ಕಳೆದ ಬಾರಿಯ ಪೆಂಡಿಂಗ್ ಪರಿಹಾರ ಇನ್ನಾದರೂ ಖಾತೆಗೆ ಬರಲಿ : ಫಲಾನುಭವಿಗಳ ಆಗ್ರಹ
ವಿದ್ಯಾರ್ಥಿ ಪೂರಕ ಯೋಜನೆಗಳ ಮೊತ್ತವೂ ತಕ್ಷಣ ಬಿಡುಗಡೆಗೆ ಪೋಷಕರ ಆಗ್ರಹ
ಬೆಂಗಳೂರು, ಮೇ 06, 2021 (ಕರಾವಳಿ ಟೈಮ್ಸ್) : ಕೋವಿಡ್ ದ್ವಿತೀಯ ಅಲೆ ರಾಜ್ಯಾದ್ಯಂತ ರೋಷಾಗ್ನಿಯಂತೆ ವ್ಯಾಪಕವಾಗುತ್ತಿರುವ ಹಿನ್ನಲೆಯಲ್ಲಿ ಈಗಾಗಲೇ ರಾಜ್ಯ ಸರಕಾರ ಕೋವಿಡ್ ಕರ್ಫ್ಯೂ ಹೇರಿದೆ. ಆದರೂ ಸೋಂಕು ಇಳಿಮುಖ ಆಗದೆ ಇರುವ ಹಿನ್ನಲೆಯಲ್ಲಿ ಪೂರ್ಣ ಪ್ರಮಾಣದ ಲಾಕ್ ಡೌನ್ ಬಗ್ಗೆ ಸರಕಾರ ಚಿಂತನೆ ನಡೆಸುತ್ತಿದೆ. ಸರಕಾರ ಏನೋ ಸೋಂಕು ನಿಯಂತ್ರಣದ ಕ್ರಮದ ಭಾಗವಾಗಿ ಕಠಿಣ ಕ್ರಮಕ್ಕೆ ಮುಂದಾಗುತ್ತಿರುವುದು ಸರಿಯಾದ ಕ್ರಮವೇನೋ? ಆದರೆ ಈಗಾಗಲೇ ಆರ್ಥಿಕ ಜಂಜಾಟ ಅನುಭವಿಸುತ್ತಿರುವ ರಾಜ್ಯದ ಬಡ ಹಾಗೂ ಮಧ್ಯಮ ವರ್ಗದ ಜನ ಮಾತ್ರ ಮುಂದಿನ ದಿನಗಳಲ್ಲಿ ಅದೇಗೆ ಬದುಕು ಸಾಗಿಸುವುದು ಎಂಬ ಗಂಭೀರ ಆತಂಕವನ್ನು ಎದುರಿಸುತ್ತಿದ್ದಾರೆ. ಒಂದೆಡೆ ಉದ್ಯೋಗ ಇಲ್ಲ, ಇನ್ನೊಂದೆಡೆ ಸಂಪತ್ತಿನ ಕ್ರೋಢೀಕರಣವೂ ಇಲ್ಲ. ಕಳೆದ ಬಾರಿಯ ಕೋವಿಡ್, ಲಾಕ್ ಡೌನ್ ಪರಿಣಾಮದಿಂದ ಇನ್ನೂ ಜನ ಚೇತರಿಸಿಕೊಂಡಿಲ್ಲ. ಅಷ್ಟರಲ್ಲಾಗಲೇ ಎರಡನೇ ಅಲೆ ರುದ್ರ ನರ್ತನ ತೋರತೊಡಗಿದೆ. ರಾಜ್ಯದಲ್ಲಿ ಒಂದು ರೀತಿಯ ಹೆಲ್ತ್ ಎಮರ್ಜೆನ್ಸಿ ಪರಿಸ್ಥಿತಿ ತಲೆದೋರಿದ್ದು, ಸರಕಾರವೂ ಪ್ರಜೆಗಳ ರಕ್ಷಣೆ ಕಷ್ಟ ಸಾಧ್ಯ ಎಂಬ ರೀತಿಯಲ್ಲಿ ಕೈ ತೊಳೆದುಕೊಂಡಿದೆ ಎಂಬಂತೆ ಕಂಡು ಬರುತ್ತಿದೆ. ಜನ ತಮ್ಮ ತಲೆಗೆ ತಮ್ಮ ಕೈ ಎಂಬಂತೆ ಸಂಕಷ್ಟ ಎದುರಿಸುತ್ತಿದ್ದಾರೆ.
