ನೆಲ್ಯಾಡಿ, ಮೇ 05, 2021 (ಕರಾವಳಿ ಟೈಮ್ಸ್) : ಕಡಬ ತಾಲೂಕಿನ ಕೌಕ್ರೌಡಿ ಗ್ರಾಮದ ಪುತ್ಯೆ ಎಂಬಲ್ಲಿ ಮಂಗಳವಾರ ರಾತ್ರಿ ಸುಮಾರು 11.15 ಗಂಟೆಗೆ ಕಾರು ಹಾಗೂ ಬೈಕ್ ಚಾಲಕರು ಪರಸ್ಪರ ದಾರಿ ಕೊಡದ ವಿಚಾರಕ್ಕೆ ಸಂಬಂಧಿಸಿ ಮಾತಿನ ಚಕಮಕಿ ನಡೆಸಿಕೊಂಡು ಬಳಿಕ ಹಲ್ಲೆ ನಡೆಸಿದ ಬಗ್ಗೆ ಕಡಬ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿದೆ.
ದ್ವಿಚಕ್ರವಾಹನ ಸವಾರ ಕೌಕ್ರಾಡಿ ಗ್ರಾಮದ ಪಟ್ಲಡ್ಕದ ಮೊಹಮ್ಮದ್ ಶರೀಫ್ (23) ನೀಡಿದ ದೂರಿನಲ್ಲಿ, ನಾನು ದ್ವಿಚಕ್ರ ವಾಹನದಲ್ಲಿ ನೆಲ್ಯಾಡಿ ಕಡೆಗೆ ಬರುತ್ತಾ ಕೌಕ್ರಾಡಿ ಗ್ರಾಮದ ಪುತ್ಯೆ ಎಂಬಲ್ಲಿಗೆ 11.15 ಗಂಟೆಗೆ ತಲುಪಿದಾಗ ಕಟ್ಟೆಮಜಲು ಕಡೆಯಿಂದ ಬಿಳಿ ಬಣ್ಣದ ಎರ್ಟಿಗಾ ಕಾರು ಬರುತ್ತಿದ್ದುದನ್ನು ನೋಡಿ ನನ್ನ ದ್ವಿಚಕ್ರ ವಾಹನವನ್ನು ನಿಲ್ಲಿಸಿದೆ. ಆಗ ಎರ್ಟಿಗಾ ಕಾರಿನ ಚಾಲಕ ನಾಗೇಶ್ ದ್ವಿಚಕ್ರ ವಾಹನದ ಹಿಂಬಾಗಕ್ಕೆ ಒರೆಸಿದಂತಹ ರೀತಿಯಲ್ಲಿ ಚಲಾಯಿಸಿಕೊಂಡು ಸ್ವಲ್ಪ ಮುಂದೆ ಹೋಗಿ ಕಾರನ್ನು ನಿಲ್ಲಿಸಿ ನನ್ನ ಬಳಿಗೆ ಬಂದು ಅವಾಚ್ಯ ಪದಗಳಿಂದ ಬೈದಿದ್ದು ಕುತ್ತಿಗೆಯ ಎಡ ಭಾಗಕ್ಕೆ ಕಲ್ಲಿನಿಂದ ಹೊಡೆದು ಹಲ್ಲೆ ನಡೆಸಿರುವುದಲ್ಲದೇ ಆರೋಪಿತರಾದ ಕಿಶೋರ್ ಮತ್ತು ಇತರರು ಕೈಯಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಠಾಣಾ ಅಪರಾಧ ಕ್ರಮಾಂಕ 44/2021 ಕಲಂ 323, 324, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
ಇದೇ ಘಟನೆಗೆ ಸಂಬಂಧಿಸಿದಂತೆ ಕಾರು ಚಾಲಕ ಕೌಕ್ರಾಡಿ ಗ್ರಾಮದ ಬಾಗೇಜಾಲಿನ ನಾಗೇಶ್ (31) ಪ್ರತಿ ದೂರು ನೀಡಿದ್ದು, ನನ್ನ ಎರ್ಟಿಗಾ ಕಾರಿನಲ್ಲಿ ನನ್ನ ಪತ್ನಿಯಾದ ವಿಶಾಲಾಕ್ಷಿಯ ಜೊತೆ ಕೌಕ್ರಾಡಿ ಗ್ರಾಮದ ಪುತ್ಯೆ ಎಂಬಲ್ಲಿಗೆ ತಲುಪಿದಾಗ ಆರೋಪಿಯಾದ ಮಹಮ್ಮದ್ ಶರೀಫ್ ಹಾಗೂ 4 ಜನರು ರಸ್ತೆಯಲ್ಲಿ ದ್ವಿಚಕ್ರ ವಾಹನವನ್ನು ನಿಲ್ಲಿಸಿ ಮಾತನಾಡಿಕೊಂಡಿರುವುದನ್ನು ನೋಡಿ ದಾರಿ ಬಿಡುವಂತೆ ಹೇಳಿದಾಗ ಕದಲದೆ ಇದ್ದುದರಿಂದ ಅಲ್ಲಿಯೇ ಬದಿಯಿಂದ ಕಾರನ್ನು ಚಲಾಯಿಸಿಕೊಂಡು ಹೋದೆ. ಆ ಸಂದರ್ಭದಲ್ಲಿ ಕಾರಿನ ಹಿಂದಿನಿಂದ ಶಬ್ಧ ಕೇಳಿ ಕಾರನ್ನು ನಿಲ್ಲಿಸಿ ಕಾರಿನ ಹಿಂದಕ್ಕೆ ಹೋಗಿ ಅಲ್ಲಿದ್ದ ಆರೋಪಿ ಶರೀಫ್ ಮತ್ತು ಇತರರಲ್ಲಿ ವಿಚಾರಿಸಿದಾಗ ಶರೀಫ್ ಅವಾಚ್ಯವಾಗಿ ಬೈದು ಕಾಲರನ್ನು ಹಿಡಿದೆಳೆದಿದ್ದಾನೆ. ಈ ವೇಳೆ ಬಿಡಿಸಲು ಬಂದ ನನ್ನ ಪತ್ನಿ ವಿಶಾಲಾಕ್ಷಿಯನ್ನು ಶರೀಫ್ ಮತ್ತು ಇತರರು ದೂಡಿದ್ದಾರೆ. ಅಷ್ಟೇ ಅಲ್ಲದೇ ಆರೋಪಿತರೆಲ್ಲರೂ ಕೈಯಿಂದ ಮತ್ತು ಕಾಲಿನಿಂದ ಹಲ್ಲೆ ನಡೆಸಿ ಜೀವಬೆದರಿಕೆ ಒಡ್ಡಿದ್ದಾರೆ ಎಂದು ದೂರಿದ್ದಾರೆ.
ಈ ಬಗ್ಗೆ ಠಾಣಾ ಅಪರಾಧ ಕ್ರಮಾಂಕ 43/2021 ಕಲಂ 143, 147, 504, 354, 323, 506 ಜೊತೆಗೆ 149 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ. ಎರಡೂ ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
0 comments:
Post a Comment