ತಿರುವನಂತಪುರಂ, ಮೇ 02, 2021 (ಕರಾವಳಿ ಟೈಮ್ಸ್) : ಕೇರಳ ವಿಧಾನಸಭಾ ಚುನಾವಣೆಯ ಫಲಿತಾಂಶ ಭಾನುವಾರ ಪ್ರಕಟಗೊಂಡಿದ್ದು, ಆಡಳಿತರೂಢ ಎಲ್.ಡಿ.ಎಫ್. ಮೈತ್ರಿಕೂಟ ಭರ್ಜರಿ ಮುನ್ನಡೆ ಸಾಧಿಸಿದೆ. ದೇವರ ನಾಡಿನಲ್ಲಿ ಮತ್ತೆ ಪಿಣರಾಯ್ ವಿಜಯನ್ ಯುವ ಮುಂದುವರಿಯಲಿದೆ. ಮತ ಎಣಿಕೆಯ ಆರಂಭದಿಂದಲೇ ಮುನ್ನಡೆ ಕಾಯ್ದುಕೊಂಡು ಬಂದಿದ್ದ ಎಲ್‍ಡಿಎಫ್ ಕೊನೆವರೆಗೂ ಜೈತ್ರಯಾತ್ರೆ ಮುಂದುವರಿಸುವ ಮೂಲಕ ಸತತ ಎರಡನೇ ಬಾರಿ ಗದ್ದುಗೆ ಹಿಡಿದಿದೆ.
ಒಟ್ಟು 140 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಎಲ್‍ಡಿಫ್ 93ರಲ್ಲಿ ಮುನ್ನಡೆ ಸಾಧಿಸಿದರೆ ಯುಡಿಎಫ್ 43 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ. ಇತರರು 4 ಸ್ಥಾನದಲ್ಲಿ ಮುನ್ನಡೆಯಲ್ಲಿದ್ದರೆ ಬಿಜೆಪಿ ಈ ಬಾರಿ ಖಾತೆ ತೆರೆಯುವಲ್ಲಿ ವಿಫಲವಾಗಿದೆ. ಆರಂಭದಲ್ಲಿ ಬಿಜೆಪಿ ಕೋಯಿಕ್ಕೋಡ್ ದಕ್ಷಿಣ, ಕಾಸರಗೋಡು, ಪಾಲಕ್ಕಾಡ್, ತ್ರಿಶ್ಯೂರ್, ನೇಮಂನಲ್ಲಿ ಮುನ್ನಡೆಯಲ್ಲಿತ್ತು. ನಂತರ ಈ ಕ್ಷೇತ್ರಗಳಲ್ಲಿ ಹಿನ್ನಡೆ ಅನುಭವಿಸಿತು.
ಆರಂಭದಲ್ಲಿ ಮೆಟ್ರೋ ಮ್ಯಾನ್ ಶ್ರೀಧರನ್ ಅವರು ಪಾಲಕ್ಕಾಡ್‍ನಲ್ಲಿ ಮುನ್ನಡೆ ಸಾಧಿಸಿದ್ದರು. ಕೊನೆಯ ಸುತ್ತುಗಳಲ್ಲಿ ಕಾಂಗ್ರೆಸ್ ಶಫಿ ಪರಂಬಿಗೆ ಮುನ್ನಡೆ ಸಿಕ್ಕಿದ್ದರಿಂದ ಶ್ರೀಧರನ್ ಅವರಿಗೆ ಸೋಲಾಗಿದೆ.
ಕಳೆದ ಚುನಾವಣೆ ನೇಮಂ ಕ್ಷೇತ್ರದಲ್ಲಿ ಬಿಜೆಪಿ ಜಯಗಳಿಸುವ ಮೂಲಕ ಇತಿಹಾಸ ಸೃಷ್ಟಿಸಿತ್ತು. ಮಾಜಿ ಕೇಂದ್ರ ಸಚಿವ ಒ ರಾಜಗೋಪಾಲ್ ಇಲ್ಲಿ ಗೆಲುವು ಸಾಧಿಸಿದ್ದರು. ಈ ಬಾರಿ ಇಲ್ಲಿ ಗೆಲುವು ಸಾಧಿಸಲು ಮಿಜೋರಾಂ ರಾಜ್ಯಪಾಲರಾಗಿದ್ದ ಕುಮ್ಮನಂ ರಾಜಶೇಖರ್ ಅವರನ್ನು ಬಿಜೆಪಿ ಕಣಕ್ಕಿಳಿಸಿತ್ತು.
ಈ ಬಾರಿ ಕನಿಷ್ಠ 5 ಕ್ಷೇತ್ರಗಳಲ್ಲಿ ಬಿಜೆಪಿ ಜಯಗಳಿಸಲೇಬೇಕೆಂದು ಪಣ ತೊಟ್ಟಿತ್ತು. ಈ ನಿಟ್ಟಿನಲ್ಲಿ ಕರ್ನಾಟಕದ ಡಿಸಿಎಂ ಅಶ್ವತ್ಥ ನಾರಾಯಣ, ದಕ್ಷಿಣ ಕನ್ನಡ ಶಾಸಕರು ಸಹ ಕೇರಳದಲ್ಲಿ ಚುನಾವಣಾ ಪ್ರಚಾರ ಕೈಗೊಂಡಿದ್ದರು.
0 comments:
Post a Comment