ಮಂಗಳೂರು, ಜೂನ್ 08, 2021 (ಕರಾವಳಿ ಟೈಮ್ಸ್) : ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮುಡಿಪಿ ಭಾಗದಲ್ಲಿ ನಡೆಯುತ್ತಿರುವ ಪೈಪ್ ಲೈನ್ ಕಾಮಗಾರಿ ಸ್ಥಳದಲ್ಲಿ ಕಾಮಗಾರಿ ಪರಿಶೀಲನೆ ನಡೆಸುತ್ತಿದ್ದ ಕರ್ನಾಟಕ ನೀರು ಸರಬರಾಜು ಹಾಗೂ ಒಳ ಚರಂಡಿ ಮಂಡಳಿಯ ಇಂಜಿನಿಯರ್ ಶೋಭಾ ಲಕ್ಷ್ಮಿ ಅವರನ್ನು ಕರ್ತವ್ಯದ ಅವಧಿಯಲ್ಲೇ ವಾಚಾಮಗೋಚರವಾಗಿ ಅತ್ಯಂತ ಹೀನವಾಗಿ ನಿಂದಿಸಿ ಮಾತಿನ ರಂಪಾಟ ನಡೆಸಿದ ಬಿಜೆಪಿ ಮುಖಂಡ ಎನ್ನಲಾಗಿರುವ ವಕೀಲ ಅಝ್ಗರ್ ಮುಡಿಪು ಎಂಬಾತನ ರಂಪಾಟದ ವೀಡಿಯೋ ಇದೀಗ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದ್ದು, ಘಟನೆಯ ಬಗ್ಗೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರಲ್ಲದೆ ಅಧಿಕಾರಿಗೆ ಕರ್ತವ್ಯದ ಅವಧಿಯಲ್ಲಿ ತುಚ್ಛ ಭಾಷೆಯಲ್ಲಿ ನಿಂದಿಸಿದ ಆರೋಪಿ ವಿರುದ್ದ ಕಠಿಣ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ.
ಈ ಇನ್ಫೋಸಿಸ್ ಸಂಸ್ಥೆ ಕಾಮಗಾರಿ ನಡೆಸುವ ಸಂದರ್ಭ ಚರಂಡಿ ಹಾಗೂ ಡ್ರೈನೇಜ್ ನಡೆಸುವ ಬಗ್ಗೆ ಭರವಸೆ ನೀಡಿತ್ತು ಎನ್ನಲಾಗಿದ್ದು, ಇದೇ ವಿಚಾರಕ್ಕೆ ಸಂಬಂಧಿಸಿ ಸೋಮವಾರ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ನಡೆಯುತ್ತಿರುವ ನೀರು ಸರಬರಾಜು ಪೈಪ್ ಲೈನ್ ಕಾಮಗಾರಿ ನಡೆಯುತ್ತಿದ್ದ ಸಂದರ್ಭ ಸ್ಥಳಕ್ಕೆ ಧಾವಿಸಿದ ಅಸ್ಗರ್ ಮುಡಿಪು ಸ್ಥಳದಲ್ಲಿದ್ದ ಇಂಜಿನಿಯರ್ ಶೋಭಾಲಕ್ಷ್ಮಿ ಅವರ ವಿರುದ್ದ ಏಕಾಏಕಿ ರೇಗಾಡಿದ್ದಾನೆ. ಮಹಿಳಾ ಅಧಿಕಾರಿ ಎಂಬುದನ್ನೂ ಗಣನೆಗೆ ತೆಗೆಯದೆ ಯಾವುದೇ ಪೂರ್ವಾಗ್ರಹ ಪೀಡಿತನಂತೆ ಕನಿಷ್ಠ ಪದಗಳನ್ನು ಬಳಸಿ ನಿಂದಿಸಿ ಮಾತಿನ ರಂಪಾಟವನ್ನೇ ನಡೆಸಿದ್ದಾನೆ. ಸರಕಾರಿ ಅಧಿಕಾರಿಗಳು ಬ್ರೋಕರ್ ಗಳು, ಕಾಂಗ್ರೆಸಿನ ಚೇಳಾಗಳು, ಕಾಂಗ್ರೆಸ್ಸಿಗರು ನಾಯಿಗಳು, ನೂರು ಮಂದಿ ಕಾಂಗ್ರೆಸ್ಸಿಗರಿಗೆ ನಾನೊಬ್ಬ ಸಾಕು ಎಂಬಿತ್ಯಾದಿ ರೀತಿಯಲ್ಲಿ ವಾಚಾಮಗೋಚರವಾಗಿ ಮಹಿಳಾ ಅಧಿಕಾರಿಯ ಮುಂದೆ ತನ್ನ ಪೌರುಷ ತೋರಿದ್ದಾನೆ. ಮಾತಿನ ಭರದಲ್ಲಿ ಆತನ ಬಾಡಿ ಲಾಂಗ್ವೇಜ್ ಕೂಡಾ ತೀರಾ ರೇಗಾಟದಲ್ಲಿತ್ತು. ಇದೆಲ್ಲವೂ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿರುವ ವೀಡಿಯೋದಲ್ಲಿ ಸ್ಪಷ್ಟವಾಗಿ ಕಂಡು ಬರುತ್ತಿದೆ.
ಈತನ ಪೌರುಷವನ್ನು ಕಂಡು ಒಂದು ಕ್ಷಣ ಅವಾಕ್ಕಾದ ಮಹಿಳಾ ಇಂಜಿನಿಯರ್ ಆರಂಭದಲ್ಲಿ ತಣ್ಣಗಾಗಿಯೇ ಉತ್ತರಿಸಿದ್ದರು. ಮಹಿಳಾ ಅಧಿಕಾರಿಯ ಮೃದು ಮಾತುಗಾರಿಕೆಯನ್ನು ತಪ್ಪಾಗಿ ಅರ್ಥೈಕೊಂಡ ಈತ ಮತ್ತಷ್ಟು ರೇಗಾಟ-ಕೂಗಾಟ ಆರಂಭಿಸಿದಾಗ ಇಂಜಿನಿಯರ್ ಅವರು ನೇರವಾಗಿ ಅವರನ್ನು ತರಾಟೆಗೆಳೆದು ನೋಡಿ ಅಸ್ಗರ್ ಅವರೇ ನೀವೊಬ್ಬರು ವಕೀಲರು, ಬಿಜೆಪಿ ಪಕ್ಷದ ಮುಖಂಡರು ಎಂದೆಲ್ಲಾ ಹೇಳಿಕೊಳ್ಳುತ್ತಿದ್ದೀರಾ, ಇಷ್ಟೆಲ್ಲ ಸ್ಥಾನಮಾನ ಪಡೆದುಕೊಂಡು ಈ ಈ ರೀತಿಯಾಗಿ ಸರಕಾರಿ ಅಧಿಕಾರಿಗಳ ಮುಂದೇ ರೇಗಾಟ ನಡೆಸುವುದು ಸರಿಯಲ್ಲ. ಮಾತುಗಾರಿಕೆಯ ಬಗ್ಗೆ ಸ್ವಲ್ಪ ತಿಳಿದುಕೊಳ್ಳಿ. ಕಾನೂನು ಗೊತ್ತಿದ್ದೂ ಕಾನೂನು ಮೀರಿ ನಡೆದುಕೊಳ್ಳುತ್ತಿದ್ದೀರಿ ಎಂದೆಲ್ಲ ಶಿಸ್ತಿನ ಪಾಠ ಮಾಡಿ ವರ್ತನೆ ತಿದ್ದುವ ಪ್ರಯತ್ನ ನಡೆಸಿದ್ದಾರೆ. ಆದರೂ ಮುಖಂಡನ ಪಿತ್ತ ಇಳಿದಿಲ್ಲ.
