ಬೆಂಗಳೂರು, ಮೇ 05, 2021 (ಕರಾವಳಿ ಟೈಮ್ಸ್) : ರಾಜ್ಯದಲ್ಲಿ ಬಾಧಿಸಿರುವ ಕೋವಿಡ್ ಮಹಾಮಾರಿಯ ಸಂಕಷ್ಟದ ಸಂದರ್ಭದಲ್ಲಿ ಹಾಗೂ ರಂಝಾನ್ ತಿಂಗಳನ್ನು ಮನಗಂಡು ವಕ್ಫ್ ಇಲಾಖೆಯ ಸಂಸ್ಥೆಗಳು ತಮ್ಮ ಆದಾಯದ ನಿರ್ದಿಷ್ಟ ಭಾಗವನ್ನು ವಕ್ಫ್ ಸಂಸ್ಥೆಯ ಬೈಲಾ ಪ್ರಕಾರ ಆರೋಗ್ಯ ಸೇವೆ, ಶೈಕ್ಷಣಿಕ ಉದ್ದೇಶ ಹಾಗೂ ವ್ಯಾಪ್ತಿಯ ಕಡು ಬಡ ಹಾಗೂ ನಿರ್ಗತಿಕರ ಕನಿಷ್ಠ ಅವಶ್ಯಕತೆಗಳನ್ನು ಪೂರೈಸಿ ಅವರ ಏಳಿಗೆಗಾಗಿ ಶ್ರಮಿಸಿ ಖರ್ಚು ಮಾಡಲು ಅವಕಾಶ ಇದೆ. ಈ ಹಿನ್ನಲೆಯಲ್ಲಿ ವಕ್ಫ್ ಸಂಸ್ಥೆಗಳು ಸಾಂಕ್ರಾಮಿಕ ರೋಗ, ಲಾಕ್‍ಡೌನ್ ಹಾಗೂ ರಂಝಾನ್ ಮಾಸವನ್ನು ಗಮನದಲ್ಲಿಟ್ಟುಕೊಂಡು ಆಹಾರ ಧಾನ್ಯ ವಿತರಣೆ ಮತ್ತು ಅವಶ್ಯಕ ಆರೋಗ್ಯ ಸೇವೆಗಳಿಗಾಗಿ ಪಾರದರ್ಶಕ ರೀತಿಯಲ್ಲಿ ಖರ್ಚು ಮಾಡಿ ಇಂತಹ ಖರ್ಚುಗಳ ಲೆಕ್ಕಪತ್ರಗಳನ್ನು ಸಮರ್ಪಕವಾಗಿ ಇಟ್ಟುಕೊಳ್ಳಲು ರಾಜ್ಯ ಔಕಾಫ್ ಮಂಡಳಿ ಸುತ್ತೋಲೆ ಹೊರಡಿಸಿದೆ.
ಅದೇ ರೀತಿ ಇನ್ನೊಂದು ಪ್ರತ್ಯೇಕ ಸುತ್ತೋಲೆ ಹೊರಡಿಸಿರುವ ಔಕಾಫ್ ಮಂಡಳಿ ಕೋವಿಡ್ ಸಹಾಯ ಕೇಂದ್ರಗಳನ್ನು ಸ್ಥಾಪಿಸಲು ವಕ್ಫ್ ಸಂಸ್ಥೆಗಳ ಕಟ್ಟಡಗಳಾದ ಶಾದಿ ಮಹಲ್, ಸಮುದಾಯ ಭವನ ಹಾಗೂ ಖಾಲಿ ಸ್ಥಳಗಳನ್ನು ಸಂಬಂಧಿಸಿದ ಅಧಿಕಾರಿಗಳಿಗೆ ನೀಡಿ ಸಹಕರಿಸಲು ಸೂಚಿಸಿದೆ. ಅದೇ ರೀತಿ ವಾರ್ಡ್, ಮೊಹಲ್ಲಾ ಮತ್ತು ಗ್ರಾಮಗಳಲ್ಲಿ ಚುಚ್ಚು ಮದ್ದು (ವ್ಯಾಕ್ಸಿನ್) ಪ್ರಕ್ರಿಯೆಗಳಲ್ಲಿ ತೊಡಗಿಸಿಕೊಂಡಿರುವ ಸಂಘ-ಸಂಸ್ಥೆಗಳಿಗೆ ಖಾಲಿ ಜಾಗ ಹಾಗೂ ಇತರ ಸಂಪನ್ಮೂಲಗಳೊಂದಿಗೆ ಸಹಕರಿಸಬಹುದು ಎಂದು ಸೂಚಿಸಿದೆ.
ಮಸೀದಿಗಳ ಧ್ವನಿವರ್ದಕಗಳ ಮೂಲಕ ಸರಕಾರದಿಂದ ಹೊರಡಿಸಿರುವ ಕೋವಿಡ್-19 ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಬಗ್ಗೆ ಜಾಗೃತಿ ಮೂಡಿಸಲು ಆದೇಶಿಸಲಾಗಿದೆ. ರಾಜ್ಯದ ವಕ್ಪ್ ಸಂಸ್ಥೆಗಳ ಪದಾಧಿಕಾರಿಗಳು ಜಿಲ್ಲಾಡಳಿತ, ಆರೋಗ್ಯ ಇಲಾಖೆ ಹಾಗೂ ಸ್ಥಳೀಯ ಸಂಘ-ಸಂಸ್ಥೆಗಳೊಂದಿಗೆ ಕೈ ಜೋಡಿಸಿ ಸಹಕರಿಸುವಂತೆಯೂ ವಕ್ಫ್ ಬೋರ್ಡ್ ಸೂಚಿಸಿದೆ.
0 comments:
Post a Comment