ಆರೋಗ್ಯ ತುರ್ತು ಪರಿಸ್ಥಿತಿಯಲ್ಲೂ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರ ಆಕ್ರೋಶ
ಬೆಳ್ತಂಗಡಿ, ಮೇ 16, 2021 (ಕರಾವಳಿ ಟೈಮ್ಸ್) : ಕೋರೋನಾ ವೈರಸ್ ಕ್ಷಿಪ್ರವಾಗಿ ವ್ಯಾಪಿಸುತ್ತಾ ಮನುಷ್ಯ ಜೀವಗಳನ್ನು ಪ್ರತಿ ನಿಮಿಷವೂ ಆಹುತಿ ಪಡೆಯುತ್ತಿರುವ ಸಂಧಿಗ್ಧ ಪರಿಸ್ಥಿತಿಯಲ್ಲಿ ಸರಕಾರ ಹಾಗೂ ಖಾಸಗಿ ಸಂಸ್ಥೆಗಳು ಯುದ್ದೋಪಾದಿಯಲ್ಲಿ ಆರೋಗ್ಯ ಕೇಂದ್ರಗಳು ಹಾಗೂ ಆರೋಗ್ಯ ಸಂಬಂಧಿ ಪರಿಕರಗಳನ್ನು ಸಜ್ಜುಗೊಳಿಸುತ್ತಿದ್ದರೆ, ಇತ್ತ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮಕ್ಕೆ ಈಗಾಗಲೇ ಪ್ರಾಥಮಿಕ ಆರೋಗ್ಯ ಕೇಂದ್ರ ಭಾಗ್ಯ ಒದಗಿಬಂದು ಹಲವು ಸಮಯಗಳೇ ಕಳೆದರೂ ಇನ್ನೂ ಉದ್ಘಾಟನೆ ಭಾಗ್ಯ ಕಾಣದೆ ಇಲ್ಲಿನ ಜನ ಆರೋಗ್ಯ ಸಂಬಂಧಿ ಸಮಸ್ಯೆಗಳಿಗೆ ಇನ್ನೆಲ್ಲಿಗೋ ಹೋಗಬೇಕಾದ ದುರಂತ ಸನ್ನಿವೇಶ ನಿರ್ಮಾಣವಾಗಿರುವ ಬಗ್ಗೆ ಸ್ಥಳೀಯ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳೀಯ ಗ್ರಾಮ ಪಂಚಾಯತ್ ಆಗಲೀ, ಶಾಸಕರಾಗಲೀ, ಜಿಲ್ಲಾ-ತಾಲೂಕು ಆರೋಗ್ಯಾಧಿಕಾರಿಗಳಾಗಲೀ, ಜಿಲ್ಲಾ ಉಸ್ತುವಾರಿ ಸಚಿವರಾಗಲೀ ಈ ಬಗ್ಗೆ ಇನ್ನೂ ಎಚ್ಚರಗೊಂಡಂತೆ ಕಂಡು ಬರುತ್ತಿಲ್ಲ. ಸುಸಜ್ಜಿತ ಕಟ್ಟಡ ನಿರ್ಮಾಣಗೊಂಡು ಇನ್ನೇನು ಸಕಲ ಸೌಲಭ್ಯ ಒದಗಿಸಿ ಉದ್ಘಾಟನೆಗೊಂಡು ಗ್ರಾಮಸ್ಥರ ಆರೋಗ್ಯ ಸೇವೆಗೆ ಸಜ್ಜಾಗಬೇಕಿದ್ದ ಚಾರ್ಮಾಡಿ ಪ್ರಾಥಮಿಕ ಆರೋಗ್ಯ ಕೇಂದ್ರ ಮಾತ್ರ ಇನ್ನೂ ಲಾಕ್ ಆಗಿಯೇ ಇದೆ. ಕೊರೋನಾ ಲಾಕ್ ಡೌನ್ ಸಂದರ್ಭ ಜನ ಆರೋಗ್ಯ ಸಂಬಂಧಿ ಸಮಸ್ಯೆಗಳಿಗಾಗಿ ಗ್ರಾಮ ಬಿಟ್ಟು ತೆರಳದ ಪರಿಸ್ಥಿತಿ ಇದ್ದು, ಇದಕ್ಕಾಗಿ ಎಲ್ಲಾ ಗ್ರಾಮಗಳಲ್ಲಿ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಗಳೇ ಆರೋಗ್ಯ ಸಂಜೀವಿನಿಯಾಗಿ ಕಾರ್ಯನಿರ್ವಹಿಸುತ್ತಿದೆ. ಆದರೆ ಚಾರ್ಮಾಡಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಮಾತ್ರ ಇನ್ನೂ ಲಾಕ್ ರಿಲೀಸ್ ಆಗದೆ ಜನರ ಸೇವೆಗಾಗಿ ಜನಪ್ರತಿನಿಧಿಗಳ ಹಸಿರು ನಿಶಾನೆಗಾಗಿ ಕಾಯುತ್ತಿದೆ.
