ಬಂಟ್ವಾಳ, ಮೇ 08, 2021 (ಕರಾವಳಿ ಟೈಮ್ಸ್) : ಕೊರೋನಾ ಬಗ್ಗೆ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಬೇಡ, ಜಾಗೃತಿ ಅತೀ ಅಗತ್ಯವಾಗಿದ್ದು, ನಮ್ಮ ಗ್ರಾಮಕ್ಕೂ ಬರುವುದಕ್ಕಿಂತ ಮೊದಲು ನಾವು ಎಚ್ಚರವಾಗಬೇಕು ಎಂದು ಮಂಗಳೂರು ಶಾಸಕ ಯು ಟಿ ಖಾದರ್ ಹೇಳಿದರು.
ಬಿ ಸಿ ರೋಡಿನ ತಾ ಪಂ ಸಭಾಂಗಣದಲ್ಲಿ ಶನಿವಾರ ಅಪರಾಹ್ನ ನಡೆದ ಕೋವಿಡ್ ಸಂಬಂಧಿ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ವೈರಸ್ ಬರುವುದು ಸಹಜ ಪ್ರಕ್ರಿಯೆ ಆದರೆ ಅದರಿಂದ ಸಾಯುವುದು ಮಾತ್ರ ನಮ್ಮ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನದಿಂದ ಆಗಿರುತ್ತದೆ ಎಂದವರು ಹೇಳಿದರು.
ರೋಗ ನಿಯಂತ್ರಣ ಆರೋಗ್ಯ ಇಲಾಖೆಯ ಮಾತ್ರ ಜವಾಬ್ದಾರಿಯಲ್ಲ. ಸ್ಥಳೀಯ ಸಂಸ್ಥೆ ಹಾಗೂ ಇತರ ಇಲಾಖೆಗಳ ಹಾಗೂ ಸಾರ್ವಜನಿಕರ ಜವಾಬ್ದಾರಿ ಈ ಬಗ್ಗೆ ಹೆಚ್ಚಾಗಿದೆ. ಈ ಕುರಿತು ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಟೀಂ ವರ್ಕ್ ಅತೀ ಮುಖ್ಯ ಎಂದ ಶಾಸಕ ಖಾದರ್
ವೆಂಟಿಲೇಟರ್ ಎಂಬುದು ಜೀವ ಸಂಜೀವಿನಿಯಲ್ಲ. ವೆಂಟಿಲೇಟರ್‍ಗೆ ಹೋದ 90% ರೋಗಿಗಳು ಬದುಕಿ ಬಂದ ಉದಾಹರಣೆಯಲ್ಲ. ಈ ಎಲ್ಲಾ ಬಗ್ಗೆ ಜನ ಸ್ವ ಜವಾಬ್ದಾರಿ ವಹಿಸಬೇಕಾಗಿದೆ ಎಂದು ಎಚ್ಚರಿಸಿದರು.
ನಾವು ಸೂಕ್ತ ಮುಂಜಾಗ್ರತೆ ವಹಿಸಿದರೆ ಕೊರೋನಾ ಮಾರಕ ಕಾಯಿಲೆಯಲ್ಲ. ಆದರೆ ಜಾಗೃತೆ ತಪ್ಪಿದರೆ ಅದು ಮಾರಣಾಂತಿಕ ಖಾಯಿಲೆಯಾಗಿ ಪರಿವರ್ತನೆ ಆಗುತ್ತದೆ ಎಂದು ಅಭಿಪ್ರಾಯಪಟ್ಟ ಯು ಟಿ ಖಾದರ್ ಕೋವಿಡ್ ಬಗ್ಗೆ ತಾಲೂಕು ಮಟ್ಟದಲ್ಲೇ ಅಧಿಕಾರಿಗಳು ಎಲ್ಲವನ್ನೂ ನಿಭಾಯಿಸಬೇಕು. ನೋಡಲ್ ಅಧಿಕಾರಿಗಳು ಹಾಗೂ ಜವಾಬ್ದಾರಿ ವಹಿಸಿಕೊಟ್ಟ ಸಿಬ್ಬಂದಿಗಳ ಮೋನಿಟರಿಂಗ್ ಮಾಡುವ ವ್ಯವಸ್ಥೆಯನ್ನು ತಾಲೂಕು ಮಟ್ಟದ ಅಧಿಕಾರಿಗಳು ಮಾಡಬೇಕು ಎಂದು ಅಧಿಕಾರಿಗಳಿಗೆ ಕಿವಿ ಮಾತು ಹೇಳಿದರು.
