ಅಂಡಮಾನ್, ಮೇ 26, 2021 (ಕರಾವಳಿ ಟೈಮ್ಸ್) : ಲಕ್ಷದ್ವೀಪದಲ್ಲಿ ಉಂಟಾಗುತ್ತಿರುವ ಬೆಳವಣಿಗೆಗಳು ಇಲ್ಲಿನ ಬಿಜೆಪಿಗೆ ತೀವ್ರ ಹಿನ್ನಡೆ ಉಂಟು ಮಡಿದ್ದು, ಕನಿಷ್ಟ 8 ಮಂದಿ ಪದಾಧಿಕಾರಿಗಳು ಪಕ್ಷ ತೊರೆದಿದ್ದಾರೆ. ಹೊಸ ಆಡಳಿತಾಧಿಕಾರಿ ಪ್ರಫುಲ್ ಖೋಡಾ ಪಟೇಲ್ ಅವರ ನಿರಂಕುಶವಾದಿ ನಡೆಯನ್ನು ವಿರೋಧಿಸಿ ಬಿಜೆಪಿಯ ಪದಾಧಿಕಾರಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.
ಪ್ರಫುಲ್ ಖೋಡಾ ಪಟೇಲ್ ಅವರ ನಡೆಯಿಂದ ಸ್ಥಳೀಯ ಸಂಸ್ಕೃತಿ ಹಾಗೂ ಶಾಂತಿ ಹಾಳಾಗಲಿದೆ ಎಂದು ಸ್ಥಳೀಯ ಬಿಜೆಪಿ ನಾಯಕರು ರಾಜೀನಾಮೆಗೆ ಕಾರಣ ನೀಡಿದ್ದಾರೆ. ಮುಂಬರುವ ದಿನಗಳಲ್ಲಿ ರಾಜೀನಾಮೆ ನೀಡುವವರ ಸಂಖ್ಯೆ ಹೆಚ್ಚಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಜನವಿರೋಧಿ ಆಡಳಿತದ ಬಗ್ಗೆ ಕೇಂದ್ರ ಸರಕಾರ ಇದುವರೆಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡದೇ ಇರುವುದರ ಬಗ್ಗೆ ಗಮನ ಸೆಳೆಯುವುದಕ್ಕಾಗಿ ರಾಜೀನಾಮೆ ನೀಡಿರುವುದಾಗಿ ಸ್ಥಳೀಯ ಬಿಜೆಪಿ ನಾಯಕರು ಹೇಳಿಕೊಂಡಿದ್ದಾರೆ. ಲಕ್ಷದ್ವೀಪದಲ್ಲಿ ಬಿಜೆಪಿ ನಾಯಕರು ರಾಜೀನಾಮೆ ನೀಡುತ್ತಿರುವುದು ಕೇರಳದ ಬಿಜೆಪಿ ನಾಯಕರಿಗೂ ಸಂಘಟನಾತ್ಮಕ ದೃಷ್ಟಿಯಿಂದ ಉಂಟಾಗಿರುವ ಬಹುದೊಡ್ಡ ಹಿನ್ನಡೆಯಾಗಿದೆ ಎನ್ನಲಾಗುತ್ತಿದ್ದು, ರಾಷ್ಟ್ರೀಯ ಉಪಾಧ್ಯಕ್ಷ ಎಪಿ ಅಬ್ದುಲ್ಲಾ ಕುಟ್ಟಿ ಲಕ್ಷದ್ವೀಪದ ಉಸ್ತುವಾರಿಯಾಗಿದ್ದು, ರಾಜ್ಯಾಧ್ಯಕ್ಷ ಕೆ ಸುರೇಂದ್ರನ್ ಅವರಿಗೂ ಇದು ಹಿನ್ನೆಡೆಯಾಗಿದೆ. ಇಬ್ಬರೂ ನಾಯಕರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಲಕ್ಷದ್ವೀಪದಲ್ಲಿ ಉಂಟಾಗಿರುವ ಸಮಸ್ಯೆಯನ್ನು ಮುಸ್ಲಿಂ ಸಂಘಟನೆಗಳು ಹಾಗೂ ಕೇರಳದಲ್ಲಿನ ಎಡಪಕ್ಷಗಳು ಸೃಷ್ಟಿಸಿವೆ ಎಂದು ಹೇಳಿಕೊಂಡಿದ್ದಾರೆ.
ಪಟೇಲ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿಯ ಕನಸುಗಳನ್ನು ಲಕ್ಷದ್ವೀಪದಲ್ಲಿ ಜಾರಿಗೊಳಿಸಲು ಯತ್ನಿಸುತ್ತಿದ್ದಾರೆ ಎಂದು ಅಬ್ದುಲ್ಲಾ ಕುಟ್ಟಿ ಹೇಳಿಕೆ ನೀಡಿದ್ದಾರೆ.
ಮಾಜಿ ರಾಜ್ಯ ಉಪಾಧ್ಯಕ್ಷ ಎಂಸಿ ಮುತ್ತುಕೋಯ, ಖಜಾಂಚಿ ಬಿ. ಶುಕೂರ್, ಬಿಜೆವೈಎಂ ಮಾಜಿ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಹಸೀಮ್ ರಾಜೀನಾಮೆ ನೀಡಿರುವ ನಾಯಕರ ಪೈಕಿ ಪ್ರಮುಖರಾಗಿದ್ದಾರೆ.
0 comments:
Post a Comment