ತಾಲೂಕಿನ ವಿವಿಧೆಡೆ ಇಂತಹ ಕೃತ್ಯಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿರುವ ಅಧಿಕಾರಿಗಳು
ಬಂಟ್ವಾಳ, ಮೇ 04, 2021 (ಕರಾವಳಿ ಟೈಮ್ಸ್) : ಕೋವಿಡ್ ಕಫ್ರ್ಯೂ ಮಾರ್ಗಸೂಚಿ ಉಲ್ಲಂಘಿಸಿ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದ ವಿಟ್ಲ ಪೇಟೆಯ ಹೃದಯ ಭಾಗದ ಪುತ್ತೂರು ರಸ್ತೆಯಲ್ಲಿರುವ ಕ್ಯೂಬಿ ಫ್ಯಾಷನ್ ಎಂಬ ರೆಡಿಮೇಡ್ ಮಳಿಗೆಗೆ ಸೋಮವಾರ ದಾಳಿ ನಡೆಸಿದ ವಿಟ್ಲ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಮಾಲಿನಿ ನೇತೃತ್ವದ ಅಧಿಕಾರಿಗಳ ತಂಡ ದಂಡ ವಿಧಿಸಿ ಎಚ್ಚರಿಕೆ ನೀಡಿದೆ.
ಮಳಿಗೆಯ ಎದುರಿನ ಬಾಗಿಲಿಗೆ ಬೀಗ ಹಾಕಿದಂತೆ ಭಾಸವಾಗುವ ರೀತಿಯಲ್ಲಿ ಅಧಿಕಾರಿಗಳನ್ನು ವಂಚಿಸಿ ಒಳಗೆ ಗ್ರಾಹಕರನ್ನು ಕೂಡಿ ಹಾಕಿ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದರು ಎನ್ನಲಾಗಿದೆ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಮುಖ್ಯಾಧಿಕಾರಿ ಮಾಲಿನಿ ಅವರು ತಂಡದೊಂದಿಗೆ ದಾಳಿ ನಡೆಸಿ ಅಂಗಡಿ ಮಾಲಕನಿಗೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರಲ್ಲದೆ 3,500/- ರೂಪಾಯಿ ದಂಡ ವಿಧಿಸಿದ್ದಾರೆ.
ಹಲವೆಡೆ ಇದೇ ರೀತಿಯ ವ್ಯಾಪಾರ ಆರೋಪ
ತಾಲೂಕಿನ ವಿವಿಧೆಡೆ ಇದೇ ರೀತಿಯಾಗಿ ಬಟ್ಟೆ ಅಂಗಡಿ ಹಾಗೂ ಇನ್ನಿತರ ಅಗತ್ಯ ಸೇವೆ ಹೊರತುಪಡಿಸಿದ ಅಂಗಡಿ ಮಾಲಕರು ಅಂಗಡಿಗೆ ಎದುರಿನಲ್ಲಿ ಬೀಗ ಹಾಕಿ ಒಳಭಾಗದಲ್ಲಿ ಗ್ರಾಹಕರನ್ನು ಕೋವಿಡ್ ಮಾರ್ಗಸೂಚಿ ಮೀರಿ ಗುಂಪು ಗುಂಪಾಗಿ ಕೂಡಿ ಹಾಕಿ ವ್ಯಾಪಾರದಲ್ಲಿ ತೊಡಗಿದ್ದಾರೆ ಎಂಬ ಆರೋಪ ವ್ಯಾಪಕವಾಗಿ ಕೇಳಿ ಬರುತ್ತಿದ್ದು, ಮಿತಿ ಮೀರಿದ ಕೋವಿಡ್ 2ನೇ ಅಲೆಯ ನಡುವೆ ಸಾರ್ವಜನಿಕರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸಾರ್ವಜನಿಕರು ಅಧಿಕಾರಿಗಳಿಗೆ ಖಚಿತ ಮಾಹಿತಿ ನೀಡಿದರೂ ಸಂಬಂಧಪಟ್ಟವರು ನಿರ್ಲಕ್ಷ್ಯ ಮನೋಭಾವ ತೋರುತ್ತಿದ್ದಾರೆ ಎಂದು ಆರೋಪಿಸುವ ಸಾರ್ವಜನಿಕರು ಸಹಜವಾಗಿಯೇ ಕೊರೋನಾ ವ್ಯಾಪಕತೆಯ ಭೀತಿ ಉಂಟಾಗಿದೆ ಎನ್ನುತ್ತಾರೆ.
ಪೊಲೀಸರು ಒಂದು ಕ್ಷಣ ಮನಸ್ಸು ಮಾಡಿದರೆ ಪೇಟೆಯಾದ್ಯಂತ ಓಡಾಟ ನಡೆಸಿ ತಮ್ಮ ಬಲವನ್ನು ತೋರಿಸುತ್ತಾರೆ ವಿನಃ ಬಳಿಕ ಇಂತಹ ಆರೋಪಗಳ ಮೇಲೆ ಕಣ್ಣಿಡುತ್ತಿಲ್ಲ ಎಂಬ ಆರೋಪ ಸಾರ್ವಜನಿಕರದ್ದು. ಬಟ್ಟೆ ಅಂಗಡಿಗಳಲ್ಲಿ ಜನ ಸೇರುವುದು, ಹಲವಾರು ಮಂದಿ ಒಂದೇ ವಸ್ತ್ರಗಳನ್ನು ಹಲವು ಬಾರಿ ಸ್ಪರ್ಶಿಸುವುದು ಸೇರಿದಂತೆ ಕೋವಿಡ್ ನಿಯಮಾವಳಿಗೆ ವಿರುದ್ದವಾದ ಕೃತ್ಯಗಳು ಕಂಡು ಬರುತ್ತಿರುವುದರಿಂದ ಈ ಬಗ್ಗೆ ಕಠಿಣ ನಿಯಂತ್ರಣಕ್ಕೆ ಅಧಿಕಾರಿಗಳು ಕ್ರಮ ಕೈಗೊಳ್ಳುವುದು ಅತೀ ಅಗತ್ಯ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.
0 comments:
Post a Comment