ಬಂಟ್ವಾಳದಲ್ಲಿ ಇಳಿಕೆಗೊಂಡಿದ್ದ ಸೋಂಕು ಮತ್ತೆ ಉಲ್ಭಣ : ಅಧಿಕಾರಿಗಳು ಹಾಗೂ ಪೊಲೀಸರು ಮತ್ತಷ್ಟು ಕಠಿಣರಾಗಲು ಆಗ್ರಹ
ಬಂಟ್ವಾಳ, ಮೇ 30, 2021 (ಕರಾವಳಿ ಟೈಮ್ಸ್) : ತಾಲೂಕಿನ ಬಾಳ್ತಿಲ ಗ್ರಾಮದ ನೀರಪಾದೆಯಲ್ಲಿ ಬಿಡಾರ ಹೂಡಿದ್ದ ಉತ್ತರ ಕರ್ನಾಟಕ ಮೂಲದ ಸುಮಾರು 25ಕ್ಕೂ ಅಧಿಕ ಮಂದಿ ಕಾರ್ಮಿಕರಿಗೆ ಕೊರೊನಾ ಪಾಸಿಟಿವ್ ಕಂಡು ಬಂದಿದ್ದು, ಅವರೆಲ್ಲರನ್ನು ವಾಮದಪದವಿನ ಕೋವಿಡ್ ಕೇರ್ ಸೆಂಟರಿಗೆ ವರ್ಗಾಯಿಸಲಾಗಿದೆ ಎಂದು ತಿಳಿದು ಬಂದಿದೆ.
ಉತ್ತರ ಕರ್ನಾಟಕ ಮೂಲದ ಕಾರ್ಮಿಕರಾಗಿರುವ ಇವರು ಸ್ಥಳೀಯ ಗುತ್ತಿಗೆದಾರರ ಅಧೀನದಲ್ಲಿ ಕೆಲಸ ಮಾಡಿಕೊಂಡಿದ್ದು, ಕುಟುಂಬ ಸಮೇತ ನೀರಪಾದೆ ಎಂಬಲ್ಲಿ ಬಾಡಿಗೆ ಮನೆಗಳಲ್ಲಿ ಉಳಿದುಕೊಂಡಿದ್ದರು ಎನ್ನಲಾಗಿದೆ. ಬಾಳ್ತಿಲ ಹಾಗೂ ಕಡೇಶ್ವಾಲ್ಯ ಗ್ರಾಮಗಳಿಗೆ ಹೊಂದಿಕೊಂಡು ವಿವಿಧೆಡೆ ಇವರು ವಿವಿಧ ಕೆಲಸಗಳನ್ನು ಇವರು ಮಾಡಿಕೊಂಡು ಇಲ್ಲೇ ಉಳಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಸುಮಾರು 29 ಮಂದಿಗೆ ಸೋಂಕು ದೃಡಪಟ್ಟಿದೆ ಎನ್ನಲಾಗಿದ್ದು, ಕೆಲವರು ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಇನ್ನೂ ಸುಮಾರು 19 ಮಂದಿಯಲ್ಲಿ ಸೋಂಕು ಕಂಡುಬಂದಿರುವ ಹಿನ್ನಲೆಯಲ್ಲಿ ಶನಿವಾರ ವಾಮದಪದವಿನ ಕೋವಿಡ್ ಕೇರ್ ಸೆಂಟರಿಗೆ ಶಿಫ್ಟ್ ಮಾಡಲಾಗಿದೆ ಎಂದು ಬಂಟ್ವಾಳ ತಾ ಪಂ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ತಿಳಿಸಿದ್ದಾರೆ.
ಬಂಟ್ವಾಳ ತಾಲೂಕಿನಲ್ಲಿ ವಿವಿಧ ಗ್ರಾಮ ಪಂಚಾಯತ್ ವ್ಯಾಪ್ತಿಗಳಲ್ಲಿ ಹಾಗೂ ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಆರಂಭದಲ್ಲಿ ಕೋವಿಡ್ 2ನೇ ಅಲೆ ವ್ಯಾಪಕವಾಗಿದ್ದು, ಕೆಲವರು ಜೀವವನ್ನೂ ಕಳೆದುಕೊಂಡಿದ್ದರು. ಆದರೆ ಬಳಿPರೀ ಪ್ರಮಾಣ ನಿಧಾನಕ್ಕೆ ಇಳಿಮುಖಗೊಂಡಿತ್ತು. ಇದೀಗ ಮತ್ತೆ ಅಧಿಕಾರಿಗಳು ಹಾಗೂ ಪೊಲೀಸರ ನಿರುತ್ಸಾಹ ಕಾರಣದಿಂದಾಗಿ ಸೋಂಕಿತರ ಪ್ರಮಾಣದಲ್ಲಿ ಏರಿಕೆ ಕಂಡು ಬರುತ್ತಿದೆ.
