ಬಂಟ್ವಾಳ, ಮೇ 26, 2021 (ಕರಾವಳಿ ಟೈಮ್ಸ್) : ತಾಲೂಕಿನ ಪುದು, ಕಳ್ಳಿಗೆ, ತುಂಬೆ ಹಾಗೂ ಮೇರಮಜಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋವಿಡ್ ನಿಯಂತ್ರಣಾ ಕಾರ್ಯವೈಖರಿ ಬಗ್ಗೆ ಪರಿಶೀಲನೆ ನಡೆಸುವ ಸಲುವಾಗಿ ಜಿ ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ಕುಮಾರ್ ಅವರು ಬುಧವಾರ ಪೂರ್ವಾಹ್ನ ಪುದು ಗ್ರಾಮ ಪಂಚಾಯತ್ ಕಛೇರಿಗೆ ಭೇಟಿ ನೀಡಿದರು.
ಈ ಸಂದರ್ಭ ಪುದು ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಅವರು ಪಂಚಾಯತ್ ವ್ಯಾಪ್ತಿಯಲ್ಲಿ ಕೊರೋನಾ ನಿಯಂತ್ರಣ ಬಗ್ಗೆ ಕೈಗೊಂಡ ಕ್ರಮಗಳ ಹಾಗೂ ಟಾಸ್ಕ್ ಫೋರ್ಸ್ ಸಮಿತಿ ಸದಸ್ಯರ ಸಕ್ರಿಯತೆಯ ಬಗ್ಗೆ ಸಿಇಒಗೆ ವಿವರಿಸಿದರು. ಪಂಚಾಯತ್ ವತಿಯಿಂದ ಇತ್ತೀಚೆಗೆ ನಿರ್ಮಾಣಗೊಂಡ ನೂತನ ಸಭಾ ಭವನದ ಬಗ್ಗೆ ವಿವರಿಸಿ ಸಭಾಂಗಣವನ್ನು ತೋರಿಸಿದರು. ಸಭಾಂಗಣದ ಸುವ್ಯವಸ್ಥಿತತೆಯ ಬಗ್ಗೆ ಸಿಇಒ ಕುಮಾರ್ ಅವರು ಮೆಚ್ವುಗೆ ವ್ಯಕ್ತಪಡಿಸಿದರು.
ವಾರ್ಡ್ ಮಟ್ಟದಲ್ಲಿ ಕೋವಿಡ್ ಸಂಬಂಧಿ ಸಭೆಯ ಬಗ್ಗೆ ಸಿಇಒ ವಿಚಾರಿಸಿದ್ದು, ಈ ಸಂದರ್ಭ ಸರಕಾರದ ಆದೇಶಕ್ಕೂ ಮುಂಚಿತವಾಗಿ ತಾಲೂಕು ಕಛೇರಿಯಲ್ಲಿ ಶಾಸಕರು ಕರೆದ ಸಭೆಯಲ್ಲಿ ಶಾಸಕರು ಕೋವಿಡ್ ನಿಯಂತ್ರಣಕ್ಕಾಗಿ ವಾರ್ಡ್ ಮಟ್ಟದ ಸಭೆ ಕರೆಯುವಂತೆ ಸೂಚನೆ ನೀಡಿದ್ದು ಅದೇ ಸಂದರ್ಭದಲ್ಲೇ ಪುದು ಪಂಚಾಯತ್ ವ್ಯಾಪ್ತಿಯಲ್ಲಿ ವಾರ್ಡ್ ಸಭೆಗಳನ್ನು ನಡೆಸಲು ಆರಂಭಿಸಲಾಗಿದೆ ಎಂದು ಅಧ್ಯಕ್ಷ ರಮ್ಲಾನ್ ಅವರು ಸಿಇಒ ಡಾ ಕುಮಾರ್ ಅವರಿಗೆ ವಿವರಿಸಿದರು.
ಪುದು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಜಾಸ್ತಿ ಇರುವ ಬಗ್ಗೆ ಸಿಇಒ ಪ್ರಶ್ನಿಸಿದ ವೇಳೆ ಉತ್ತರಿಸಿದ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಅವರು ಒಟ್ಟು ನಾಲ್ಕು ಪಂಚಾಯತ್ ಗಳ ಪೈಕಿ ಪುದು ಪಂಚಾಯತ್ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ತೀರಾ ಕಡಿಮೆ ಇದೆ ಎಂದು ಸ್ಪಷ್ಟಪಡಿಸಿದರು. ಬಳಿಕ ಸಿಇಒ ಅವರು ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದಾಗ ಅಲ್ಲಿನ ಸಿಬ್ಬಂದಿಗಳೂ ಕೂಡಾ ಪುದು ಗ್ರಾಮದಲ್ಲಿ ಕೋವಿಡ್ ಕೇಸ್ ಕಡಿಮೆ ಇರುವ ಬಗ್ಗೆ ಸಿಇಒಗೆ ವಿವರಿಸಿದರು.
ಇದೇ ವೇಳೆ ಆರೋಗ್ಯ ಇಲಾಖಾ ಸಿಬ್ಬಂದಿಗಳಾದ ಪ್ರಿಯಾ, ರೋಹಿಣಿ ಅವರು ಕೋವಿಡ್ ವ್ಯಾಕ್ಸಿನ್ ನೋಂದಣಿಗೆ ಸಂಬಂಧಿಸಿದಂತೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಸಿಇಒಗೆ ಮನವಿ ಸಲ್ಲಿಸಿದರು.
ಈ ಸಂದರ್ಭ ತಾ ಪಂ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಉಪಾಧ್ಯಕ್ಷೆ ಲೀಡಿಯ ಪಿಂಟೋ, ಪಿಡಿಒ ಹರೀಶ್ ಕೆ., ಪಂಚಾಯತ್ ಸದಸ್ಯರಾದ ಇಕ್ಬಾಲ್ ಸುಜೀರ್, ಕಿಶೋರ್ ಸುಜೀರ್, ಮುಹಮ್ಮದ್ ಫರಂಗಿಪೇಟೆ, ಅಖ್ತರ್ ಹುಸೇನ್ , ಪಂಚಾಯತ್ ಸಿಬ್ಬಂದಿ ವರ್ಗ, ಪ್ರಮುಖರಾದ ಮಜೀದ್ ಪೇರಿಮಾರ್, ಇನ್ಶಾದ್ ಮಾರಿಪಳ್ಳ , ಇಂತಿಯಾಝ್ ಮಾರಿಪಳ್ಳ ಮೊದಲಾದವರು ಉಪಸ್ಥಿತರಿದ್ದರು.
0 comments:
Post a Comment