ಬಂಟ್ವಾಳ, ಮೇ 07, 2021 (ಕರಾವಳಿ ಟೈಮ್ಸ್) : ಅಖಿಲ ಭಾರತ ಬ್ಯಾರಿ ಪರಿಷತ್ (ರಿ) ಮಂಗಳೂರು ಇದರ ಜಿಲ್ಲಾಧ್ಯಕ್ಷ ಹಾಜಿ ಕೆ.ಎಸ್. ಅಬೂಬಕ್ಕರ್ ಪಲ್ಲಮಜಲು (50) ಅವರು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ (ಮೇ 7) ನಿಧನರಾದರು.
ಪಲ್ಲಮಜಲು ಮಸೀದಿ ಆಡಳಿತ ಸಮಿತಿಯಲ್ಲಿ ಸುಮಾರು 6 ಬಾರಿ ಅಧ್ಯಕ್ಷರಾಗಿ 11 ಬಾರಿ ಪ್ರಧಾನ ಕಾರ್ಯದರ್ಶಿಯಾಗಿ, ಬಳಿಕ ಗೌರವಾಧ್ಯಕ್ಷರಾಗಿ, ಜೊತೆ ಕಾರ್ಯದರ್ಶಿಯಾಗಿ ಹೀಗೆ ಒಟ್ಟು ಸುಮಾರು 30 ವರ್ಷಗಳ ಕಾಲ ಮಸೀದಿ ಸೇವೆಯನ್ನು ಮಾಡಿದ ಹಾಜಿ ಕೆ.ಎಸ್. ಅಬೂಬಕ್ಕರ್ ಅವರು ಇಲ್ಲಿನ ಮುಬಾರಕ್ ಮುಸ್ಲಿಂ ವೆಲ್ಫೇರ್ ಎಸೋಸಿಯೇಶನ್ ಇದರ ಸ್ಥಾಪಕಾಧ್ಯಕ್ಷರು ಹಾಗೂ ಎಸ್ಕೆಎಸ್ಸೆಸ್ಸೆಫ್ ಘಟಕದ ಸದಸ್ಯರಾಗಿರುತ್ತಾರೆ.
ಹಾಜಿ ಕೆ.ಎಸ್. ಅಬೂಬಕ್ಕರ್ ಪಲ್ಲಮಜಲು ಅವರು ಸರಕಾರಿ ಯೋಜನೆಯಾಗಿರುವ ಸಂಪೂರ್ಣ ಸಾಕ್ಷರತಾ ಆಂದೋಲನದ ಕಾರ್ಯದರ್ಶಿಯಾಗಿ, ದಕ್ಷಿಣ ಕನ್ನಡ ಜಿಲ್ಲಾ ರೆಡ್ ಕ್ರಾಸ್ ಸೊಸೈಟಿ ಸದಸ್ಯರಾಗಿ, ದಫ್ ಎಸೋಸಿಯೇಶನ್ ದ.ಕ. ಮತ್ತು ಉಡುಪಿ ಜಿಲ್ಲಾ ಸಮಿತಿಯ ಸದಸ್ಯರಾಗಿ, ನೇತ್ರಾವತಿ ಜ್ಯೂನಿಯರ್ ಛೇಂಬರ್ ಸದಸ್ಯರಾಗಿ, ಬಂಟ್ವಾಳ ತಾಲೂಕು ಸೌಹಾರ್ದ ಒಕ್ಕೂಟದ ಅಧ್ಯಕ್ಷರಾಗಿ, ದ.ಕ. ಜಿಲ್ಲಾ ಮುಸ್ಲಿಂ ಒಕ್ಕೂಟದ ಕೋಶಾಧಿಕಾರಿಯಾಗಿ, ಮಂಗಳೂರು ಮುಸ್ಲಿಂ ಸೆಂಟ್ರಲ್ ಕಮಿಟಿ ಸದಸ್ಯರಾಗಿ, ಅಹಿಂದ ಜನ ಚಳುವಳಿ ದಕ್ಷಿಣ ಕನ್ನಡ ಜಿಲ್ಲಾ ಸದಸ್ಯರಾಗಿ, ಮೈನಾರಿಟಿ ಡೆವಲಪ್‍ಮೆಂಟ್ ಫೌಂಡೇಶನ್ (ರಿ) ದ.ಕ. ಜಿಲ್ಲಾ ಕಾಯಾಧ್ಯಕ್ಷರಾಗಿ, ಬಂಟ್ವಾಳ ತಾಲೂಕು ಜಮೀಯ್ಯತುಲ್ ಫಲಾಹ್ ಸದಸ್ಯರಾಗಿ ಸಾಮಾಜಿಕ ಸೇವಾ ಕಾರ್ಯವನ್ನು ಮಾಡುತ್ತಾ ಬಂದಿದ್ದು, ಇತ್ತೀಚೆಗೆ ಮಂಗಳೂರು ಅಖಿಲ ಭಾರತ ಬ್ಯಾರಿ ಪರಿಷತ್ (ರಿ) ಇದರ ಜಿಲ್ಲಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿ ವೃತ್ತಿ ಜೀವನದ ನಿಬಿಡತೆಯ ಮಧ್ಯೆ ನಿರಂತರ ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು.
