ಬೆಂಗಳೂರು, ಮೇ 02, 2021 (ಕರಾವಳಿ ಟೈಮ್ಸ್) : ರಾಜ್ಯದಲ್ಲಿ ಕೋವಿಡ್ 2ನೇ ಅಲೆ ಅಬ್ಬರಿಸುತ್ತಿದೆ. ರಾಜ್ಯ ರಾಜಧಾನಿ ಬೆಂಗಳೂರು ಸಹಿತ ಪ್ರಮುಖ ನಗರ ಪ್ರದೇಶಗಳಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿವೆ. ಸಾವುಗಳೂ ಹೆಚ್ಚಾಗುತ್ತಿವೆ. ಈ ಮಧ್ಯೆ 3ನೇ ಅಲೆ ಇನ್ನಷ್ಟು ಭೀಕರತೆಯನ್ನು ಸೃಷ್ಟಿಸುತ್ತಿದೆ ಎಂದು ಸ್ವತಃ ಸಿಎಂ ಆತಂಕ ವ್ಯಕ್ತಪಡಿಸಿದ್ದಲ್ಲದೆ ಈಗಲೇ ತಜ್ಞರ ಸಮಿತಿ ರಚಿಸುವುದಾಗಿ ಹೇಳಿಕೊಂಡಿದ್ದಾರೆ. ಆರೋಗ್ಯ ಸಚಿವ ಸುಧಾಕರ್ ನಿರ್ಬಂಧ ಪಾಲಿಸದಿದ್ದಲ್ಲಿ ಬೆಲೆ ತೆರಬೇಕಾದೀತು ಎಂಬ ಹೇಳಿಕೆ ನೀಡುತ್ತಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಮಧ್ಯೆಯೂ ಸರಕಾರ ಮಾರ್ಗಸೂಚಿಯೊಂದಿಗೆ ಹಾವು-ಏಣಿ ಆಟ ಆಡುವ ಮೂಲಕ ಜನರ ಜೀವದೊಂದಿಗೆ ಚೆಲ್ಲಾಟವಾಡುತ್ತಿರುವ ಬಗ್ಗೆ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ರಾಜ್ಯಾದ್ಯಂತ ಮೇ 12ರವರೆಗೆ ಕೊರೋನಾ ಕಫ್ರ್ಯೂ ವಿಧಿಸಿ ಆದೇಶ ನೀಡಿದ್ದ ಸರಕಾರ ಶನಿವಾರ ರಾತ್ರಿ ವೇಳೆಗೆ ಮತ್ತೆ ತನ್ನ ಮಾರ್ಗಸೂಚಿಯಲ್ಲಿ ಮಾರ್ಪಾಟು ಮಾಡಿ ಹೊಸ ಆದೇಶ ಹೊರಡಿಸಿದೆ. ಈಗಾಗಲೇ ಸರಕಾರ ಹೊರಡಿಸಿರುವ ಮಾರ್ಗಸೂಚಿ ಪ್ರಕಾರ ಬೆಳಿಗ್ಗೆ 7 ರಿಂದ 10 ಗಂಟೆಗವರೆಗೆ ಅಗತ್ಯ ವಸ್ತು ಅಂಗಡಿಗಳಿಗೆ ಮಾತ್ರ ತೆರೆಯಲು ಅವಕಾಶ ನೀಡಿ ಉಳಿದದ್ದೆಲ್ಲೂ ಸಂಪೂರ್ಣ ಶಟ್ ಡೌನ್ ಮಾಡಲು ಆದೇಶ ನೀಡಿತ್ತು. ಈ ನಡುವೆ ಇದೀಗ ಮಾರುಕಟ್ಟೆಗಳಲ್ಲಿ ಜನಸಂದಣಿ ನಿಯಂತ್ರಿಸುವ ಉದ್ದೇಶ ಎಂಬ ಕಾರಣ ನೀಡಿ ಸರಕಾರ ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ರವರೆಗೆ ವಿಸ್ತರಿಸಿ ದಿನಸಿ ಅಂಗಡಿಗಳು ಹಾಗೂ ಎಪಿಎಂಸಿ ತೆರೆಯಲು ಅವಕಾಶ ನೀಡಿದೆ. ಜೊತೆಗೆ ತಳ್ಳುವ ಗಾಡಿಗಳ ಮೂಲಕ ಹಣ್ಣು-ತರಕಾರಿಗಳನ್ನು