ಈ ಮಧ್ಯೆ ರಾಜ್ಯದ ಜನ ದೆಹಲಿ ಸರಕಾರದ ಮಾದರಿ ಕ್ರಮ ನಮ್ಮ ರಾಜ್ಯದ ಸರಕಾರದಿಂದ ಜಾರಿಗೆ ಯಾಕೆ ಸಾಧ್ಯವಾಗುತ್ತಿಲ್ಲ ಎಂಬ ಪ್ರಶ್ನೆಯನ್ನು ಭರವಸೆಯ ಕಣ್ಣುಗಳಿಂದ ಎದುರು ನೋಡುತ್ತಿದ್ದಾರೆ. ಈಗಾಗಲೆ ಕೋರೋನಾ ನಿಯಂತ್ರಣಕ್ಕಾಗಿ ಒಂದು ವಾರ ಕಾಲ ಸೆಮಿ ಲಾಕ್ ಡೌನ್ ಘೋಷಣೆ ಮಾಡಿರುವ ದೆಹಲಿಯ ಕೇಜ್ರಿವಾಲ್ ನೇತೃತ್ವದ ಆಪ್ ಸರಕಾರ ರಾಜ್ಯದ ಜನತೆಯ ಹಿತದೃಷ್ಟಿಯಿಂದ ಎರಡು ತಿಂಗಳ ಕಾಲ ಉಚಿತ ರೇಶನ್ ಸಾಮಗ್ರಿಗಳು ಹಾಗೂ ಟ್ಯಾಕ್ಸಿ ಹಾಗೂ ಅಟೊ ಚಾಲಕರಿಗೆ 5 ಸಾವಿರ ರೂಪಾಯಿ ಕೋವಿಡ್ ಪರಿಹಾರವನ್ನು ಮತ್ತೆ ಘೋಷಿಸಿಕೊಂಡಿದೆ. ಇದೇ ರೀತಿಯ ಕ್ರಮ ನಮ್ಮ ರಾಜ್ಯದ ಯಡಿಯೂರಪ್ಪ ನೇತೃತ್ವದ ಬಾಜಪ ಸರಕಾರಕ್ಕೆ ಯಾಕೆ ಸಾಧ್ಯವಾಗುತ್ತಿಲ್ಲ ಎಂದು ರಾಜ್ಯದ ಜನ ಸರಕಾರವನ್ನು ಪ್ರಶ್ನಿಸುತ್ತಿದ್ದಾರೆ. ರಾಜ್ಯದ ಪ್ರಮುಖ ವಿರೋಧ ಪಕ್ಷವಾಗಿರುವ ಕಾಂಗ್ರೆಸ್ ಕೂಡಾ ಸೋಂಕು ನಿಯಂತ್ರಣ ಕ್ರಮವಾಗಿ ಕಠಿಣ ಲಾಕ್ ಡೌನ್ ವಿಧಿಸುವುದರ ಜೊತೆಗೆ ರಾಜ್ಯದ ಜನರ ಖಾತೆಗಳಿಗೆ ಹಣಕಾಸಿನ ನೆರವು ಒದಗಿಸುವುದರ ಜೊತೆಗೆ ಎಲ್ಲರಿಗೂ ಉಚಿತ ರೇಶನ್ ವ್ಯವಸ್ಥೆ ಮಾಡುವಂತೆ ಈಗಾಗಲೇ ಸರಕಾರವನ್ನು ಆಗ್ರಹಿಸಿದೆ.
