ ದಳದ ಸಂತೋಷ್ ಶೆಟ್ಟಿ, ಬಿ ಸಿ ರೋಡು ಶಾಖಾ ವ್ಯವಸ್ಥಾಪಕ ಶಿವಪ್ರಸಾದ್, ಬಂಟ್ವಾಳ ವಲಯ ಮೇಲ್ವಿಚಾರಕ ಕೇಶವ ಕಿಣಿ ಎಚ್, ವಿಟ್ಲ ವಲಯ ಮೇಲ್ವಿಚಾರಕ ಯೋಗೀಶ್ ಎಚ್ ಮೊದಲಾದವರು ಉಪಸ್ಥಿತರಿದ್ದರು.
0 comments:
Post a Comment