ನವದೆಹಲಿ, ಜೂನ್ 15, 2021 (ಕರಾವಳಿ ಟೈಮ್ಸ್) : ಕೋವಿಡ್ ಸಾಂಕ್ರಾಮಿಕ ರೋಗ ಭೀತಿಯಿಂದಾಗಿ ಈಗಾಗಲೇ ಸೌದಿ ಅರೇಬಿಯಾ ಸರಕಾರ ಈ ಬಾರಿಯ ಹಜ್ ಕರ್ಮ ನಿರ್ವಹಣೆಗೆ ವಿದೇಶಿಯರಿಗೆ ನಿರ್ಬಂಧ ವಿಧಿಸಿರುವ ಹಿನ್ನಲೆಯಲ್ಲಿ ಭಾರತ ಸರಕಾರದ ಹಜ್ ಸಮಿತಿಯು 2021 ರ ಹಜ್ ಯಾತ್ರೆಗೆ ಸಂಬಂಧಿಸಿದ ಎಲ್ಲಾ ಅರ್ಜಿಗಳನ್ನು ರದ್ದುಗೊಳಿಸಿರುವುದಾಗಿ ಘೋಷಿಸಿ ಅಧಿಕೃತವಾಗಿ ಆದೇಶ ಹೊರಡಿಸಿದೆ.
ಸೌದಿ ಅರೇಬಿಯಾ ಸರಕಾರ ಈ ಬಾರಿ ಕೋವಿಡ್ ವೈರಸ್ ಕಾರಣಕ್ಕಾಗಿ ವಿದೇಶಿಗರಿಗೆ ಹಜ್ ಯಾತ್ರೆಗೆ ಅವಕಾಶ ನೀಡಿಲ್ಲ. ಸ್ಥಳೀಯರು, ತನ್ನ ದೇಶದ ಹಿರಿಯ ನಾಗರಿಕರಿಗೆ ಸೀಮಿತ ಸಂಖ್ಯೆಯಲ್ಲಿ ಹಜ್ ಯಾತ್ರೆ ಕೈಗೊಳ್ಳಲು ಮಾತ್ರ ಅವಕಾಶ ನೀಡಿದೆ. ಹೀಗಾಗಿ ಭಾರತ ಸರಕಾರ ಪ್ರಸ್ತುತ ವರ್ಷದ ಹಜ್ ಯಾತ್ರೆಗೆ ಸಂಬಂಧಿಸಿದ ಅರ್ಜಿಗಳನ್ನು ರದ್ದು ಮಾಡಿದೆ ಎಂದು ಸ್ಪಷ್ಟಪಡಿಸಿದೆ.
ಈ ಬಾರಿಯ ಹಜ್ ಯಾತ್ರೆ ತನ್ನ ದೇಶದ 60 ಸಾವಿರ ಮಂದಿಗೆ ಮಾತ್ರ ಸೀಮಿತ ಎಂದು ಇತ್ತೀಚೆಗಷ್ಟೆ ಸೌದಿ ಅರೇಬಿಯಾ ಸರಕಾರ ಪ್ರಕಟಿಸಿತ್ತು. ಅಲ್ಲದೆ ವಿದೇಶಿಗರಿಗೆ ಹಜ್ ಯಾತ್ರೆಗೆ ಅವಕಾಶ ಇಲ್ಲ ಎಂದೂ ಕೂಡಾ ಸ್ಪಷ್ಟಪಡಿಸಿತ್ತು. ಈ ಬಗ್ಗೆ ಸೌದಿ ಸರಕಾರದ ಹಜ್ ಮತ್ತು ಉಮ್ರಾ ಸಚಿವಾಲಯದ ಹೇಳಿಕೆಯನ್ನು ಸರಕಾರದ ಪ್ರೆಸ್ ಏಜೆನ್ಸಿ ಇತ್ತೀಚೆಗೆ ಸಾರ್ವಜನಿಕ ಪ್ರಕಟಣೆ ನೀಡಿತ್ತು. ಜುಲೈ 3ನೇ ವಾರದಲ್ಲಿ ಆರಂಭವಾಗಲಿರುವ ಹಜ್ ಕರ್ಮಕ್ಕೆ ಸಂಬಂಧಿಸಿದಂತೆ 18 ರಿಂದ 65 ವರ್ಷ ವಯಸ್ಸಿನ ಯಾತ್ರಿಕರಿಗೆ ಸೀಮಿತಗೊಳಿಸಿರುವುದಲ್ಲದೆ ಯಾತ್ರೆಯಲ್ಲಿ ಪಾಲ್ಗೊಳ್ಳುವವರು ಕಡ್ಡಾಯವಾಗಿ ಕೋವಿಡ್ ಲಸಿಕೆ ಪಡೆದುಕೊಂಡಿರಬೇಕು ಎಂದು ತಿಳಿಸಿದೆ.
0 comments:
Post a Comment