ಮೇ 10 ರಿಂದ 24ರ ವರೆಗೆ ಮತ್ತೊಂದು ಲಾಕ್`ಡೌನ್ ಘೋಷಣೆ!
ಕೇವಲ ಮಾರ್ಗಸೂಚಿ ಬಿಟ್ಟರೆ ಯಾವುದೇ ಜನಪರ ಯೋಜನೆಗಳಾಗಲೀ, ಪ್ಯಾಕೇಜ್ ಗಳಾಗಲೀ ಇಲ್ಲದ ಬಗ್ಗೆ ಜನಾಕ್ರೋಶ
ಬೆಂಗಳೂರು, ಮೇ 08, 2021 (ಕರಾವಳಿ ಟೈಮ್ಸ್) : ರಾಜ್ಯ ಸರಕಾರ ಮಾರ್ಗ ಸೂಚಿ ಆಟವನ್ನು ಮತ್ತೆ ಮುಂದುವರಿಸಿದೆ. ಈಗಾಗಲೇ ಸರಕಾರ ಘೋಷಿಸಿರುವ ಕಟ್ಟು ನಿಟ್ಟಿನ ಜನತಾ ಕರ್ಫ್ಯೂ ಅಧಿಕಾರಿಗಳ ಕಠಿಣ ಕ್ರಮದ ಹೊರತಾಗಿಯು ವಿಫಲವಾಗಿದೆ. ಪೊಲೀಸರು ಅಲ್ಲಲ್ಲಿ ಚೆಕ್ ಪೋಸ್ಟ್ ನಿರ್ಮಿಸಿ ವಾಹನ ತಪಾಸಣೆ ನಡೆಸಿ ವಾಹನಗಳನ್ನು ಸೀಝ್ ಮಾಡುವ ಪ್ರಕ್ರಿಯೆ ಚಾಲನೆಯಲ್ಲಿರುತ್ತಲೇ ಅನಗತ್ಯ ಹಾಗೂ ಮೋಜಿನ ಸಂಚಾರ ಯಥಾ ಪ್ರಕಾರ ಮುಂದುವರಿದಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳ ಸಹಿತ ಸಣ್ಣ ಪುಟ್ಟ ಎಳೆ ಪ್ರಾಯದ ಅಪ್ರಾಪ್ತ ಮಕ್ಕಳೂ ಕೂಡಾ ಯಾವುದೇ ಅಳುಕಿಲ್ಲದೆ ಝೀರೋ ಟ್ರಾಫಿಕ್ ರಸ್ತೆಯಲ್ಲಿ ವಾಹನ ಚಾಲನಾ ಮಜಾ ಅನುಭವಿಸುತ್ತಿರುವುದು ಕಂಡು ಬರುತ್ತಲೇ ಇದೆ. ಪೊಲೀಸರು ಹಳ್ಳಿ ಹಳ್ಳಿಗಳಿಗೂ ಧಾವಿಸಿ ಜನ ಸಂಚಾರ ಹಾಗೂ ಜನರ ಗುಂಪುಗೂಡುವಿಕೆಗೆ ನಿಯಂತ್ರಣ ಹೇರುತ್ತಿದ್ದಾರಾದರೂ ಅಲ್ಲಲ್ಲಿ ಯುವಕರು ರಸ್ತೆ, ಮೈದಾನ, ಖಾಲಿ ಜಾಗಗಳಲ್ಲಿ ಗುಂಪು ಸೇರುವುದು, ಕರ್ಫ್ಯೂ ನಿಯಮ ಉಲ್ಲಂಘಿಸಿ ಕ್ರಿಕೆಟ್ ಇನ್ನಿತರ ಆಟಗಳನ್ನು ಗುಂಪಾಗಿ ಆಡುತ್ತಿರುವುದೂ ಎಗ್ಗಿಲ್ಲದೆ ಸಾಗಿದೆ. ಒಟ್ಟಿನಲ್ಲಿ ಸರಕಾರ ಘೋಷಿಸಿದ ಜನತಾ ಕರ್ಫ್ಯೂ ಬಹುತೇಕ ವಿಫಲವಾಗಿ ಉದ್ದೇಶಿತ ಯಶಸ್ಸು ಸಾಧಿಸಲು ಸಾಧ್ಯವಾಗಿಲ್ಲ. ಪರಿಣಾಮ ಕೋವಿಡ್ ರೌದ್ರಾವತಾರ ಯಥಾ ಪ್ರಕಾರ ತಾಂಡವವಾಡುತ್ತಲೇ ಇದೆ. ಸರಕಾರ ಘೋಷಿಸಿದ ಕ್ರಮ ಕರಾರುವಕ್ಕಾಗಿ ಜಾರಿ ಮಾಡಲಾಗದೆ ದಿನಕ್ಕೊಂದು ಮಾರ್ಗಸೂಚಿ ಪ್ರಕಟಿಸುವ ಮೂಲಕ ಜನರನ್ನು ಕೋವಿಡ್ ಜೊತೆಗೆ ನಿತ್ಯ ಗೊಂದಲಕ್ಕೆ ದೂಡುತ್ತಿದೆ.
ಇದೀಗ ಮತ್ತೆ ಸಿಎಂ ಯಡಿಯೂರಪ್ಪ ಅವರು ಮೇ 10 ರಿಂದ 24ರ ವರೆಗೆ ರಾಜ್ಯಾದ್ಯಂತ ಸಂಪೂರ್ಣ ಲಾಕ್'ಡೌನ್ ಘೋಷಣೆ ಮಾಡಿ ಶುಕ್ರವಾರ ಆದೇಶಿಸಿದ್ದಾರೆ.
ರಾಜ್ಯದಲ್ಲಿ ಮೇ 10ರ ಬೆಳಿಗ್ಗೆ 6.30 ರಿಂದ 24 ರ ಬೆಳಿಗ್ಗೆ 6.30ರವರೆಗೆ ಸಂಪೂರ್ಣ ಲಾಕ್‌ಡೌನ್ ಮಾಡುವುದಾಗಿ ಸಿಎಂ ಘೋಷಿಸಿದ್ದಾರೆ.
ಕರ್ನಾಟದಲ್ಲಿ ಕೊರೊನಾ ದ್ವಿತೀಯ ಅಲೆ ಅಬ್ಬರ ಹೆಚ್ಚಾಗಿರುವ ಕಾರಣ ಸೋಂಕು ನಿಯಂತ್ರಣಕ್ಕೆ ಲಾಕ್ಡೌನ್ ಅನಿವಾರ್ಯ ಎಂದು ಹೇಳಿರುವ ಸಿಎಂ ಬಿಎಸ್ ವೈ, ರಾಜ್ಯದಲ್ಲಿ ಸಾವು-ನೋವುಗಳನ್ನು ತಡೆಗಟ್ಟಬೇಕೆಂದರೆ ಲಾಕ್ಡೌನ್ ಮಾಡಲೇಬೇಕೆಂದು ತಜ್ಞರು ಕೂಡಾ ಮೇಲಿಂದ ಮೇಲೆ ಎಚ್ಚರಿಕೆ ನೀಡಿದ್ದರು. ತಜ್ಞರ ಅಭಿಪ್ರಾಯದಂತೆ ಲಾಕ್ಡೌನ್ ಜಾರಿ ಮಾಡಲಾಗಿದೆ ಎಂದು ಹೇಳಿದರು.
ಇದೇ ವೇಳೆ ಲಾಕ್ ಡೌನ್ ವೇಳೆ ಹೋಟೆಲ್‌ಗಳು, ಪಬ್‌ಗಳು ಮತ್ತು ಬಾರ್‌ಗಳು ಮುಚ್ಚಲ್ಪಡುತ್ತವೆ. ಬೆಳಿಗ್ಗೆ 6 ರಿಂದ 10ರವರೆಗೆ ಮಾತ್ರ ತಿನಿಸುಗಳು, ಮಾಂಸದ ಅಂಗಡಿಗಳು ಮತ್ತು ತರಕಾರಿ ಅಂಗಡಿಗಳು ಕಾರ್ಯನಿರ್ವಹಿಸಬಹುದು. ಅದೂ ಹೊಟೆಲ್ ಗಳಲ್ಲಿ ಪಾರ್ಸೆಲ್ ಗೆ ಮಾತ್ರ ಅವಕಾಶವಿರುತ್ತದೆ. ಬೆಳಗ್ಗೆ 10 ಗಂಟೆಯ ಬಳಿಕ ಯಾರೂ ಕೂಡ ರಸ್ತೆಗಳಲ್ಲಿ ಓಡಾಡುವಂತಿಲ್ಲ, ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಅಗತ್ಯ ವಸ್ತುಗಳ ಸರಬರಾಜಿಗೆ ಗೂಡ್ಸ್ ವಾಹನಗಳ ಓಡಾಟ ಇರಲಿದ್ದು, ಆನ್‌ಲೈನ್ ಡೆಲಿವರಿ ಸರ್ವಿಸ್‌ಗೂ ಅವಕಾಶ ನೀಡಲಾಗಿದೆ ಎಂದು ಹೇಳಿದರು.
ಇದೇ ವೇಳೆ ಹಾಲಿ ಘೋಷಣೆ ಮಾಡಲಾಗಿರುವ ಲಾಕ್ ಡೌನ್ ನಿರ್ಧಾರ ತಾತ್ಕಾಲಿಕವಾಗಿದ್ದು, ವಲಸೆ ಕಾರ್ಮಿಕರು ಊರು ತೊರೆಯಬಾರದು ಎಂದು ನಾನು ವಿನಂತಿಸುತ್ತೇನೆ. ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದ ಸಾವು-ನೋವುಗಳು ಸಂಭವಿಸುತ್ತಿರುವುದರಿಂದ ಈ ಕ್ರಮ ಅನಿವಾರ್ಯವಾಗಿತ್ತು ಎಂದು ಸಿಎಂ ಸ್ಪಷ್ಟನೆ ನೀಡಿದ್ದಾರೆ.