ನಿಜಕ್ಕೂ ಈ ಕೊರೋನಾ ಸಂಧಿಗ್ಧತೆಯ ಸಂದರ್ಭ ಇದ್ದ ಎಲ್ಲಾ ಖಾಲಿ ಕೊಠಡಿಗಳನ್ನು ಆರೋಗ್ಯ ಕೇಂದ್ರ, ಕೋವಿಡ್ ಕೇರ್ ಸೆಂಟರ್‍ಗಳಾಗಿ ಪರಿವರ್ತಿಸಿ ಸಕಲ ವೈದ್ಯಕೀಯ ಸೌಲಭ್ಯ ಒದಗಿಸುವ ಕಾರ್ಯ ಯುದ್ದೋಪಾದಿಯಲ್ಲಿ ನಡೆಯುತ್ತಿದ್ದರೆ ಚಾರ್ಮಾಡಿ ಆರೋಗ್ಯ ಕೇಂದ್ರ ಕಟ್ಟಡ ಮಾತ್ರ ಸುಸಜ್ಜಿತವಾಗಿ ಪೂರ್ಣಗೊಂಡಿದ್ದರೂ ಜನಸೇವೆಗೆ ಒಗ್ಗಿಸಿಕೊಳ್ಳುವ ಭಾಗ್ಯ ಇನ್ನೂ ಕೂಡಾ ಒದಗಿ ಬಾರದೆ ಇರುವುದು ಮಾತ್ರ ಈ ಗ್ರಾಮದ ಜನರ ದೌರ್ಭಾಗ್ಯವೇ ಸರಿ ಎನ್ನಬಹುದು.
ಬೆಳ್ತಂಗಡಿ ತಾಲೂಕಿನಾದ್ಯಂತ ಇರುವ ಎಲ್ಲ ಸಮುದಾಯ ಭವನಗಳು, ಮಸೀದಿ-ದೇಗುಲ, ಚರ್ಚ್, ಮದ್ರಸಗಳು ಸ್ವತಃ ಜನರ ಜೀವ ರಕ್ಷಣೆಗಾಗಿ ಮುಂದೆ ಬಂದು ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಲು ಆಸಕ್ತಿ ತೋರುತ್ತಿರುವ ಈ ಒಂದು ಆರೋಗ್ಯ ತುರ್ತು ಪರಿಸ್ಥಿತಿಯ ಸಂದರ್ಭ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರ ಸುವ್ಯವಸ್ಥಿತ ಸುಂದರ ಕಟ್ಟಡ ನಿರ್ಮಾಣಗೊಂಡು ಸುಮಾರು 2 ವರ್ಷಗಳೇ ಕಳೆದರೂ ಇನ್ನೂ ಜನರ ಆರೋಗ್ಯ ಸೇವೆಗಾಗಿ ಸಜ್ಜಾಗಿಲ್ಲ ಎಂಬುದೇ ನಮ್ಮೆಲ್ಲರ ದೌರ್ಭಾಗ್ಯ ಎಂದು ಸ್ಥಳೀಯರು ಅಸಮಾಧಾನ ಹೊರ ಹಾಕಿದ್ದಾರೆ.
ಕೋವಿಡ್ ಮೊದಲ ಅಲೆ ಮುಗಿದು, 2ನೇ ಅಲೆಯು ಬಹುತೇಕ ಅಂತ್ಯಗೊಂಡು 3ನೇ ಅಲೆಯ ಭೀತಿಯಲ್ಲಿ ಜನ ಜೀವ ಕೈಯಲ್ಲಿ ಹಿಡಿದು ದಿನದೂಡುವ ಸಂದರ್ಭ ಇನ್ನಾದರೂ ಚಾರ್ಮಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸರಕಾರ, ಜನಪ್ರತಿನಿಧಿಗಳು ಮನಸ್ಸು ಮಾಡಿ ಜನಸೇವೆಗೆ ಒಗ್ಗಿಕೊಳ್ಳುವ ಅವಕಾಶವನ್ನು ಕಲ್ಪಿಸಬೇಕು ಎಂದು ಸ್ಥಳೀಯ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಇಲ್ಲಿನ ನಾಗರಿಕರಿಗೆ ಇದೀಗ ಕೋವಿಡ್ ಸಂಬಂಧಿ ಹಾಗೂ ಇತರ ಆರೋಗ್ಯ ಸಂಬಂಧಿ ಚಿಕಿತ್ಸೆಗಾಗಿ ಕಕ್ಕಿಂಜೆಯ ಪಂಚಾಯತ್ ಕಟ್ಟಡದಲ್ಲಿ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ ಎಂದು ಬೆಳ್ತಂಗಡಿ ತಾಲೂಕು ಆರೋಗ್ಯಾಧಿಕಾರಿಗಳು ಹೇಳಿಕೆ ನೀಡುತ್ತಾರಾದರೂ ಅಲ್ಲಿ ಕೇವಲ ಒಬ್ಬರೇ ನರ್ಸ್ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಯಾವುದೇ ವೈದ್ಯರ ವ್ಯವಸ್ಥೆ ಅಲ್ಲಿಲ್ಲ. ರೋಗಿಗಳಿಗೆ ಬೇಕಾದ ಯಾವುದೇ ಟೆಸ್ಟ್ ಆಗಲೀ, ಔಷಧಿಗಳಾಗಲೀ ಲಭ್ಯವಿರುವುದಿಲ್ಲ. ನರ್ಸ್ ಬಂದವರಿಗೆ ಕೇವಲ ಟ್ಯಾಬ್ಲೆಟ್ ಅಷ್ಟೇ ಕೊಟ್ಟು ಕಳಿಸುತ್ತಾರೆ ಎನ್ನುತ್ತಾರೆ ಸ್ಥಳೀಯರು.
