ಬೆಂಗಳೂರು, ಮೇ 05, 2021 (ಕರಾವಳಿ ಟೈಮ್ಸ್) : ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಆಸ್ತಿ ತೆರಿಗೆಯ ಪಾವತಿಗೆ ನೀಡಲಾಗುತ್ತಿರುವ ಶೇ.5 ರ ರಿಯಾಯತಿ ಅವಧಿಯನ್ನು ರಾಜ್ಯ ಸರಕಾರ ಜೂನ್ 30 ರವರೆಗೆ ವಿಸ್ತರಿಸಿ ಸುತ್ತೋಲೆ ಹೊರಡಿಸಿದೆ.
ಆಸ್ತಿ ತೆರಿಗೆಯನ್ನು ಆರ್ಥಿಕ ವರ್ಷದ ಎಪ್ರಿಲ್ ತಿಂಗಳಲ್ಲಿ ಪಾವತಿಸಿದಲ್ಲಿ ಆಸ್ತಿ ತೆರಿಗೆ ಮೊತ್ತದಲ್ಲಿ ಶೇ.5 ರಷ್ಟು ರಿಯಾಯತಿಯನ್ನು ನೀಡಲು ಅವಕಾಶವಿರುತ್ತದೆ . ಕರೋನಾ ವೈರಸ್ (ಕೋವಿಡ್-19) ರೋಗವು ಸಾಂಕ್ರಾಮಿಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ 2021-22ನೇ ಸಾಲಿನ ಆಸ್ತಿ ತೆರಿಗೆಯ ಪಾವತಿಗೆ ನೀಡಲಾಗುತ್ತಿರುವ ಶೇ.5 ರಷ್ಟು ರಿಯಾಯತಿ ಅವಧಿಯನ್ನು ವಿಸ್ತರಿಸಲು ಕೋರಿ ಜನ ಪ್ರತಿನಿಧಿಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳಿಂದ ಮನವಿಯನ್ನು ಪುರಸ್ಕರಿಸಿರುವ ಸರಕಾರ, ಲಾಕ್ ಡೌನ್ ಹಿನ್ನಲೆಯಲ್ಲಿ ಸಾರ್ವಜನಿಕರು ಸಾಮಾಜಿಕ ಅಂತರ ಮತ್ತು ಪ್ರತ್ಯೇಕತೆಗೆ ಹೆಚ್ಚಿನ ಗಮನ ಹರಿಸುವ ದೃಷ್ಟಿಯಿಂದ 2020-21 ನೇ ಸಾಲಿನ ಆಸ್ತಿ ತೆರಿಗೆ ಪಾವತಿಗೆ ನೀಡಲಾಗುವ ಶೇ.5 ರಷ್ಟು ರಿಯಾಯತಿ ಅವಧಿಯನ್ನು ದಿನಾಂಕ 18-03-2021 ರವರೆಗೆ ವಿಸ್ತರಿಸಿ ಕರ್ನಾಟಕ ಮಹಾನಗರಪಾಲಿಕೆಗಳ ಅಧಿನಿಯಮ 1976 ರ ಕಲಂ 112 (ಎ) (1) ಮತ್ತು ಕರ್ನಾಟಕ ಪೌರಸಭೆಗಳ ಅಧಿನಿಯಮ 1964 ರ ಕಲಂ.105 (1) ಕ್ಕೆ ತಿದ್ದುಪಡಿ ತರಲಾಗಿರುತ್ತದೆ.
2021-22ನೇ ಸಾಲಿನ ಎಪ್ರಿಲ್ ಮಾಹೆಯಲ್ಲಿ ಕೊವಿಡ್-19 ರ ಸಾಂಕ್ರಾಮಿಕ ರೋಗದ ಎರಡನೇ ಆಲೆಯು ಅತಿ ತೀವ್ರವಾಗಿ ಹರಡುತ್ತಿರುವುದರಿಂದ ಸಾರ್ವಜನಿಕರು ಸಾಮಾಜಿಕ ಅಂತರ ಮತ್ತು ಪ್ರತ್ಯೇಕತೆಗೆ ಹೆಚ್ಚಿನ ಗಮನ ಹರಿಸಬೇಕಾಗಿರುತ್ತದೆ. ಈ ನಿಟ್ಟಿನಲ್ಲಿ ಸರಕಾರ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದ ವ್ಯಾಪಾರ ವಹಿವಾಟುಗಳನ್ನು ಸ್ಥಗಿತಗೊಳಿಸಿರುತ್ತದೆ. ಈ ಹಿನ್ನಲೆಯಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ನಗರ ಸ್ಥಳೀಯ ಸಂಸ್ಥೆಗಳು 2021-22ನೇ ಸಾಲಿನ ಆರ್ಥಿಕ ವರ್ಷದ ಎಪ್ರಿಲ್ ತಿಂಗಳಲ್ಲಿ ಆಸ್ತಿ ತೆರಿಗೆ ಪಾವತಿಗೆ ನೀಡಲಾಗುತ್ತಿರುವ ಶೇ.5 ರ ರಿಯಾಯತಿಯ ಕಾಲಾವಧಿಯನ್ನು ಬಿಬಿಎಂಪಿ ಹೊರತು ಪಡಿಸಿ ಜೂನ್ 30 ರವರೆಗೆ ವಿಸ್ತರಿಸಿ ಸರಕಾರ ಸುತ್ತೋಲೆ ಹೊರಡಿಸಿದೆ.
0 comments:
Post a Comment