ಮೃತ ಅಬೂಬಕ್ಕರ್ ಸಿದ್ದೀಕ್ |
ಬಂಟ್ವಾಳ, ಜೂನ್ 02, 2021 (ಕರಾವಳಿ ಟೈಮ್ಸ್) : ತಾಲೂಕಿನ ತುಂಬೆಯ ಪ್ರತಿಷ್ಠಿತ ಬಿ ಎ ಟಿಂಬರ್ ಹಾಗೂ ಫ್ಲೈವುಡ್ ಫ್ಯಾಕ್ಟರಿಯಲ್ಲಿ ಬುಧವಾರ ಮಾಡಿಗೆ ತಗಡು ಶೀಟು ಅಳವಡಿಸುವ ವೇಳೆ ಸಿಮೆಂಟ್ ಶೀಟ್ ತುಂಡಾಗಿ ಇಬ್ಬರು ಕಾರ್ಮಿಕರು ಕೆಳಗೆ ಬಿದ್ದ ಪರಿಣಾಮ ಪಾಣೆಮಂಗಳೂರು ಸಮೀಪದ ನಂದಾವರ ಮಸೀದಿ ಬಳಿ ನಿವಾಸಿ ಅಬೂಬಕ್ಕರ್ ಸಿದ್ದೀಕ್ (65) ಮೃತಪಟ್ಟಿದ್ದು, ಇನ್ನೋರ್ವ ಕಾರ್ಮಿಕ ನಂದಾವರ ನಿವಾಸಿ ಇಬ್ರಾಹಿಂ ಖಲೀಲ್ (25) ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆಗೆ ಫ್ಯಾಕ್ಟರಿ ಮಾಲಕ ಅಬ್ದುಲ್ ಸಲಾಂ ಅವರ ನಿರ್ಲಕ್ಷ್ಯ ಹಾಗೂ ಕಾರ್ಮಿಕ ಬಗ್ಗೆ ಸುರಕ್ಷತಾ ಕ್ರಮಕೈಗೊಳ್ಳದೇ ಇರುವುದೇ ಕಾರಣ ಎಂದು ಆರೋಪಿಸಿ ಗಾಯಾಳು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ತುಂಬೆಯ ಫ್ಯಾಕ್ಟರಿಯಲ್ಲಿ ಐದು ಮಂದಿ ಕಾರ್ಮಿಕರು ಕಳೆದ ಐದಾರು ದಿನಗಳಿಂದ ಸಿಮೆಂಟ್ ಶೀಟ್ ಅಳವಡಿಸುವ ಕಾಮಗಾರಿ ನಡೆಸುತ್ತಿದ್ದರು. ಬುಧವಾರ ಬೆಳಿಗ್ಗೆಯೂ ಕೆಲಸ ಆರಂಭಿಸಿದ್ದರು. ಕೆಲಸ ನಿರ್ವಹಿಸುತ್ತಿದ್ದ ವೇಳೆ ಅಬೂಬಕ್ಕರ್ ಸಿದ್ದೀಕ್ ಅವರು ತಗಡು ಶೀಟಿಗೆ ಕಾಲಿಟ್ಟಾಗ ಅದು ಹಳೆಯದಾಗಿದ್ದ ಹಿನ್ನಲೆಯಲ್ಲಿ ಅದು ತುಂಡಾಗಿ ಆಯತಪ್ಪಿ ಸಿದ್ದೀಕ್ ಹಾಗೂ ಖಲೀಲ್ ಕೆಳಕ್ಕೆ ಬಿದ್ದಿದ್ದಾರೆ ಎನ್ನಲಾಗಿದೆ. ಈ ಸಂದರ್ಭ ತಲೆಯ ಹಿಂಭಾಗಕ್ಕೆ ಪೆಟ್ಟು ಬಿದ್ದ ಹಿನ್ನಲೆಯಲ್ಲಿ ಗಂಭೀರ ಗಾಯಗೊಂಡ ಸಿದ್ದೀಕ್ ಅವರನ್ನು ತುಂಬೆ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಖಲೀಲ್ ಅವರ ಕೈಗೆ ಗಾಯವಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಗೆ ಹಳೆಯ ತಗಡು ತುಂಡಾಗಿರುವುದೇ ಕಾರಣ. ಫ್ಯಾಕ್ಟರಿ ಮಾಲಕ ಸಲಾಂ ಅವರು ಕಾರ್ಮಿಕರ ಬಗ್ಗೆ ನಿರ್ಲಕ್ಷ್ಯ ಹಾಗೂ ಯಾವುದೇ ಸುರಕ್ಷತ ಕ್ರಮ ಕೈಗೊಳ್ಳದೆ ಇರುವುದರಿಂದ ಅವಘಡ ಸಂಭವಿಸಿದೆ. ಘಟನೆಗೆ ಕಾರಣರಾದ ಮಾಲಕರ ವಿರುದ್ದ ಕ್ರಮ ಜರುಗಿಸಬೇಕು ಎಂದು ಗಾಯಾಳು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಮೃತ ಅಬೂಬಕ್ಕರ್ ಸಿದ್ದೀಕ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಯ ಬಳಿಕ ಬುಧವಾರ ತಡ ರಾತ್ರಿ ವೇಳೆ ಕುಟುಂಬಿಕರಿಗೆ ಹಸ್ತಾಂತರಿಸಲಾಗಿದ್ದು, ನಂದಾವರ ಕೇಂದ್ರ ಜುಮಾ ಮಸೀದಿಯ ದಫನ ಭೂಮಿಯಲ್ಲಿ ದಫನ ಕಾರ್ಯ ನೆರವೇರಿಸಲಾಗಿದೆ.
ಮೃತರು ಆರು ಮಂದಿ ಪುತ್ರಿಯರು, ಮೂವರು ಪುತ್ರರ ಸಹಿತ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಇವರ ಪತ್ನಿ ಎರಡು ವರ್ಷಗಳ ಹಿಂದೆಯೇ ಮೃತಪಟ್ಟಿದ್ದು, ಓರ್ವ ಪುತ್ರ ಕೆಲ ವರ್ಷಗಳ ಹಿಂದೆ ಅರ್ಕುಳದಲ್ಲಿ ಕಂಟೈನರ್-ಅಟೋ ರಿಕ್ಷಾ ನಡುವೆ ನಡೆದ ಅಪಘಾತದಲ್ಲಿ ಮೃತಪಟ್ಟಿರುತ್ತಾರೆ.
0 comments:
Post a Comment