ಮೃತರು ತಾಯಿ, ಪತ್ನಿ, ಮೂರು ಮಂದಿ ಪುತ್ರಿಯರ ಸಹಿತ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮೃತರ ದಫನ ಕಾರ್ಯವು ಶುಕ್ರವಾರ ಅಪರಾಹ್ನ 3 ಗಂಟೆಗೆ ಪಲ್ಲಮಜಲು ಮಸೀದಿಯಲ್ಲಿ ನೆರವೇರಿತು.
ಸಂತಾಪ
ಹಾಜಿ ಕೆ ಎಸ್ ಅಬೂಬಕ್ಕರ್ ಅವರ ನಿಧನಕ್ಕೆ ಮಾಜಿ ಸಚಿವ ಬಿ ರಮಾನಾಥ ರೈ, ಮಂಗಳೂರು ಶಾಸಕ ಯು ಟಿ ಖಾದರ್, ಮನಪಾ ಸದಸ್ಯ ಅಬ್ದುಲ್ ಲತೀಫ್ ಖಂದಕ್, ಮಾಜಿ ಮೇಯರ್ ಕೆ ಅಶ್ರಫ್, ರಾಜ್ಯ ಅಲ್ಪಸಂಖ್ಯಾತ ಆಯೋಗದ ಕಾರ್ಯದರ್ಶಿ ಮುಹಮ್ಮದ್ ನಝೀರ್, ಬ್ಯಾರಿ ಸಾಹಿತ್ಯ ಅಕಾಡೆಮಿ ನಿಕಟಪೂರ್ವಾಧ್ಯಕ್ಷ ನೋಟರಿ-ನ್ಯಾಯವಾದಿ ಮುಹಮ್ಮದ್ ಹನೀಫ್, ಬಂಟ್ವಾಳ ತಾ ಪಂ ಉಪಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ, ದಫ್ ಎಸೋಸಿಯೇಶನ್ ಅಧ್ಯಕ್ಷ ಲತೀಫ್ ನೇರಳಕಟ್ಟೆ, ಪ್ರಧಾನ ಕಾರ್ಯದರ್ಶಿ ಪಿ.ಎಂ. ಅಶ್ರಫ್ ಪಾಣೆಮಂಗಳೂರು, ಸದಸ್ಯರುಗಳಾದ ಯು ಮುಸ್ತಫಾ ಆಲಡ್ಕ, ಅಬ್ದುಲ್ ರಝಾಕ್ ಕುಕ್ಕಾಜೆ, ಯೂಸುಫ್ ಕರಂದಾಡಿ, ಇಬ್ರಾಹಿಂ ಕೈಲಾರ್, ಅಖಿಲ ಭಾರತ ಬ್ಯಾರಿ ಪರಿಷತ್ ಪದಾಧಿಕಾರಿಗಳಾದ ಅಬ್ದುಲ್ ಅಝೀಝ್ ಹಕ್, ನಿಸಾರ್ ಫಕೀರ್, ಸಿದ್ದೀಕ್ ಫರಂಗಿಪೇಟೆ, ಹುಸೈನ್ ಕೂಳೂರು ಮೊದಲಾದವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
0 comments:
Post a Comment