ಜಿಲ್ಲೆಯ ಜನ ಯಾವುದೇ ಕಾರಣಕ್ಕೂ ರಾಜ್ಯಮಟ್ಟದ ಮಾಧ್ಯಮಗಳ ಸುದ್ದಿಯನ್ನು ಮಾತ್ರ ಗಣನೆಗೆ ತೆಗೆದುಕೊಳ್ಳದಿರಿ. ರಾಜ್ಯದ ಮಟ್ಟದ ಸುತ್ತೋಲೆಯ ಜೊತೆಗೆ ಜಿಲ್ಲಾಡಳಿತದ ಆದೇಶವನ್ನೂ ಕೂಡಾ ಗಮನಿಸುತ್ತಾ ಇರಬೇಕಾಗಿದೆ. ರಾಜ್ಯ ಸರಕಾರದ ಆದೇಶದಲ್ಲಿ ಜಿಲ್ಲಾ ಮಟ್ಟದ ಟಾಸ್ಕ್ ಫೆÇೀರ್ಸ್ ಸಮಿತಿಗೆ ಬದಲಾವಣೆಯ ಅವಕಾಶ ನೀಡಲಾಗಿರುತ್ತದೆ. ಹೀಗಾಗಿ ಜಿಲ್ಲೆಗೆ ಹೊಂದಿಕೊಂಡು ಜಿಲ್ಲಾ ಮಟ್ಟದ ಟಾಸ್ಕ್ ಫೆÇೀರ್ಸ್ ಸಮಿತಿಯ ಆದೇಶ ಅಂತಿಮವಾಗಿರುತ್ತದೆ. ಅದಕ್ಕೆ ಹೊಂದಿಕೊಂಡು ಜನ ಮಾರ್ಗಸೂಚಿ ಪಾಲನೆ ಮಾಡಬೇಕಾಗಿದೆ ಎಂದು ಶಾಸಕ ಖಾದರ್ ಜನರಿಗೆ ಮಾಹಿತಿ ನೀಡಿದರು.
ಇದೇ ವೇಳೆ ಮಾತನಾಡಿದ ಮಂಗಳೂರು ಸಹಾಯಕ ಆಯುಕ್ತ ಮದನ್ ಮೋಹನ್, ಸಾರ್ವಜನಿಕರು ಕೋವಿಡ್ ಸಂಬಂಧಿಸಿದಂತೆ ವಿವಿಧ ಮೊಬೈಲ್ ಸಂಖ್ಯೆಗಳಿಗೆ ಕರೆ ಮಾಡಿ ವಿನಾ ಕಾರಣ ಸಮಯ ವ್ಯರ್ಥ ಮಾಡುವ ಬದಲಾಗಿ 1077 ಕೋವಿಡ್ ಸಹಾಯವಾಣಿಗೆ ಕರೆ ಮಾಡಿ ಎಲ್ಲ ಸಮಸ್ಯೆಗಳಿಗೂ ಒಂದೇ ಕಡೆ ಪರಿಹಾರ ಕಂಡುಕೊಳ್ಳಬಹುದು ಎಂದು ಮಾಹಿತಿ ನೀಡಿದರು.
