ತಿರುವನಂತಪುರಂ, ಮೇ 06, 2021 (ಕರಾವಳಿ ಟೈಮ್ಸ್) : ಕೊರೊನಾ ವೈರಸ್ 2ನೇ ಅಲೆ ತೀವ್ರಗೊಳ್ಳುತ್ತಿರುವ ಹಿನ್ನಲೆಯಲ್ಲಿ ಕೇರಳ ಪಿಣರಾಯಿ ಸರಕಾರ ಮೇ 8 ರಿಂದ 16 ರವರೆಗೆ ಸಂಪೂರ್ಣ ಲಾಕ್‍ಡೌನ್ ಘೋಷಿಸಿ ಆದೇಶಿಸಿದೆ. ಶನಿವಾರ ಬೆಳಗ್ಗೆ 6 ಗಂಟೆಯಿಂದ ಲಾಕ್‍ಡೌನ್ ಜಾರಿಗೆ ಬರಲಿದೆ. ಮುಖ್ಯಮಂತ್ರಿಯ ನಿರ್ದೇಶನದ ಮೇರೆಗೆ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು 1000 ಟನ್ ಆಮದು ಮಾಡಿದ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ (ಎಲ್‍ಎಂಒ) ನೀಡಲು ಕ್ರಮ ಕೈಗೊಳ್ಳಬೇಕೆಂದು ಮುಖ್ಯಮಂತ್ರಿ ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ.
ರಾಜ್ಯಕ್ಕೆ ಕನಿಷ್ಠ 1000 ಟನ್ ಆಮದು ಮಾಡಿದ ಆಮ್ಲಜನಕದ ಅಗತ್ಯವಿದೆ. ರಾಜ್ಯದಲ್ಲಿ ದ್ರವ ವೈದ್ಯಕೀಯ ಆಮ್ಲಜನಕದ ಒಟ್ಟಾರೆ ಯೋಜಿತ ಅವಶ್ಯಕತೆ ಹೆಚ್ಚಾಗುತ್ತಿರುವುದರಿಂದ, ರಾಜ್ಯದೊಳಗಿನ ಬಫರ್ ಸಂಗ್ರಹಣೆಯನ್ನು ತುರ್ತಾಗಿ ಹೆಚ್ಚಿಸುವ ಅಗತ್ಯವಿದೆ ಎಂದು ಪಿಣರಾಯಿ ತಿಳಿಸಿದ್ದಾರೆ.
ವಿದೇಶಾಂಗ ಸಚಿವಾಲಯವು ಅಗತ್ಯವಿರುವ ಪ್ರಮಾಣವನ್ನು ಹಂಚಿಕೆ ಮಾಡಲು ಸಲಹೆ ನೀಡಬೇಕೆಂದು ಪ್ರಧಾನಿಯವರನ್ನು ವಿನಂತಿಸಿದ್ದೇವೆ. ಹತ್ತಿರದ ಉಕ್ಕಿನ ಸ್ಥಾವರದಿಂದ ರಾಜ್ಯಕ್ಕೆ 500 ಮೆಟ್ರಿಕ್ ಟನ್ ಎಲ್‍ಎಂಒ ಹಂಚಿಕೆ ಮಾಡಲು ಸಲಹೆ ನೀಡುವಂತೆ ಕೂಡ ಕೋರಲಾಗಿದೆ ಎಂದರು.
ಕೇರಳದಾದ್ಯಂತ ಸರಕಾರಿ ಆಸ್ಪತ್ರೆಗಳಲ್ಲಿ 2,857 ಐಸಿಯು ಹಾಸಿಗೆಗಳಿವೆ. ಇದರಲ್ಲಿ 996 ಹಾಸಿಗೆಗಳನ್ನು ಕೋವಿಡ್ ರೋಗಿಗಳ ಚಿಕಿತ್ಸೆಗಾಗಿ ಮತ್ತು 756 ಹಾಸಿಗೆಗಳನ್ನು ಕೋವಿಡ್ ಅಲ್ಲದ ರೋಗಿಗಳಿಗೆ ಬಳಸಲಾಗುತ್ತಿದೆ ಎಂದವರು ಹೇಳಿದರು.
ಸರಕಾರಿ ಆಸ್ಪತ್ರೆಗಳಲ್ಲಿ ಸುಮಾರು ಶೇ. 38.7 ರಷ್ಟು ಐಸಿಯು ಹಾಸಿಗೆಗಳು ಇನ್ನೂ ಲಭ್ಯವಿವೆ. ಖಾಸಗಿ ಆಸ್ಪತ್ರೆಗಳಲ್ಲಿ 7,085 ಐಸಿಯು ಹಾಸಿಗೆಗಳಿವೆ ಮತ್ತು ಪ್ರಸ್ತುತ 1,037 ಹಾಸಿಗೆಗಳನ್ನು ಕೋವಿಡ್ ರೋಗಿಗಳಿಗೆ ಬಳಸಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಸರಕಾರಿ ಆಸ್ಪತ್ರೆಗಳಲ್ಲಿ ಪ್ರಸ್ತುತ 2,293 ವೆಂಟಿಲೇಟರ್‍ಗಳ ಲಭ್ಯವಿದೆ. ಈ ಪೈಕಿ 441 ವೆಂಟಿಲೇಟರ್‍ಗಳನ್ನು ಕೋವಿಡ್ ರೋಗಿಗಳ ಚಿಕಿತ್ಸೆಗಾಗಿ ಮತ್ತು 185 ಕೋವಿಡ್ ಅಲ್ಲದ ರೋಗಿಗಳಿಗೆ ಬಳಸಲಾಗುತ್ತಿದೆ ಎಂದರು. 50 ಲಕ್ಷ ಡೋಸ್ ಕೋವಿಶೀಲ್ಡ್ ಮತ್ತು 25 ಲಕ್ಷ ಡೋಸ್ ಕೋವಾಕ್ಸಿನ್ ಲಸಿಕೆಗಳನ್ನು ಕೇರಳಕ್ಕೆ ಮಂಜೂರು ಮಾಡುವಂತೆ ಅವರು ಕೇಂದ್ರಕ್ಕೆ ಮನವಿ ಮಾಡಿದ್ದಾರೆ.
0 comments:
Post a Comment