ಕನಿಷ್ಠ ಬೆಲೆಗೆ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ ಎಲ್ಲಾ ರೀತಿಯ ಸಂತೆಗಳು, ವಾರದ ಸಂತೆಗಳ ಬಂದ್ ಆಗಲಿವೆ ಎಂದು ಹೊಸ ಮಾರ್ಗಸೂಚಿಯಲ್ಲಿ ಉಲ್ಲೇಖಿಸಿದೆ. ಸದ್ಯ ಎಲ್ಲೂ ಮಾರುಕಟ್ಟೆಯಾಗಲೀ, ಸಂತೆ ಮಾರುಕಟ್ಟೆಯಾಗಲೀ ತೆರೆದ ಬಗ್ಗೆ ಮಾಹಿತಿಯೇ ಇಲ್ಲ. ಹೀಗಿದ್ದೂ ಸಂತೆ ಮಾರುಕಟ್ಟೆ ಬಂದ್ ಎಂಬ ಪರಿಷ್ಕøತ ಆದೇಶದ ಅಗತ್ಯ ಏನಿತ್ತು ಎಂಬ ಜಿಜ್ಞಾಸೆ ಇದೀಗ ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ.
ಸರಕಾರಕ್ಕೆ ಕಾಲ ಕಾಲಕ್ಕೆ ತಜ್ಞರ ಸಮಿತಿ ಜಾಗೃತ ಸಂದೇಶವನ್ನು ನೀಡುತ್ತಿದ್ದು, ಇದರ ಆಧಾರದಿಂದಲೇ ಸರಕಾರ ಮಾರ್ಗಸೂಚಿ ಬಿಡುಗಡೆ ಮಾಡಿ ಕಫ್ರ್ಯೂ ವಿಧಿಸಿ ಆದೇಶ ಹೊರಡಿಸಿತ್ತು. ಈ ಆದೇಶ ನೀಡುವ ಸಂದರ್ಭದಲ್ಲೇ ಕೇವಲ ಮೂರು ಗಂಟೆಗಳ ಕಾಲ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿದರೆ ಜನಜಂಗುಳಿ ಉಂಟಾಗಲಿ ಎಂಬ ಕನಿಷ್ಠ ಜ್ಞಾನವೂ ಸಮಿತಿಗೆ ಇರಬೇಕಿತ್ತಲ್ಲವೇ? ಮೊದಲೇ ಈ ಅವಧಿಯನ್ನು 12 ಗಂಟೆವರೆಗೆ ವಿಧಿಸಿದ್ದರೆ ಇದೀಗ ಮಾರ್ಗಸೂಚಿ ಪರಿಷ್ಕರಿಸುವ ಹಕೀಕತ್ತಾದರೂ ಏನಿತ್ತು ಎಂಬ ಪ್ರಶ್ನೆ ಸಾರ್ವಜನಿಕರ ವಲಯದಲ್ಲಿ ಕೇಳಿ ಬರುತ್ತಿದೆ.
ಈಗಾಗಲೇ ಪೊಲೀಸರು ಹಾಗೂ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಕೊರೋನಾ ನಿಯಂತ್ರಣಕ್ಕಾಗಿ ಆಹೋರಾತ್ರಿ ಬೀದಿಯಲ್ಲಿ ಸಂಚರಿಸಿ ಜನರ ಅನಗತ್ಯ ಓಡಾಟಕ್ಕೆ ದಂಡ ಪ್ರಯೋಗದ ಮೂಲಕ ಕಡಿವಾಣ ಹಾಕುವಲ್ಲಿ ಸಂಪೂರ್ಣ ಯಶಸ್ವಿಯಾತ್ತಿರುವ ಹೊತ್ತಲ್ಲೆ ಸರಕಾರ ಮತ್ತೆ ಮಾರ್ಗಸೂಚಿ ಹೆಸರಿನಲ್ಲಿ ಜನರ ಬೇಕಾಬಿಟ್ಟಿ ಓಡಾಟಕ್ಕೆ ಗ್ರೀನ್ ಸಿಗ್ನಲ್ ನೀಡುತ್ತಿರುವುದು ಸರಿಯಲ್ಲ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.
0 comments:
Post a Comment