ಗುರುವಾರ ಕೇರಳ ಮತ್ತು ರಾಜಸ್ಥಾನದಲ್ಲಿ ಕಂಪ್ಲೀಟ್ ಲಾಕ್‍ಡೌನ್ ಘೋಷಣೆಯಾಗಿದೆ. ಬಹುತೇಕ ರಾಜ್ಯಗಳು ಲಾಕ್‍ಡೌನ್ ಮೊರೆ ಹೋಗುತ್ತಿರುವ ಹಿನ್ನೆಲೆಯಲ್ಲಿ ಕಂಪ್ಲೀಟ್ ಲಾಕ್‍ಡೌನ್ ಮಾಡಿ ಕೊರೊನಾ ಚೈನ್ ಲಿಂಕ್ ಕಟ್ ಮಾಡಲು ಸರಕಾರ ಮುಂದಾಗಿದೆ ಎಂದು ಸಿಎಂ ತಿಳಿಸಿದ್ದಾರೆ.
ತಜ್ಞರ ಸಮಿತಿ ಕಳೆದೆರಡು ತಿಂಗಳುಗಳಿಂದ ಕಠಿಣ ಕ್ರಮ ಅನಿವಾರ್ಯ ಎಂದು ಸದಾ ಎಚ್ಚರಿಸುತ್ತಿದ್ದರೂ ಲಾಕ್ ಡೌನ್ ಇಲ್ಲ, ಕರ್ಫ್ಯೂ ಇಲ್ಲ, ಸೆಮಿ ಲಾಕ್ ಡೌನ್ ಇಲ್ಲ ಎಂದೇ ಸರಕಾರ ಹೇಳುತ್ತಲೇ ಬಂದಿತ್ತು. ಕನಿಷ್ಠ ಅನ್ ಲಾಕ್ ಸಂದರ್ಭ ಇದ್ದ ಯಾವುದೇ ಮಾರ್ಗಸೂಚಿ ಪಾಲನೆಗೂ ಸರಕಾರ ಕ್ರಮ ಕೈಗೊಂಡಿರಲಿಲ್ಲ. ಬೇಕಾಬಿಟ್ಟಿ ಆಡಂಬರದ ಕಾರ್ಯಕ್ರಮಗಳಿಗೂ, ರಾಜಕೀಯ ಕಾರ್ಯಕ್ರಮಗಳಿಗೂ, ವಿವಾಹ ಮತ್ತಿತರ ಸಮಾರಂಭಗಳಿಗೂ, ಧಾರ್ಮಿಕ ಸಮಾವೇಶಗಳಿಗೂ ಬೇಷರತ್ ಅನುಮತಿ ನೀಡಿತ್ತು. ಅಲ್ಲದೆ ಇತ್ತೀಚೆಗೆ ವಿವಿಧ ರಾಜ್ಯಗಳಲ್ಲಿ ನಡೆದ ಚುನಾವಣಾ ಪ್ರಚಾರಕ್ಕೂ ರಾಜ್ಯದ ವಿವಿಧ ಪಕ್ಷಗಳ ನಾಯಕರು-ಕಾರ್ಯಕರ್ತರನ್ನು ತೆರಳಲು ಬೇಕಾಬಿಟ್ಟಿ ಅನುಮತಿ ನೀಡಿತ್ತು. ಈ ಸಂದರ್ಭ ಯಾವುದೇ ಮುಂಜಾಗ್ರತಾ ಕ್ರಮಗಳನ್ನೂ ಕೈಗೊಂಡಿರಲಿಲ್ಲ. ಇದೀಗ ಎಲ್ಲವೂ ಕೈ ಮೀರಿದ ತಜ್ಞರ ಎಚ್ಚರಿಕೆ ನೀಡಿದೆ ಎಂದು ಮತ್ತೆ ದಿನಕ್ಕೊಂದು ಮಾರ್ಗಸೂಚಿಯ ಮೊರೆ ಹೋಗುವ ಮೂಲಕ ಜನರ ಜೀವನದೊಂದಿಗೆ ಚೆಲ್ಲಾಟವಾಡಲು ಸರಕಾರ ಆರಂಭಿಸಿದೆ. ಅಲ್ಲದೆ ಕಠಿಣ ಲಾಕ್ ಡೌನ್ ಘೋಷಣೆಯ ಮೊರೆ ಮಾತ್ರ ಹೋಗುವ ಸರಕಾರ ಜನರ ಹಿತಕ್ಕಾಗಿ ಯಾವುದೇ ಪ್ಯಾಕೇಜ್ ಗಳನ್ನು ಕೂಡಾ ನೆರೆ ರಾಜ್ಯಗಳಂತೆ ಘೋಷಿಸದೆ ಜನರನ್ನು ಸಂಕಷ್ಟಕ್ಕೆ ದೂಡುವ ಕ್ರಮದ ಬಗ್ಗೆ ಇದೀಗ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
0 comments:
Post a Comment