ಮೈಸೂರು, ಜೂನ್ 01, 2021 (ಕರಾವಳಿ ಟೈಮ್ಸ್) : ಬೌದ್ದಿಕ ಅಂಗ ವೈಕಲ್ಯತೆ ಹೊಂದಿರುವ ತನ್ನ ಹತ್ತು ವರ್ಷದ ಮಗನಿಗೆ 18 ವರ್ಷದವರೆಗೆ ತಪ್ಪದೆ ನಿತ್ಯ ಔಷಧಿ ತೆಗೆದುಕೊಂಡರೆ ಆತ ಸಂಪೂರ್ಣ ಗುಣಮುಖನಾಗುತ್ತಾನೆ ಎಂಬ ವೈದ್ಯರ ಭರವಸೆಯಿಂದ ತಂದೆಯೊಬ್ಬ ಮಗನ ಔಷಧಿ ಖಾಲಿಯಾಗುತ್ತಿದೆ ಎಂಬ ಭಯದಿಂದ ಹಿಂದೆ ಮುಂದೆ ಯೋಚಿಸದೆ ಲಾಕ್ ಡೌನ್ ಎಂಬುದನ್ನೂ ಗಣನೆಗೆ ಪಡೆಯದೆ ಮಗನ ಆರೋಗ್ಯದ ದೃಷ್ಟಿಯಿಂದ ಔಷಧಿಗಾಗಿ ಸ್ವತಃ ಸೈಕಲ್ ತುಳಿದು ಬರೋಬ್ಬರಿ 300 ಕಿ.ಮೀ ಸಂಚರಿಸಿ ಔಷಧಿ ಖರೀದಿಸಿ ತಂದ ಘಟಣೆ ಮೈಸೂರಿನಿಂದ ವರದಿಯಾಗಿದೆ.
ಕೊರೋನಾ ಎರಡನೇ ಅಲೆ ನಿಯಂತ್ರಣಕ್ಕಾಗಿ ರಾಜ್ಯದಲ್ಲಿ ಲಾಕ್ ಡೌನ್ ಘೋಷಿಸಲಾಗಿದ್ದು, ಸಾರಿಗೆ ಸಂಚಾರ ನಿರ್ಬಂಧಿಸಲಾಗಿದೆ. ಹೀಗಾಗಿ 45 ವರ್ಷದ ಆನಂದ್ ತನ್ನ ಮಾನಸಿಕ ಭಿನ್ನ ಚೇತನ ಮಗನ ಔಷಧಿಗಾಗಿ ಮೈಸೂರಿನ ಟಿ. ನರಸಿಪುರದಿಂದ ಬೆಂಗಳೂರಿಗೆ ಸೈಕಲ್ ಮೂಲಕ ಸಂಚರಿಸಿ ಸುದ್ದಿಯಾಗಿದ್ದಾರೆ.
ಲಾಕ್‌ಡೌನ್‌ನ ನಿಂದಾಗಿ ತನ್ನ ಹಳ್ಳಿಯಿಂದ ಬೆಂಗಳೂರಿಗೆ ಯಾವುದೇ ಸಾರ್ವಜನಿಕ ಸಾರಿಗೆ ಮತ್ತು ನಗರದಿಂದ ಔಷಧಿ ಪಡೆಯಲು ಖಾಸಗಿ ವಾಹನವನ್ನು ಕಾಯ್ದಿರಿಸಲು ಹಣವಿಲ್ಲದ ಕಾರಣ ದಿನಕೂಲಿ ಕೆಲಸಗಾರ ಆನಂದ್ ಅವರು ಈ ನಿರ್ಧಾರ ಕೈಗೊಂಡಿದ್ದಾರೆ.
ಮೈಸೂರಿನ ಟಿ ನರಸೀಪುರ ತಾಲ್ಲೂಕಿನ ಗಣಿಗಾನ ಕೊಪ್ಪಲು ಗ್ರಾಮದ ಆನಂದ್ ಅಲ್ಲಿಂದ ಬೆಂಗಳೂರಿಗೆ 130-140 ಕಿ.ಮೀ. ದೂರ ಸೈಕಲ್ ನಲ್ಲಿ ಬಂದು ನಗರದ ನಿಮ್ಹಾನ್ಸ್‌ನಿಂದ ಔಷಧಿ ಖರೀದಿಸಿ, ಮತ್ತೆ ವಾಪಾಸು ಊರಿಗೆ ತೆರಳಿದ್ದಾರೆ.
ಬೌದ್ಧಿಕ ಅಂಗವೈಕಲ್ಯದಿಂದ ಬಳಲುತ್ತಿರುವ 10 ವರ್ಷದ ಮಗ ಭಿರೇಶ್ ಆರು ತಿಂಗಳ ಮಗುವಾಗಿದ್ದಾಗ ಆತನಲ್ಲಿ ಈ ಸಮಸ್ಯೆ ಇರುವುದನ್ನು ಗುರುತಿಸಲಾಯಿತು. ಅಂದಿನಿಂದ ದಿನಂಪ್ರತಿ ಔಷಧವನ್ನು ನೀಡುತ್ತಾ ಬರಲಾಗಿತ್ತು. ಆದರೆ ಔಷಧಗಳು ಖಾಲಿಯಾಗುತ್ತಾ ಬಂದಿದ್ದರಿಂದ ಆತಂಕಗೊಂಡು ಸೈಕಲ್ ನಲ್ಲೇ ಬೆಂಗಳೂರಿಗೆ ಬರುವ ದೃಢ ನಿರ್ಧಾರ ಕೈಗೊಂಡಿದ್ದಾಗಿ ಆನಂದ್ ಹೇಳಿದ್ದಾರೆ.
ಬೆಂಗಳೂರಿನ ನಿಮ್ಹಾನ್ಸ್‌ನಲ್ಲಿ ಈ ಔಷಧಗಳನ್ನು ಉಚಿತವಾಗಿ ನೀಡುತ್ತಾರೆ. ಹೀಗಾಗಿ ಪ್ರತಿ ಎರಡು ತಿಂಗಳಿಗೊಮ್ಮೆ ನಾನು ಬೆಂಗಳೂರಿಗೆ ಬಂದು ಪಡೆಯುತ್ತಿದ್ದೆ. ಇನ್ನು ಬುಧವಾರ ವೇಳೆಗೆ ಔಷಧಗಳು ಖಾಲಿಯಾಗುತ್ತೆ ಎಂದು ತಿಳಿದು ನಾನು ಭಾನುವಾರ ನನ್ನ ಪ್ರಯಾಣವನ್ನು ಆರಂಭಿಸಿದೆ. ರಾತ್ರಿ ವೇಳೆ ದೇವಾಲಯದ ಬಳಿ ಮಲಗುತ್ತಿದ್ದೆ. ಔಷಧವನ್ನು ಪಡೆದು ಮಂಗಳವಾರ ಊರು ಸೇರಿದೆ ಎಂದು ಆನಂದ್ ಹೇಳುತ್ತಾರೆ.
0 comments:
Post a Comment