ಬೆಳಗಾವಿ, ಜೂನ್ 04, 2021 (ಕರಾವಳಿ ಟೈಮ್ಸ್) : ಕೋವಿಡ್ 2ನೇ ಅಲೆ ಹಾಗೂ 3ನೇ ಅಲೆ ನಡುವಿನ ವಿಷಮ ಪರಿಸ್ಥಿತಿ ಸುಧಾರಣೆಯಾಗಿ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಇಲ್ಲ ಎಂಬ ಸ್ಪಷ್ಟವಾದ ಸನ್ನಿವೇಶ ನಿರ್ಮಾಣವಾದರೆ ಮಾತ್ರ ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಇಂದು ಬೆಳಗಾವಿಯಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಶಿಕ್ಷಣ ಸಚಿವ ಸುರೇಶ್ ಕುಮಾರ್ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಸರಳ ವಿಧಾನದ ಮೂಲಕ ಪರೀಕ್ಷೆ ನಡೆಸಲಾಗುವುದು ಎಂಬ ಹೇಳಿಕೆ ನೀಡಿದ ಕೆಲವೇ ಹೊತ್ತಿನಲ್ಲಿ ಸಿಎಂ ಭಿನ್ನ ಹೇಳಿಕೆ ನೀಡಿದ್ದು ರಾಜ್ಯದಲ್ಲಿ ಇನ್ನೂ ಎಸ್ಸೆಸ್ಸೆಲ್ಸಿ ಪರೀಕ್ಷೆ ಬಗ್ಗೆ ಗೊಂದಲ ಜೀವಂತವಾಗಿರುವಂತೆ ಮಾಡಿದೆ.
ಕೋವಿಡ್ ನಿರ್ವಹಣಾ ಕುರಿತಂತೆ ಸಭೆ ನಡೆಸಲು ಶುಕ್ರವಾರ ಬೆಳಿಗ್ಗೆ ಬೆಳಗಾವಿಗೆ ಆಗಮಿಸಿದ ಮುಖ್ಯಮಂತ್ರಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಯಿಸಿ ಈ ಬಗ್ಗೆ ಈಗಲೇ ಏನೂ ಹೇಳುವಂತಿಲ್ಲ. ಇನ್ನು ಒಂದೂವರೆ-ಎರಡು ತಿಂಗಳಲ್ಲಿ ಕೋವಿಡ್ ಸೋಂಕು ವಾತಾವರಣದಲ್ಲಿ ಸುಧಾರಣೆ ಕಂಡು ಬಂದರೆ ಒಂದು ಅಥವಾ ಎರಡು ದಿನಕ್ಕೆ ಸೀಮಿತಗೊಳಿಸಿ ಪರೀಕ್ಷೆ ನಡೆಸುವ ತೀರ್ಮಾನ ಇದೀಗ ಮಾಡಲಾಗಿದ್ದು, ಪರಿಸ್ಥಿತಿ ನೋಡಿಕೊಂಡು ಮುಂದಿನ ದಿನಗಳಲ್ಲಿ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು.
ಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವುದು ಸರಕಾರದ ಜವಾಬ್ದಾರಿಯಾಗಿದ್ದು, ಈ ನಿಟ್ಟಿನಲ್ಲಿ ಸರಕಾರ ದಿಟ್ಟ ಹೆಜ್ಜೆ ಇಡಲಿದೆ. ಬೆಂಗಳೂರಿಗೆ ತೆರಳಿ ಶಿಕ್ಷಣ ಸಚಿವರ ಜೊತೆ ಮಾತುಕತೆ ನಡೆಸಿ ಬಳಿಕ ಸ್ಪಷ್ಟ ತೀರ್ಮಾನಕ್ಕೆ ಬರಲಾಗುವುದು ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ.
ಇಂದು ಬೆಳಗ್ಗೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ರವರು, ಕೋವಿಡ್ ಸಾಂಕ್ರಾಮಿಕ ನ್ನೆಲೆ ವಿದ್ಯಾರ್ಥಿಗಳ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಈ ವರ್ಷ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ರದ್ದುಗೊಳಿಸಿದ್ದು ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಸೂಕ್ತ ದಿನಾಂಕ ನಿಗದಿ ಪಡಿಸಿ ಎರಡು ದಿನ ಸರಳ ಪರೀಕ್ಷೆ ನಡೆಸುವುದಾಗಿ ಘೋಷಿಸಿದ್ದಾರೆ.
ಕೋವಿಡ್-19ರ ಪರಿಸ್ಥಿತಿಯಲ್ಲಿ 6 ವಿಷಯಗಳಿಗೆ ಸುದೀರ್ಘ ಅವಧಿಗೆ ಪರೀಕ್ಷೆಗಳನ್ನು ನಡೆಸಿದಲ್ಲಿ 8.76 ಲಕ್ಷ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ 06 ದಿನಗಳು ಬರುವುದು ಕಷ್ಟ ಸಾಧ್ಯವಾಗಿರುತ್ತದೆ. ಹೀಗಾಗಿ ಎಸ್ಎಸ್ಎಲ್ಸಿಯಲ್ಲಿ ಮುಖ್ಯ ವಿಷಯಗಳಾದ ಭಾಗ- 1 ಗಣಿತ, ಭಾಗ- 2 ವಿಜ್ಞಾನ ಮತ್ತು ಭಾಗ- 3 ಸಮಾಜ ವಿಜ್ಞಾನ ಪರೀಕ್ಷೆಯನ್ನು ನೀಡಲಾಗುತ್ತದೆ. ಪರೀಕ್ಷಾ ಸಮಯವನ್ನು ಬೆಳಿಗ್ಗೆ 10:30 ರಿಂದ 01:30 ಗಂಟೆಯವರೆಗೆ ನಿಗದಿಪಡಿಸಿ, ಒಟ್ಟು 3 ಗಂಟೆಯ ಕಾಲಾವಕಾಶ ನೀಡಲಾಗುವುದಾಗಿ ಹೇಳಿದ್ದಾರೆ.
ಒಟ್ಟು 3 ಭಾಷಾ ವಿಷಯಗಳಾದ ಭಾಗ -1 ಪ್ರಥಮ ಭಾಷೆ, ಭಾಗ- 2 ದ್ವಿತೀಯ ಭಾಷೆ ಮತ್ತು ಭಾಗ -3ರಲ್ಲಿ ತೃತೀಯ ಭಾಷೆ ಪರೀಕ್ಷೆಯನ್ನು ನೀಡಲಾಗುತ್ತಿದ್ದು, ಇದಕ್ಕೆ 10:30 ರಿಂದ 01:30 ಗಂಟೆಯವರೆಗೆ ನಿಗದಿಪಡಿಸಿ, ಒಟ್ಟು 3 ಗಂಟೆಯ ಕಾಲಾವಕಾಶ ನೀಡಲಾಗುವುದಾಗಿ ತಿಳಿಸಿದ್ದಾರೆ.
0 comments:
Post a Comment