ಬೆಂಗಳೂರು, ಮೇ 05, 2021 (ಕರಾವಳಿ ಟೈಮ್ಸ್) : ಐಪಿಎಲ್ ಪಂದ್ಯಾವಳಿಯನ್ನು ರದ್ಧು ಪಡಿಸಿರುವುದು ನ್ಯಾಯ ಸಮ್ಮತವಾಗಿದೆ ಎಂದು ಕಾಂಗ್ರೆಸ್ ವಿಧಾನಪರಿಷತ್ ಸದಸ್ಯ ಪ್ರಕಾಶ್ ರಾಥೋಡ್ ಸಂತಸ ವ್ಯಕ್ತಪಡಿಸಿದ್ದಾರೆ. ಜಗತ್ತಿನಾದ್ಯಂತ ಕೊರೋನಾ ಸೋಂಕು ತನ್ನ 2ನೇ ಅಲೆಯ ರೌದ್ರ ನರ್ತನ ನಡೆಸುತ್ತಿರುವ ಸಮಯದಲ್ಲಿ ಐಪಿಎಲ್ ಪಂದ್ಯದ ಅವಶ್ಯಕತೆಯಿಲ್ಲ, ಐಪಿಎಲ್ ಪಂದ್ಯಾವಳಿಯನ್ನು ರದ್ದುಪಡಿಸುವಂತೆ ಕೋರಿ ಎಪ್ರಿಲ್ 27 ರಂದು ಪ್ರಕಾಶ್ ರಾಥೋಡ್ ಪತ್ರ ಬರೆದಿದ್ದರು.
ಆದರೆ ಈ ಸಂದರ್ಭ ಸ್ವತಃ ಅವರ ಪಕ್ಷದ ನಾಯಕರೂ ಸೇರಿದಂತೆ ಹಲವು ವಿರೋಧ ವ್ಯಕ್ತಪಡಿಸಿದ್ದರು. ಕ್ರಿಕೆಟ್ ಅಭಿಮಾನಿಗಳಿಗೆ ನಿರಾಸೆ ಉಂಟಾಗುತ್ತದೆ ಎಂದು ನಾಯಕರು ತಿಳಿಸಿದ್ದರು ಎನ್ನಲಾಗಿದೆ. ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಕೂಡ ಎಪ್ರಿಲ್ 26 ರಿಂದ ಐಪಿಎಲ್ ಪಂದ್ಯ ಕುರಿತ ಯಾವುದೇ ಸುದ್ದಿಯನ್ನು ಪ್ರಕಟಿಸದಿರಲು ನಿರ್ಧರಿಸಿತ್ತು ಎಂಬುದನ್ನು ಈ ಸಂದರ್ಭ ಸ್ಮರಿಸಿಕೊಳ್ಳಬಹುದು.
ಇಡೀ ಜಗತ್ತೆ ಕೊರೋನಾ ವೈರಸ್ಸಿನಿಂದ ನರಳಾಡುತ್ತಿರುವ ಸಂದರ್ಭ ಐಪಿಎಲ್‍ನಂತಹ ಮನೋರಂಜನಾ ಪಂದ್ಯಗಳ ಅವಶ್ಯಕತೆಯಿದೆಯೇ? ಕ್ರಿಕೆಟ್‍ಗಾಗಿ ಸ್ಟೇಡಿಯಂಗಳನ್ನು ಸಜ್ಜುಗೊಳಿಸುವ ಬದಲಾಗಿ ಅವುಗಳನ್ನು ಆಸ್ಪತ್ರೆಗಳಾಗಿ ಪರಿವರ್ತಿಸಿ ಕೋವಿಡ್ ಕೇರ್ ಸೆಂಟರ್‍ಗಳನ್ನಾಗಿ ಯಾಕೆ ಮಾಡಬಾರದು ಎಂದು ಪ್ರಕಾಶ್ ರಾಥೋಡ್ ಪ್ರಶ್ನಿಸಿದ್ದರು. ಇದೀಗ ಆಟಗಾರರಿಗೇ ಕೊರೋನಾ ಪಾಸಿಟಿವ್ ವಕ್ಕರಿಸಿದ ಹಿನ್ನಲೆಯಲ್ಲಿ ಬಿಸಿಸಿಐ ಐಪಿಎಲ್ ಪಂದ್ಯಗಳನ್ನು ರದ್ದುಗೊಳಿಸಿದೆ. ಈ ಸಂದರ್ಭದಲ್ಲಿ ಎಂ.ಎಲ್.ಸಿ. ಪ್ರಕಾಶ್ ರಾಥೋಡ್ ಸಂತೋಷ ವ್ಯಕ್ತಪಡಿಸಿದ್ದಾರೆ.
0 comments:
Post a Comment