ಬಳಿಕ ಘಟನೆಯಿಂದಾಗಿ ಮಾನಸಿಕವಾಗಿ ಘಾಸಿಗೊಳಗಾದ ಇಂಜಿನಿಯರ್ ಶೋಭಾ ಲಕ್ಷ್ಮಿ ಅವರು ನೇರವಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಆಧಾರದಲ್ಲಿ ಆರೋಪಿ ಅಸ್ಗರ್ ಅವರನ್ನು ಕರೆಸಿ ಪೊಲೀಸರು ವಿಚಾರಣೆ ನಡೆಸಿದ ಸಂದರ್ಭ ಆತ ಘಟನೆ ಬಗ್ಗೆ ಕ್ಷಮೆ ಕೋರಿದ್ದು, ಇನ್ನೆಂದೂ ಆ ರೀತಿ ವರ್ತಿಸುವುದಿಲ್ಲ. ಮಹಿಳಾ ಅಧಿಕಾರಿಯ ವಿಷಯಕ್ಕೆ ಹೋಗುವುದಿಲ್ಲ ಎಂದು ಮುಚ್ಚಳಿಕೆ ಬರೆದು ಕೊಟ್ಟ ಹಿನ್ನಲೆಯಲ್ಲಿ ಪೊಲೀಸರು ಎಫ್ ಐ ಆರ್ ದಾಖಲಿಸದೆ ಬಿಟ್ಟು ಕಳುಹಿಸಿದ್ದಾರೆ.
ಘಟನೆ ಬಗ್ಗೆ ಪತ್ರಿಕೆ ಜೊತೆ ಪ್ರತಿಕ್ರಯಿಸಿದ ಇಂಜಿನಿಯರ್ ಶೋಭಾಲಕ್ಷ್ಮಿ ಅವರು ಈ ಬಗ್ಗೆ ಅಸ್ಗರ್ ಅವರುಶನಿವಾರವೇ ಎಲ್ಲ ವಿಚಾರವನ್ನೂ ಸವಿಸ್ತಾರವಾಗಿ ವಿವರಿಸಲಾಗಿದೆ. ಅಲ್ಲದೆ ಈ ಕಾಮಗಾರಿಯನ್ನು ಎಲ್ಲಾ ಇಲಾಖೆಗಳೂ ಸೇರಿ ಸಮನ್ವಯತೆ ಸಾಧಿಸಿದ ಬಳಿಕ ಹೊಂದಾಣಿಕೆಯಿಂದ ಕಾಮಗಾರಿ ನಡೆಸಲಾಗುತ್ತಿದೆ. ಆದರೂ ಏಕಾಏಕಿ ಕಾಮಗಾರಿ ಸ್ಥಳಕ್ಕೆ ಬಂದು ಸಾರ್ವಜನಿಕವಾಗಿ ಹೀಯಾಳಿಸಿರುವುದು ಸರಿಯಲ್ಲ. ಈ ಬಗ್ಗೆ ಈಗಾಗಲೇ ಪೊಲೀಸ್ ದೂರು ನೀಡಲಾಗಿದ್ದು, ಕ್ಷಮೆ ಯಾಚಸಿ ಮುಚ್ಚಳಿಕೆ ಬರೆದಿರುವ ಹಿನ್ನಲೆಯಲ್ಲಿ ಎಫ್ ಐ ಆರ್ ದಾಖಲಿಸಿಲ್ಲ. ಮುಂದಿನ ದಿನಗಳಲ್ಲಿ ಏನಾದರೂ ಕಾಮಗಾರಿಗೆ ಅಥವಾ ಕರ್ತವ್ಯಕ್ಕೆ ಅಡ್ಡಿ ಪಡಿಸಿದರೆ ಮುಂದೆ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳುವ ಬಗ್ಗೆ ತೀರ್ಮಾನಿಸಲಾಗುವುದು ಎಂದಿದ್ದಾರೆ.
0 comments:
Post a Comment