ನೆಲ್ಯಾಡಿ, ಮೇ 16, 2021 (ಕರಾವಳಿ ಟೈಮ್ಸ್) : ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ನೆಲ್ಯಾಡಿ ಸಮೀಪದ ನೀರಕಟ್ಟೆ ಎಂಬಲ್ಲಿ ಹೆದ್ದಾರಿ ಬದಿ ಕುಸಿತ ಉಂಟಾಗಿದ್ದು, ತೀವ್ರ ಅಪಾಯದ ಕರೆ ಗಂಟೆ ಭಾರಿಸುತ್ತಿದೆ.
ನೆಲ್ಯಾಡಿ ಪೇಟೆಯ ಕೂಗಳತೆಯ ದೂರದ ನೀರಕಟ್ಟೆ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿಯ ಒಂದು ಬದಿ ಕಳೆದ ಕೆಲ ದಿನಗಳಿಂದ ಸಂಪೂರ್ಣ ಕುಸಿತ ಉಂಟಾಗಿದ್ದು, ವಾಹನ ಸವಾರರು ಒಂದಷ್ಟು ಯಾಮಾರಿದರೂ ಇಲ್ಲಿ ಗಂಭೀರ ಅಪಾಯ ಎದುರಾಗು ಸಾಧ್ಯತೆ ಬಗ್ಗೆ ವಾಹನ ಸವಾರರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಅದೂ ಕೂಡಾ ಹೆದ್ದಾರಿಯ ತಿರುವು ಪ್ರದೇಶ ಇದಾಗಿದ್ದು, ಸಣ್ಣ ವಾಹನಗಳ ಸವಾರರು ನಿಯಂತ್ರಣ ಹೆಚ್ಚು ಕಡಿಮೆಯಾದರೆ ಗಂಭೀರ ಅಪಾಯ, ಪ್ರಾಣಾಪಾಯ ಎದುರಾಗುವ ಸಾಧ್ಯತೆಗಳನ್ನೂ ಅಲ್ಲಗಳೆಯುವಂತಿಲ್ಲ.
ಸದ್ಯ ಕೊರೋನಾ ಲಾಕ್ ಡೌನ್ ಜಾರಿಯಲ್ಲರಿವುದರಿಂದ ಹೆದ್ದಾರಿಯಲ್ಲಿ ವಾಹನ ಸಂಚಾರ ಕಡಿಮೆ ಇರುವುದರಿಂದ ಒಂದಷ್ಟು ನೆಮ್ಮದಿ ಕಂಡು ಬರುತ್ತಿದ್ದರೂ ಇಲ್ಲಿನ ಹೆದ್ದಾರಿ ಬದಿ ಕುಸಿತ ಭಾರೀ ಅಪಾಯದ ಮುನ್ಸೂಚನೆ ನೀಡುತ್ತಿದೆ. ರಾತ್ರಿ ವೇಳೆಯಲ್ಲಂತೂ ಈ ಹೆದ್ದಾರಿ ಕುಸಿತ ವಾಹನ ಸವಾರರ ಗಮನಕ್ಕೂ ಬಾರದ ಸ್ಥಿತಿಯಲ್ಲಿದೆ. ಇದು ಅಪಾಯಕ್ಕೆ ಆಹ್ವಾನವನ್ನು ನೀಡುತ್ತಿದೆ.
ತಕ್ಷಣ ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ತುರ್ತು ಕಾಮಗಾರಿ ನಡೆಸಿ ವಾಹನ ಸವಾರರ ಜೀವಕ್ಕೆ ಅಪಾಯ ಎದುರಾಗುವ ಮುನ್ನ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಸಾರ್ವಜನಿಕರು ಹಾಗೂ ವಾಹನ ಸವಾರರು ಆಗ್ರಹಿಸಿದ್ದಾರೆ.
0 comments:
Post a Comment