ಲಾಕ್‍ಡೌನ್ ನಿರ್ಬಂಧ ತೆರವು ಜನರ ಸ್ಪಂದನೆಯ ಮೇಲೆ ಹೊಂದಿಕೊಂಡಿದೆ ಎಂದ ಸಚಿವರು
ಬೆಂಗಳೂರು, ಮೇ 31, 2021 (ಕರಾವಳಿ ಟೈಮ್ಸ್) : ಬೆಂಗಳೂರಿನಲ್ಲಿ ಕೋವಿಡ್-19 ಸೋಂಕಿನ ಪ್ರಕರಣಗಳು ದಿನವೊಂದಕ್ಕೆ 1 ಸಾವಿರಕ್ಕಿಂತಲೂ ಕಡಿಮೆಯಾದಾಗ ಕೋವಿಡ್-19 ನಿರ್ಬಂಧಗಳನ್ನು ಸಡಿಲಗೊಳಿಸಿ ಹಂತ ಹಂತವಾಗಿ ಲಾಕ್ ಡೌನ್ ತೆರವುಗೊಳಿಸಲು ರಾಜ್ಯ ಸರಕಾರ ಚಿಂತನೆ ನಡೆಸಿದೆ ಎಂದು ರಾಜ್ಯ ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ಜೂನ್ 7ರಿಂದ ನಿರ್ಬಂಧ ತೆರವು ಕುರಿತಂತೆ ಸುದ್ದಿಗಾರರ ಜೊತೆ ಪ್ರತಿಕ್ರಿಯಿಸಿದ ಅವರು, ಹಂತ ಹಂತವಾಗಿ ನಿರ್ಬಂಧ ಸಡಿಲಗೊಳಿಸಲು ಕೆಲ ಕ್ಷೇತ್ರಗಳಿಂದ ಮನವಿ ಬಂದಿದೆ. ಆದಾಗ್ಯೂ, ಸೋಂಕಿನ ಪ್ರಮಾಣ ಕಡಿಮೆಯಾಗದಿದ್ದರೆ ಲಾಕ್ ಡೌನ್ ಮುಂದುವರೆಯಲಿದೆ. ಸೋಂಕು ಕಡಿಮೆಯಾದಾಗ ಮಾತ್ರ ನಿರ್ಬಂಧಗಳನ್ನು ಸಡಿಲಗೊಳಿಸಲಾಗುವುದು. ಲಾಕ್ ಡೌನ್ ಸಡಿಲಗೊಳಿಸುವ ನಿಟ್ಟಿನಲ್ಲಿ ಜನರ ಸಹಕಾರ ಮುಖ್ಯ ಎಂದರು.
ಬೆಂಗಳೂರಿನಲ್ಲಿ ದಿನವೊಂದಕ್ಕೆ ಸೋಂಕಿನ ಪ್ರಮಾಣ 1 ಸಾವಿರಕ್ಕಿಂತಲೂ ಕಡಿಮೆಯಾಗಬೇಕು. ಇದು 2 ಸಾವಿರದಿಂದ ಮೂರು ಸಾವಿರ ಮಿತಿ ಮೀರಬಾರದು. ನಂತರವಷ್ಟೇ ಸರಕಾರ ಲಾಕ್ ಡೌನ್ ಸಡಿಲಗೊಳಿಸಲು ಪರಿಗಣಿಸಲಿದೆ ಎಂದ ಸಚಿವರು ಜೂನ್ 6 ರಂದು ಮುಖ್ಯಮಂತ್ರಿ ಸಚಿವರು, ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ. ನಂತರವಷ್ಟೇ ಲಾಕ್ ಡೌನ್ ಬಗ್ಗೆ ಅಂತಿಮ ನಿರ್ಧಾರ ಹೊರಬೀಳಲಿದೆ. ಜನರ ಹಿತಾಸಕ್ತಿಗನುಗುಣವಾಗಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಈ ಮಧ್ಯೆ ಸುದ್ದಿಗಾರರೊಂದಿಗೆ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ, ಹಂತ ಹಂತವಾಗಿ ಲಾಕ್ ಡೌನ್ ತೆರವು ಬಗ್ಗೆ ಸರಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಕೋವಿಡ್-19 ಪ್ರಕರಣಗಳು ಕಡಿಮೆಯಾದರೆ ನಿರ್ಬಂಧಗಳನ್ನು ಹಂತ-ಹಂತವಾಗಿ ಸಡಿಲಗೊಳಿಸಲಾಗುವುದು, ಅಧಿಕಾರಿಗಳು ಕೂಡಾ ಇದನ್ನೇ ಸರಕಾರಕ್ಕೆ ಶಿಫಾರಸು ಮಾಡಿರುವುದಾಗಿ ತಿಳಿಸಿದ್ದಾರೆ.
0 comments:
Post a Comment