ಸೋಂಕಿತರ ಮನೆ ಮಂದಿ ಬೇಕಾಬಿಟ್ಟಿಯಾಗಿ ದ್ವಿಚಕ್ರ ಸಹಿತ ವಿವಿಧ ವಾಹನಗಳಲ್ಲಿ ನಾಡಿನ ವಿವಿಧೆಡೆ ಸಂಚರಿಸುತ್ತಿದ್ದು, ಕೆಲವೆಡೆ ಯುವಕರು ಅದರಲ್ಲೂ ಶಾಲಾ-ಕಾಲೇಜು ವಿದ್ಯಾರ್ಥಿಗಳು ಅನಗತ್ಯವಾಗಿ ದ್ವಿಚಕ್ರ ವಾಹನಗಳಲ್ಲಿ ತಿರುಗಾಟ ನಡೆಸುತ್ತಿದ್ದು, ಇನ್ನು ಕೆಲವೆಡೆ ಮೈದಾನಗಳಲ್ಲಿ ಯುವಕರು ಕ್ರಿಕೆಟ್ ಸಹಿತ ಕೆಲವು ಆಟಗಳಲ್ಲಿ ನಿರತರಾಗುತ್ತಿರುವುದು ಕಂಡು ಬರುತ್ತಿದೆ. ಮತ್ತೆ ಕೆಲ ಯುವಕರ ಗುಂಪು ಭೂರಿ ಭೋಜನದ ಪಾರ್ಟಿಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಏರ್ಪಡಿಸುತ್ತಿರುವ ಬಗ್ಗೆಯೂ ಮಾಹಿತಿಗಳು ಬರುತ್ತಿದೆ. ಇನ್ನು ಕೆಲವೆಡೆ ಮನೆ ಬಿಟ್ಟು ಹೊರಬರುವ ಯುವಕರು ಸಾರ್ವಜನಿಕ ಸ್ಥಳಗಳಲ್ಲಿ ಮೊಬೈಲ್ ಗೇಮ್‍ಗಳನ್ನು ಆಡುವುದು, ಅಲ್ಲಿ ಯುವಕರು-ಬಾಲಕರೆನ್ನದೆ ಜನ ಸೇರುವುದು ನಡೆಯುತ್ತಲೇ ಇದೆ. ಕೆಲವೆಡೆ ಸಣ್ಣ-ಪುಟ್ಟ ಸಂಘಟನೆಗಳು ಸದಸ್ಯರುಗಳನ್ನು ಸೇರಿಸಿಕೊಂಡು ಮೀಟಿಂಗ್ ನೆಪದಲ್ಲಿ ಹರಟೆ ಹೊಡೆಯುತ್ತಿರುವ ಬಗ್ಗೆಯೂ ದೂರುಗಳು ಕೇಳಿ ಬರುತ್ತಿದೆ. ಈ ಎಲ್ಲ ಘಟನೆಗಳ ಬಗ್ಗೆ ಪೊಲೀಸರು ಮಾಹಿತಿ ಇದ್ದರೂ ನಿರ್ಲಕ್ಷ್ಯ ವಹಿಸುತ್ತಿರುವುದೇ ಇಂತಹ ಘಟನೆಗಳಿಗೆ ಕಾರಣವಾಗುತ್ತಿದ್ದು, ಇದರಿಂದಲೇ ಸೋಂಕು ಕೂಡಾ ಏರಿಕೆಯಾಗುತ್ತಿದೆ ಎಂದು ತಾಲೂಕಿನ ಜನ ಅಭಿಪ್ರಾಯಪಡುತ್ತಿದ್ದಾರೆ.
0 comments:
Post a Comment