ಇದೇ ವೇಳೆ ಸಲಹೆ ನೀಡಿದ ಜಿ ಪಂ ಸದಸ್ಯೆ ಮಮತಾ ಡಿ ಎಸ್ ಗಟ್ಟಿ ಅವರು ಸೋಂಕಿತರ ಮನೆಗೆ ಆಹಾರ, ಔಷಧಿ ಮೊದಲಾದ ಮೂಲಭೂತ ಅವಶ್ಯಕತೆಗಳನ್ನು ಒದಗಿಸಿದರೆ ಅಂತಹವರು ಮನೆಯಿಂದ ಹೊರಗೆ ಬರುವ ಪ್ರಮೇಯವೇ ಬರುವುದಿಲ್ಲ. ಇದ್ಯಾವುದನ್ನೂ ಒದಗಿಸದೆ ಸೋಂಕತರು ರಿಕ್ಷಾದಲ್ಲಿ ಹೋಗಬಾರದು, ಅಂಗಡಿ-ಮೆಡಿಕಲ್‍ಗಳಿಗೆ ತೆರಳಬಾರದು ಎಂದರೆ ಅದಕ್ಕೆ ಅರ್ಥ ಇರುವುದಿಲ್ಲ ಎಂದು ಸಲಹೆ ನೀಡಿದರು.
ಜಿ ಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಮಾತನಾಡಿ ಬಂಟ್ವಾಳ ತಾಲೂಕು ಕೇಂದ್ರಕ್ಕೆ ಹೊಂದಿಕೊಂಡಂತೆ ಕೋವಿಡ್ ತುರ್ತು ಅಂಬ್ಯುಲೆನ್ಸ್ ವ್ಯವಸ್ಥೆ ಮಾಡಬೇಕು. ತುರ್ತು ಸಂದರ್ಭದಲ್ಲಿ ತಾಲೂಕಿನ ಹೊರಭಾಗದ ಕೇಂದ್ರಗಳಿಂದ ಅಂಬ್ಯುಲೆನ್ಸ್ ತಲುಪುವಾಗ ಬಹಳಷ್ಟು ತಡವಾಗುತ್ತದೆ ಎಂದರು. ಈ ಬಗ್ಗೆ ಅಧಿಕಾರಿಗಳು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತಾರೆ ಎಂದು ಶಾಸಕ ಖಾದರ್ ಉತ್ತರಿಸಿದರು.
ಇರಾ ಗ್ರಾ ಪಂ ಮಾಜಿ ಅಧ್ಯಕ್ಷ ಮಾತನಾಡಿ ಕೋವಿಡ್‍ಗೆ ಸಂಬಂಧಿಸಿದಂತೆ ಲಾಕ್‍ಡೌನ್, ಕಫ್ರ್ಯೂ ವಿಸ್ತರಣೆ ಆಗುತ್ತಿದೆ. ಕಾನೂನು, ನಿಯಮಗಳೂ ಕಠಿಣ ಆಗುತ್ತಿದೆಯೇನೋ ನಿಜ. ಆದರೆ ಸರಕಾರ ಜನರ ಹಿತಕ್ಕಾಗಿ ಏನು ಮಾಡುತ್ತಿದೆ ಎಂಬುದರ ಶಾಸಕರುಗಳು ಯಾವ ರೀತಿಯ ಒತ್ತಡವನ್ನು ಸರಕಾರದ ಮೇಲೆ ಹಾಕುತ್ತಿದ್ದಾರೆ ಎಂಬ ಬಗ್ಗೆ ಜನರಿಗೆ ಸ್ಪಷ್ಟಪಡಿಸಿ ಎಂದು ಆಗ್ರಹಿಸಿದರು. ಕಫ್ರ್ಯೂ-ಲಾಕ್ ಡೌನ್ ಅನುಭವಿಸಿ ಜನ ಹೊಟ್ಟೆಗೆ ಹಿಟ್ಟಿಲ್ಲದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಆದರೆ ಸರಕಾರ ಮಾತ್ರ ಕೇವಲ ಮಾರ್ಗಸೂಚಿಗಳನ್ನು ಮಾತ್ರ ದಿನಕ್ಕೊಂದರಂತೆ ಹೊರಡಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಬಗ್ಗೆ ಧ್ವನಿಗೂಡಿಸಿದ ಪುದು ಗ್ರಾ ಪಂ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಅವರು ಜನರ ಜೀವನ ಸ್ಥಿತಿ ಸಂಪೂರ್ಣವಾಗಿ ಹದಗೆಟ್ಟಿದ್ದು, ಈ ಬಗ್ಗೆ ಸರಕಾರ ಗಮನ ಹರಿಸಬೇಕು. ಕನಿಷ್ಠ ಪಕ್ಷ ವಿದ್ಯುತ್ ಬಿಲ್, ಆಸ್ತಿ ತೆರಿಗೆ ಮೊದಲಾದವುಗಳ ಬಗ್ಗೆ ರಿಯಾಯಿತಿ ಪ್ರಕಟಿಸಬೇಕು ಎಂದು ಆಗ್ರಹಿಸಿದರು.