ಅಲ್ಲದೆ ಕಳೆದ ಬಾರಿ ಕೋವಿಡ್ ಲಾಕ್ ಡೌನ್ ಸಂಕಷ್ಟಕ್ಕಾಗಿ ಸರಕಾರ ವಿವಿಧ ವರ್ಗದ ಜನರಿಗಾಗಿ ಘೋಷಿಸಿದ್ದ ಪರಿಹಾರ ಮೊತ್ತದ ಪ್ರತಿಫಲವನ್ನು ಕೆಲ ಸೀಮಿತ ಮಂದಿ ಮಾತ್ರ ಪಡೆದುಕೊಂಡಿದ್ದು, ಹಲವು ಮಂದಿಗಳ ಖಾತೆಗೆ ಇನ್ನೂ ಈ ಪರಿಹಾರ ಮೊತ್ತ ಜಮೆಯಾಗಿಲ್ಲ. ಈಗಲೂ ಫಲಾನುಭವಿಗಳು ಪರಿಹಾರ ಮೊತ್ತಕ್ಕಾಗಿ ಜಾತಕ ಪಕ್ಷಿಗಳಂತೆ ಕಾಯುತ್ತಲೇ ಇದ್ದಾರೆ. ಕಾರಣ ಜನರ ಆರ್ಥಿಕ ಪರಿಸ್ಥಿತಿ ಸಂಪೂರ್ಣ ಅಧೋಗತಿಯಲ್ಲಿದೆ. ಪರಿಹಾರ ಮೊತ್ತದ ಖಾತ್ರಿ ಬಗ್ಗೆ ಸರಕಾರದ ಯಾವುದೇ ಇಲಾಖೆ, ಅಧಿಕಾರಿಗಳ ಬಳಿಯೂ ಫಲಾನುಭವಿಗಳಿಗೆ ಸಮರ್ಪಕ ಮಾಹಿತಿ ದೊರೆಯದೆ ಜನ ಇಂದಿಗೂ ಅಲೆದಾಟ ನಡೆಸುತ್ತಿರುವ ಮಧ್ಯೆ ಇದೀಗ ಮತ್ತೆ ಕರ್ಫ್ಯೂ ಚಾಲ್ತಿಗೊಂಡಿದೆ. ಈ ನಿಟ್ಟಿನಲ್ಲಿ ಕಳೆದ ಬಾರಿಯ ಪರಿಹಾರ ಮೊತ್ತದ ಜೊತೆಗೆ ಇನ್ನಷ್ಟು ಹೆಚ್ವಿನ ಪರಿಹಾರ ಮೊತ್ತವನ್ನು ಸೇರಿಸಿ ಖಾತೆಗೆ ಜಮಾಯಿಸುವಂತೆ ಜನ ಸರಕಾರವನ್ನು ಆಗ್ರಹಿಸುತ್ತಿದ್ದಾರೆ. ಅಲ್ಲದೆ ಕಳೆದ ಬಾರಿಯಂತೆ ಸೀಮಿತ ವರ್ಗಗಳಿಗೆ ಮಾತ್ರ ಪರಿಹಾರ ಮೊತ್ತ ಘೋಷಿಸದೆ ಸಮಾಜದ ಎಲ್ಲ ವರ್ಗದ ಜನರಿಗೂ ಪರಿಹಾರ ಮೊತ್ತ ಬಿಡುಗಡೆಗೊಳಿಸುವುದರ ಜೊತೆಗೆ ಉಚಿತ ಪಡಿತರ ವ್ಯವಸ್ಥೆಯನ್ನು ಬಿಪಿಎಲ್ ಎಪಿಎಲ್ ಎಂದು ವರ್ಗೀಕರಿಸದೆ ಎಲ್ಲರಿಗೂ ನೀಡಿ ಹಸಿವು ನೀಗಿಸುವಂತೆ ಜನ ಆಗ್ರಹಿಸಿದ್ದಾರೆ. ಇಂದಿನ ಸಂಕಷ್ಟದ ಸಮಯದಲ್ಲಿ ಆರ್ಥಿಕ ಹಿಂಜರಿತ ಕೇವಲ ಬಡವರು ಮಾತ್ರ ಅನುಭವಿಸದೆ ಗರಿಷ್ಠ ಸಂಖ್ಯೆಯಲ್ಲಿರುವ ಮಧ್ಯಮ ವರ್ಗ ಕೂಡಾ ಅತಿಯಾಗಿ ಅನುಭವಿಸಿದೆ. ಈ ಹಿನ್ನಲೆಯಲ್ಲಿ ಎಪಿಎಲ್ ಬಿಪಿಎಲ್ ಎಂಬ ವರ್ಗೀಕರಣವನ್ನು ಕೂಡಾ ಸರಕಾರ ತಕ್ಷಣ ಕೈ ಬಿಟ್ಟು ಪ್ರಜೆಗಳ ಪ್ರಾಣ, ಮಾನ, ಅಭಿಮಾನ ರಕ್ಷಿಸುವ ಮಹತ್ತರ ಜವಾಬ್ದಾರಿ ಇರುವ ಸರಕಾರ ಸಮಾಜದ ಎಲ್ಲ ವರ್ಗದ ಜನರ ಹಿತ ಕಾಪಾಡುವ ನಿಟ್ಟಿನಲ್ಲಿ ಸರ್ವೋ ಜನಾಃ ಸುಖಿನೋ ಭವಂತು ಸಿದ್ದಾಂತದಡಿಯಲ್ಲಿ ಯೋಜನೆಗಳನ್ನು ಘೋಷಿಸುವಂತೆ ವ್ಯಾಪಕ ಆಗ್ರಹ ವ್ಯಕ್ತವಾಗುತ್ತಿದೆ. ಸರಕಾರ ಯಾವ ರೀತಿಯ ಮಾನವ ಹೃದಯದಿಂದ ಸ್ಪಂದಿಸುತ್ತದೆ ಕಾದು ನೋಡಬೇಕಾಗಿದೆ. ಜನರ ಆಗ್ರಹಕ್ಕೆ ಸರಕಾರ ತಕ್ಷಣ ಸ್ಪಂದಿಸಬೇಕಾಗಿದೆ ಎಂಬುದೇ ಕರಾವಳಿ ಟೈಮ್ಸ್ ಪತ್ರಿಕಾ ಆಶಯ ಕೂಡಾ ಆಗಿದೆ.
ಅದೇ ರೀತಿಯಲ್ಲಿ ಸರಕಾರ ವಿವಿಧ ವಿದ್ಯಾರ್ಥಿ ಸಮುದಾಯಕ್ಕೆ ಪ್ರತಿ ವರ್ಷ ನೀಡುವ ವಿದ್ಯಾರ್ಥಿ ವೇತನ, ರಿಯಾಯಿತಿ ದರದ ಶೈಕ್ಷಣಿಕ ಸಾಲ, ಶುಲ್ಕ ಮರುಪಾವತಿ ಮೊದಲಾದ ವಿದ್ಯಾರ್ಥಿಗಳ ಹಿತಕ್ಕಾಗಿರುವ ಯೋಜನೆಗಳ ಎಲ್ಲ ವರ್ಷಗಳ ಬಾಕಿ ಮೊತ್ತವನ್ನೂ ತಕ್ಷಣ ಬಿಡುಗೆ ಮಾಡುವುದರ ಜೊತೆಗೆ ಈ ಬಾರಿಯ ಸಂಕಷ್ಟಕ್ಕೆ ಸ್ಪಂದಿಸುವ ನಿಟ್ಟಿನಲ್ಲಿ ಈ ವರ್ಷವೂ ವಿದ್ಯಾರ್ಥಿಪೂರಕ ಯೋಜನೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಅನುದಾನ ಒದಗಿಸಿ ಎಲ್ಲ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಪೂರಕವಾಗುವ ರೀತಿಯಲ್ಲಿ ಸ್ಪಂದಿವಂತೆ ವಿದ್ಯಾರ್ಥಿಗಳು ಹಾಗೂ ಪೋಷಕರೂ ಆಗ್ರಹಿಸಿದ್ದಾರೆ.
0 comments:
Post a Comment