ಮಂಗಳೂರು, ಜೂನ್ 11, 2021 (ಕರಾವಳಿ ಟೈಮ್ಸ್) : ಶಾಲಾ-ಕಾಲೇಜುಗಳನ್ನು ತೆರೆಯುವಂತಿಲ್ಲ ಎಂದು ಸರಕಾರದ ಸ್ಷಷ್ಟ ಆದೇಶ ಇದ್ದರೂ ಜಿಲ್ಲೆಯ ಕೆಲ ಖಾಸಗಿ ಶಾಲಾ-ಕಾಲೇಜು ಮುಖ್ಯಸ್ಥರು ಪೋಷಕರಿಗೆ ಕರೆ ಮಾಡಿ ಬಾಕಿ ಶುಲ್ಕದ ಮೊತ್ತವನ್ನು ಒಂದೇ ಕಂತಿನಲ್ಲಿ ಪಾವತಿಸುವಂತೆ ಒತ್ತಾಯಿಸುವುದು, ಶುಲ್ಕ ಪಾವತಿಸದೆ ಇದ್ದಲ್ಲಿ ಆನ್ ಲೈನ್ ತರಗತಿಯಂತಹ ಸೌಲಭ್ಯಗಳಿಗೆ ಕಡಿವಾಣ ಹಾಕುವ ಬೆದರಿಕೆ ಹಾಕುವುದು, ವಿದ್ಯಾರ್ಥಿ ಪೋಷಕರು ವರ್ಗಾವಣಾ ಪ್ರಮಾಣ ಪತ್ರ (ಟಿಸಿ) ಕ್ಕೆ ಅಪೇಕ್ಷೆ ಪಟ್ಟರೆ ನೀಡದೆ ಇರುವುದು ಹಾಗೂ ವಿದ್ಯಾರ್ಥಿ ಪೋಷಕರನ್ನು ಸಂಸ್ಥೆಗೆ ಕರೆಸಿ ಲೇಖನ-ಸಾಮಾಗ್ರಿಗಳನ್ನು ನಿರ್ದಿಷ್ಟ ಅಂಗಡಿಗಳಲ್ಲೇ ಖರೀದಿಸುವಂತೆ ಒತ್ತಾಯಪಡಿಸುವುದು ಮೊದಲಾದ ಪೀಡಣಾ ವರ್ತನೆಗಳ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಹಾಗೂ ಜಿಲ್ಲಾಡಳಿತಕ್ಕೆ ವಿದ್ಯಾರ್ಥಿ ಪೋಷಕರು ದೂರಿಕೊಂಡಿದ್ದಾರೆ.
ಕೊರೋನಾ ವೈರಸ್ ಹಾಗೂ ಲಾಕ್ ಡೌನ್ ಹಿನ್ನಲೆಯಲ್ಲಿ ವಿದ್ಯಾರ್ಥಿ ಪೋಷಕರು ಕೆಲಸವಿಲ್ಲದೆ ಆರ್ಥಿಕ ಸಂಕಷ್ಟದಲ್ಲಿರುವುದು ಗೊತ್ತಿರುವ ವಿಚಾರವಾಗಿರುವುದರಿಂದ ಮುಂದಿನ ದಿನಗಳಲ್ಲಿ ಯಾವುದೇ ವಿದ್ಯಾರ್ಥಿ ಪೋಷಕರನ್ನು ಪೀಡಿಸಬಾರದಾಗಿ ಸೂಚಿಸಿರುವ ಜಿಲ್ಲಾಧಿಕಾರಿ ಡಾ ರಾಜೇಂದ್ರ ಕೆ ವಿ ಅವರು ಪೀಡನಾ ಕ್ರಮ ಮುಂದುವರಿಸಿದರೆ ಅಂತಹ ಖಾಸಗಿ ಶಿಕ್ಷಣ ಸಂಸ್ಥೆಗಳ ವಿರುದ್ದ ಶಿಕ್ಷಣ ಕಾಯ್ದೆಯ ಪ್ರಕಾರ ಕಠಿಣ ಕ್ರಮ ಜರುಗಿಸುವುದಾಗಿ ಎಚ್ಚರಿಸಿದ್ದಾರೆ.
ಈ ಬಗ್ಗೆ ದೂರುಗಳಿದ್ದಲ್ಲಿ ವಿದ್ಯಾರ್ಥಿ ಪೋಷಕರು ಸ್ವ ವಿವರಗಳೊಂದಿಗೆ "ಉಪ ನಿರ್ದೇಶಕರು (ಆಡಳಿತ), ಸಾರ್ವಜನಿಕ ಶಿಕ್ಷಣ ಇಲಾಖೆ ddpi.edu.karmng.nic.in" ಹಾಗೂ ಉಪ ನಿರ್ದೇಶಕರು, ಪದವಿಪೂರ್ವ ಶಿಕ್ಷಣ ಇಲಾಖೆ ddss.pue@gmail.com" ವಿಳಾಸಕ್ಕೆ ನೀಡುವಂತೆ ಡೀಸಿ ರಾಜೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
0 comments:
Post a Comment