ಈ ಬಗ್ಗೆ ಉತ್ತರಿಸಿದ ಶಾಸಕ ಖಾದರ್ ಖಂಡಿತವಾಗಿಯೂ ತಮ್ಮ ಜನಪರ ಬೇಡಿಕೆಗಳ ಬಗ್ಗೆ ಸರಕಾರದ ಗಮನ ಸೆಳೆಯುವುದಾಗಿ ತಿಳಿಸಿದರು.
ಇದೇ ವೇಳೆ ಮಾತನಾಡಿದ ಬಂಟ್ವಾಳ ಗ್ರಾಮಾಂತರ ಎಸ್ಸೈ ಪ್ರಸನ್ನ ಅವರು ಲಾಕ್ ಡೌನ್ ಹಾಗೂ ಸರಕಾರದ ಮಾರ್ಗಸೂಚಿ ಉಲ್ಲಂಘಿಸಿ ಯುವಕರ ಗುಂಪು ಕ್ರಿಕೆಟ್ ಆಡುವುದು, ಒಟ್ಟು ಸೇರುವುದು, ವಿನಾ ಕಾರಣ ತಿರುಗಾಟ ನಡೆಸುವುದು ಅಲ್ಲಲ್ಲಿ ಕಂಡು ಬರುತ್ತಿದ್ದು, ಈ ಬಗ್ಗೆ ಸಾರ್ವಜನಿಕರು 112 ಪೊಲೀಸ್ ಸಹಾಯವಾಣಿಗೆ ಮಾಹಿತಿ ನೀಡಿದಲ್ಲಿ ತಕ್ಷಣವೇ ಪೊಲೀಸರು ಕಾರ್ಯಪ್ರವೃತ್ತರಾಗಿ ಕಠಿಣ ಕ್ರಮ ಜರುಗಿಸುವುದಾಗಿ ತಿಳಿಸಿದರು.
ಸಭೆಯಲ್ಲಿ ತಾ ಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರಾ, ಉಪಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ತಾಲೂಕು ತಹಶೀಲ್ದಾರ್ ರಶ್ಮಿ ಎಸ್ ಆರ್, ತಾಲೂಕು ಆರೋಗ್ಯಾಧಿಕಾರಿ ಡಾ ದೀಪಾ ಪ್ರಭು, ಪ್ರಮುಖರಾದ ಉಮರ್ ಫಾರೂಕ್ ಫರಂಗಿಪೇಟೆ, ಅಬೂಬಕ್ಕರ್ ಸಜಿಪ, ಪ್ರವೀಣ್ ತುಂಬೆ, ಹಾಶೀರ್ ಪೇರಿಮಾರ್, ಜಲೀಲ್ ಬ್ರೈಟ್, ಇಂತಿಯಾಝ್ ತುಂಬೆ, ಹಿಶಾಂ ಫರಂಗಿಪೇಟೆ ಮೊದಲಾದವರು ಭಾಗವಹಿಸಿದ್ದರು.
0 comments:
Post a Comment