ಮಂಗಳೂರು, ಮೇ 13, 2021 (ಕರಾವಳಿ ಟೈಮ್ಸ್) : ಕರಾವಳಿ ಜಿಲ್ಲೆಗಳನ್ನು ಹೊರತುಪಡಿಸಿ ರಾಜ್ಯಾದ್ಯಂತ ಶುಕ್ರವಾರ (ಮೇ 14) ಮುಸ್ಲಿಮರು ಪವಿತ್ರ ಈದುಲ್ ಫಿತ್ರ್ ಹಬ್ಬವನ್ನು ಆಚರಿಸುತ್ತಿದ್ದಾರೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳನ್ನು ಗುರುವಾರ (ಮೇ 13) ಈದುಲ್ ಫಿತ್ರ ಹಬ್ಬ ಆಚರಿಸಲಾಗಿದೆ.
ಮಾಜಿ ಸಚಿವ, ಕರಾವಳಿಯ ಏಕೈಕ ಮುಸ್ಲಿಂ ಶಾಸಕರಾಗಿರುವ ಮಂಗಳೂರು ಶಾಸಕ ಯು ಟಿ ಖಾದರ್ ಅವರು ಮಂಗಳೂರು-ಕಂಕನಾಡಿಯಲ್ಲಿರುವ ತಮ್ಮ ಮನೆಯಲ್ಲೇ ಈ ಬಾರಿ ಸರಳವಾಗಿ ಈದುಲ್ ಫಿತ್ರ್ ಹಬ್ಬವನ್ನು ಕುಟುಂಬದ ಜೊತೆ ಆಚರಿಸಿದ್ದಾರೆ. ಈ ಸಂದರ್ಭ ಮಾತನಾಡಿದ ಅವರು ರಂಝಾನ್ ತಿಂಗಳ 30 ದಿನಗಳಲ್ಲಿ ಕಠಿಣ ಉಪವಾಸ ಆಚರಿಸಿದ ಮುಸ್ಲಿಮರು ಇದೀಗ ಈದುಲ್ ಫಿತ್ರ್ ಸಂಭ್ರಮವನ್ನು ಆಚರಿಸುತ್ತಿದ್ದು, ಬಡ-ಬಗ್ಗರ, ದೀನ ದಲಿತರ ಹೊಟ್ಟೆ ಹಸಿವು ಬಗ್ಗೆ ಸ್ವತಃ ಉಪವಾಸ ಆಚರಿಸುವ ಮೂಲಕ ತಿಳಿದು ಕೊಂಡಿರುವ ಮುಸ್ಲಿಮರ ಪಾಲಿಗೆ ಈದುಲ್ ಫಿತ್ರ್ ಹಬ್ಬ ಅತ್ಯಂತ ಮಹತ್ವವಾಗಿದೆ. ಈದ್ ದಿನವನ್ನು ಕೂಡಾ ಬಡವರ, ನೊಂದವರ, ಅಸಹಾಯಕರ ಜೊತೆ ಸೇರಿಕೊಂಡು ಸರಳವಾಗಿ ಆಚರಿಸುವ ಮೂಲಕ ಕೋವಿಡ್ ವೈರಸ್ ಮನುಕುಲದಿಂದ ಶೀಘ್ರ ದೂರವಾಗಲಿ ಎಂದು ಈ ಸಂದರ್ಭ ಭಗವಂತನ ಜೊತೆ ಪ್ರಾರ್ಥಿಸಬೇಕಾಗಿದೆ. ಆಡಂಬರ ಜೀವನ ತೊರೆದು ಮುಸ್ಲಿಮರು ಸರಳ ಜೀವನಕ್ಕೆ ತಮ್ಮನ್ನು ತಾವು ಒಗ್ಗಿಸಿಕೊಂಡು ಬಡವರ ಜೀವನ್ನು ಅರ್ಥ ಮಾಡಿಕೊಳ್ಳಬೇಕಾದ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.
0 comments:
Post a Comment