ಮಂಗಳೂರು, ಮೇ 07, 2021 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ 2ನೇ ಅಲೆ ನಿಯಂತ್ರಣಕ್ಕೆ ಬಾರದ ಹಿನ್ನಲೆಯಲ್ಲಿ ಮೇ 7 ಶುಕ್ರವಾರದಿಂದಲೇ ಜಿಲ್ಲೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಲಾಕ್ ಮಾಡಲಾಗುವುದು ಎಂದು ಜಿಲ್ಲಾಡಳಿತ ನಿರ್ಧರಿಸಿದೆ.
ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ತುರ್ತು ಕೊವಿಡ್ ನಿರ್ವಹಣಾ ಸಭೆಯಲ್ಲಿ ಸಚಿವರು ಹಾಗೂ ಜಿಲ್ಲಾಧಿಕಾರಿ ಈ ಇಂಗಿತ ವ್ಯಕ್ತಪಡಿಸಿದ್ದಾರೆ.
ಮೇ 7 ರಿಂದ ಬೆಳಿಗ್ಗೆ 6 ಗಂಟೆಯಿಂದ 9 ಗಂಟೆವರೆಗೆ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗುತ್ತಿದೆ. ಜನತಾ ಕರ್ಫ್ಯೂವನ್ನು ಕಟ್ಟು ನಿಟ್ಟಾಗಿ ಜಾರಿಗೆ ತರುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. 10 ಗಂಟೆಯ ಒಳಗಡೆ ವ್ಯಾಪಾರಸ್ಥರು ಹಾಗೂ ಖರೀದಿದಾರರು ಮನೆ ಸೇರಬೇಕು ಎಂದು ಸೂಚಿಸಲಾಗಿದೆ.
ಜಿಲ್ಲೆಯಲ್ಲಿ ಅನಗತ್ಯವಾಗಿ ವಾಹನಗಳಲ್ಲಿ ತಿರುಗಾಡಿದರೆ ವಾಹನ ವಶಕ್ಕೆ ಪಡೆದು ದಂಡ ವಿಧಿಸಲಾಗುತ್ತದೆ. ಮಾತ್ರವಲ್ಲ, ಜನ ಅನಗತ್ಯ ಓಡಾಟ ನಡೆಸಿದರೆ ಪೊಲೀಸರು ಕಠಿಣ ಕ್ರಮ ಕೈಗೊಳ್ಳುವಂತೆಯೂ ಸೂಚಿಸಲಾಗಿದೆ.
ಜಿಲ್ಲೆಯಲ್ಲಿ ಮೇ 15 ರ ಬಳಿಕ ಯಾವ ಕಾರ್ಯಕ್ರಮಗಳಿಗೂ ಅವಕಾಶವಿರುವುದಿಲ್ಲ. ಮದುವೆ, ಗೃಹಪ್ರವೇಶ, ಹುಟ್ಟು ಹಬ್ಬ ಸೇರಿದಂತೆ ಯಾವ ಕಾರ್ಯಕ್ರಮಗಳನ್ನೂ ಮಾಡುವಂತಿಲ್ಲ. ಅನುಮತಿ ನೀಡಲಾಗಿರುವ ಕಾರ್ಯಕ್ರಮಗಳಾದರೂ ಅವುಗಳನ್ನು ಕೈ ಬಿಡಬೇಕು ಅಥವಾ ಮುಂದೂಡಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಮೇ 7 ರಿಂದ ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಲು ಜಿಲ್ಲಾಡಳಿತ ಮುಂದಾಗಿದ್ದು, ಈ ಅವಧಿಯಲ್ಲಿ ವಾರಾಂತ್ಯ ಕರ್ಫ್ಯೂ ಜಾರಿಯಲ್ಲಿರಲಿದೆ. ಶನಿವಾರ ಹಾಗೂ ರವಿವಾರದಂದು ಜಿಲ್ಲೆಯಲ್ಲಿ ವಾರಾಂತ್ಯ ಕರ್ಫೂ ಜಾರಿಯಲ್ಲಿರಲಿದ್ದು, ಎಲ್ಲಾ ಚಟುವಟಿಕೆಗಳು ಸ್ತಬ್ಧವಾಗಿರಲಿವೆ. ಈ ಅವಧಿಯಲ್ಲಿ ಆಸ್ಪತ್ರೆಗಳು ಹಾಗೂ ಮೆಡಿಕಲ್ ಗಳ ಸೇವೆ ಲಭ್ಯ ಇರಲಿದೆ. ಸಾರ್ವಜನಿಕರು ತಮ್ಮ ಸ್ಥಳೀಯ ವ್ಯಾಪ್ತಿಯಿಂದಲೇ ಸೇವೆಯನ್ನು ಪಡೆಯಬೇಕಾಗಿದೆ. ರೋಗಿಗಳನ್ನು ಆಸ್ಪತ್ರೆಗಳಿಗೆ ರವಾನೆ ಮಾಡುವಂತಹ ಸಂದರ್ಭದಲ್ಲಿ ಸೂಕ್ತ ದಾಖಲೆಗಳನ್ನು ಹೊಂದಿರಬೇಕಾಗಿದೆ. ಇದನ್ನು ಹೊರತು ಪಡಿಸಿ ಉಳಿದ ಎಲ್ಲಾ ಅಂಗಡಿ ಮುಂಗಟ್ಟುಗಳು, ಚಟುವಟಿಕೆಗಳು ಸಂಪೂರ್ಣವಾಗಿ ಬಂದ್ ಆಗಿರಲಿವೆ.
ತುರ್ತು ಅಥವಾ ಅಗತ್ಯ ಸೇವೆಗಳೊಂದಿಗೆ ವ್ಯವರಿಸುವ ಹಾಗೂ 24 ಗಂಟೆ ಕಾರ್ಯಾಚರಿಸುವ ಕಂಪೆನಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಎಲ್ಲಾ ರೀತಿಯ ನಿರ್ಮಾಣ ಕಾರ್ಯಗಳಿಗೆ ವೀಕೆಂಡ್ ನಲ್ಲಿ ಅವಕಾಶವಿಲ್ಲ. ಒಂದೊಮ್ಮೆ ನಿರ್ಮಾಣ ಕಾಮಗಾರಿ ನಡೆಯುವ ಪ್ರದೇಶದಲ್ಲೇ ಕಾರ್ಮಿಕರಿದ್ದಲ್ಲಿ ಮಾತ್ರ ನಿರ್ಮಾಣ ಕಾರ್ಯಕ್ಕೆ ಅವಕಾಶ ನೀಡಲಾಗಿದೆ.
ವಾರಾಂತ್ಯದಲ್ಲಿ ಪೂರ್ವ ನಿಗದಿಯಾಗಿರುವ ಮದುವೆ ಸಮಾರಂಭಗಳಿಗೆ ಈ ಹಿಂದಿನ ಆದೇಶದಂತೆ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಶವ ಸಂಸ್ಕಾರಗಳಿಗೆ 5 ಜನರ ಮಿತಿಯಲ್ಲಿ ನಡೆಸಲು ಅನುಮತಿಸಲಾಗಿದೆ.
0 comments:
Post a Comment