ಬಂಟ್ವಾಳ, ಜೂನ್ 04, 2021 (ಕರಾವಳಿ ಟೈಮ್ಸ್) : ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಅತ್ಯಂತ ಕಡಿಮೆ ಕೋವಿಡ್ ಪ್ರಕರಣಗಳು ಇರುವುದು 24ನೇ ವಾರ್ಡಿನಲ್ಲಿ. ಇದಕ್ಕೆ ಕಾರಣ ಇಲ್ಲಿನ ಜನರ ಸಹಕಾರ ಹಾಗೂ ವಿವಿಧ ಇಲಾಖಾಧಿಕಾರಿ ಹಾಗೂ ಸಿಬ್ಬಂದಿಗಳ ಸ್ಪಂದನೆ ಎಂದು ವಾರ್ಡ್ ಟಾಸ್ಕ್ ಫೋರ್ಸ್ ಸಮಿತಿ ಅಧ್ಯಕ್ಷ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ ಶ್ಲಾಘಿಸಿದರು.
ಬೋಗೋಡಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಬೆಳಿಗ್ಗೆ ನಡೆದ ಕೋವಿಡ್-19 ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಬಂಟ್ವಾಳ ಪುರಸಭೆ ವ್ಯಾಪ್ತಿಯ ಪಾಣೆಮಂಗಳೂರು 24ನೇ ವಾರ್ಡ್ ನ ಟಾಸ್ಕ್ ಫೋರ್ಸ್ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ವಾರ್ಡಿನಲ್ಲಿ ಈವರೆಗೆ ಕೇವಲ 7 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಈ ಪೈಕಿ 4 ಮಂದಿ ಗುಣಮುಖರಾದರೆ, ಇಬ್ಬರು ಮನೆಯ್ಲಲೇ ಐಸೋಲೇಶನ್ ಒಳಗಾಗಿದ್ದು, ಇನ್ನೋರ್ವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟಾರೆ ಜನರ ಹಾಗೂ ಅಧಿಕಾರಿಗಳ ಸಹಕಾರ ಹಾಗೂ ದೇವರ ದಯೆಯಿಂದಾಗಿ ವಾರ್ಡಿನಲ್ಲಿ ಪೂರಕ ಸನ್ನಿವೇಶ ಇದೆ ಎಂದು ಸಂತಸ ವ್ಯಕ್ತಪಡಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಬಂಟ್ವಾಳ ಪುರಸಭಾಧ್ಯಕ್ಷ ಮುಹಮ್ಮದ್ ಶರೀಫ್ ಶಾಂತಿಅಂಗಡಿ ಮಾತನಾಡಿ, ಪುರಸಭಾ ವ್ಯಾಪ್ತಿಯಲ್ಲಿ ನಿರಂತರವಾಗಿ ಕೋವಿಡ್ ನಿಯಂತ್ರಣದ ಬಗ್ಗೆ ಪ್ರಗತಿ ಪರಿಶೀಲನೆ ಸಭೆಗಳನ್ನು ನಡೆಸಲಾಗುತ್ತಿದೆ. ಸೋಂಕು ನಿಯಂತ್ರಣಕ್ಕಾಗಿ ಪುರಸಭಾಡಳಿತ ಕಠಿಣ ಶ್ರಮಪಡುತ್ತಿದ್ದು, ಪುರವಾಸಿಗಳ ಪೂರಕ ಸ್ಪಂದನೆ ಅತೀ ಅಗತ್ಯವಾಗಿದೆ ಎಂದರಲ್ಲದೆ ಸೋಂಕಿತರ ಮೇಲೆ ತೀವ್ರ ನಿಗಾ ಇಡುವುದರ ಜೊತೆಗೆ ಸೋಂಕಿತರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕ ಹೊಂದಿದವರ ಮೇಲೂ ಗಮನ ಹರಿಸಿ ಅವರ ಕೋವಿಡ್ ಪರೀಕ್ಷೆ ಹಾಗೂ ಆರೋಗ್ಯ ತಪಾಸಣೆಗೆ ಆರೋಗ್ಯ ಇಲಾಖಾ ಸಿಬ್ಬಂದಿಗಳು ಹೆಚ್ಚಿನ ಮುತುವರ್ಜಿ ವಹಿಸಿದಾಗ ಸೋಂಕು ತಡೆ ಪರಿಣಾಮಕಾರಿಯಾಗಿ ಮಾಡಬಹುದು ಎಂದು ಅಭಿಪ್ರಾಯಪಟ್ಟರು.
ಸಭೆಯಲ್ಲಿ ಪುರಸಭಾ ಆರೋಗ್ಯಾಧಿಕಾರಿ ಜಯ ಶಂಕರ್, ಬಂಟ್ವಾಳ ನಗರ ಠಾಣಾ ಎಎಸ್ಸೈ ದೇವಪ್ಪ, ಆರೋಗ್ಯ ಕಾರ್ಯಕರ್ತೆ ನಮಿತಾ, ಆಶಾ ಕಾರ್ಯಕರ್ತೆಯರಾದ ಹೇಮಲತಾ, ಜ್ಯೋತಿ ಲಕ್ಷ್ಮೀ, ಶಿಕ್ಷಕಿಯರಾದ ಪ್ರೇಮಾ, ವಿನ್ನಿ ಫ್ರೆಡ್, ಗುಡ್ಡೆಅಂಗಡಿ ನೂರುದ್ದೀನ್ ಜುಮಾ ಮಸೀದಿ ಅಧ್ಯಕ್ಷ ಎಸ್ ಮುಹಮ್ಮದ್, ಆಲಡ್ಕ ಮುಹಿಯುದ್ದೀನ್ ಜುಮಾ ಮಸೀದಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಮೋನು, ಪ್ರಮುಖರಾದ ಮುಸ್ತಫಾ ಬೋಗೋಡಿ, ಶರೀಫ್ ಭೂಯಾ, ಮಜೀದ್ ಬೋಗೋಡಿ, ಝಕರಿಯಾ ಬೋಗೋಡಿ, ಸಿರಾಜ್ ಬಂಗ್ಲೆಗುಡ್ಡೆ, ಹಬೀಬ್ ಬಂಗ್ಲೆಗುಡ್ಡೆ ಮೊದಲಾದವರು ಭಾಗವಹಿಸಿ ವಿವಿಧ ಸಲಹೆ ಸೂಚನೆಗಳನ್ನು ನೀಡಿದರು.
ಸಭೆಗೆ ಬಂಟ್ವಾಳ ಪುರಸಭಾ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಅವರು ಗೈರು ಹಾಜರಾಗಿದ್ದು, ಮುಖ್ಯಾಧಿಕಾರಿಯೇ ಸಭೆಗೆ ಮಹತ್ವ ನೀಡದ ಬಗ್ಗೆ ಸ್ಥಳೀಯರಿಂದ ಅಸಮಾಧಾನದ ಮಾತುಗಳು ಕೇಳಿ ಬಂತು.
0 comments:
Post a Comment