ಸ್ಥಳೀಯ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ವಿ. ಪ್ರಸಾದ್ ಅವರು ಲಾಕ್‍ಡೌನ್ ಕಾರಣದಿಂದ ಆರೋಗ್ಯ ಕೇಂದ್ರ ಉದ್ಘಾಟನೆ ಮುಂದೂಡಲಾಗಿದೆ ಎಂದು ಹೇಳಿಕೊಳ್ಳುತ್ತಿದ್ದರೂ ಇಂತಹದ್ದೇ ಹೇಳಿಕೆಗಳನ್ನು ಹಲವು ಬಾರಿ ಅವರು ನೀಡುತ್ತಾ ಬಂದಿದದ್ದಾರೆ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.
ಇಲ್ಲಿನ ಗ್ರಾಮಸ್ಥರು ಪ್ರಾಥಮಿಕ ಆರೋಗ್ಯ ಕೇಂದ್ರದ ಅವಶ್ಯಕತೆಗಳಿಗಾಗಿ ದೂರದ ಸೋಮಂತಡ್ಕ ಅಥವಾ ಅಣಿಯೂರ್ ಹಾಗೂ ಉಜಿರೆ ಕಡೆ ಪ್ರಯಾಣಿಸಬೇಕಾದ ಅನಿವಾರ್ಯತೆ ಇದೆ ಎನ್ನುವ ಸಾರ್ವಜನಿಕರು ಒಂದೋ ಆರೋಗ್ಯ ಕೇಂದ್ರವನ್ನು ಜನರ ಸೇವೆಗೆ ಅರ್ಪಿಸಿ ಅಥವಾ ಇಲ್ಲಿನ ಗ್ರಾಮಸ್ಥರ ಅನುಕೂಲತೆಗಾಗಿ ಆರೋಗ್ಯ ತುರ್ತು ಪರಿಸ್ಥಿತಿ ಎದುರಿಸಲು ಬೇಕಾಗುವ ಬೆಡ್ ಹಾಗೂ ಇತರ ವ್ಯವಸ್ಥೆಗಳನ್ನು ಮಾಡಿಕೊಡಿ ಎಂದು ಸಾರ್ವಜನಿಕರು ಸ್ಥಳೀಯ ಶಾಸಕರನ್ನು ಒತ್ತಾಯಿಸಿದ್ದಾರೆ. ಅಲ್ಲದೆ ಇದು ಘಾಟಿ ಪ್ರದೇಶವಾಗಿರುವುದರಿಂದ ಜನ ಆರೋಗ್ಯ ಸಂಬಂಧಿ ಸಮಸ್ಯೆಗಳಿಗಾಗಿ ಪರದಾಟ ನಡೆಸುವ ಸ್ಥಿತಿಯೂ ಇದ್ದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇದನ್ನು ಮನಗಾಣಬೇಕು ಎಂದು ಕೂಡಾ ಸ್ಥಳೀಯರು ಆಗ್ರಹಿಸಿದ್ದಾರೆ.
ಇಲ್ಲಿನ ಆರೋಗ್ಯ ಕೇಂದ್ರದ ಬಗ್ಗೆ ಸಾರ್ವಜನಿಕರು ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಮೂಲಕ ದುಂಬಾಲು ಬೀಳಲು ಆರಂಭಿಸಿ ಹಲವು ಸಮಯಗಳೇ ಕಳೆದಿದೆ. ಇನ್ನಾದರೂ ಸಂಬಂಧಪಟ್ಟವರು ಎಚ್ಚೆತ್ತುಕೊಂಡು ಜನಪರ ನಿಲುವು ತಳೆಯದೆ ಇದ್ದಲ್ಲಿ ಚಾರ್ಮಾಡಿ ಗ್ರಾಮದ ಸರ್ವ ನಾಗರಿಕರು ಒಟ್ಟು ಸೇರಿಕೊಂಡು ಉಗ್ರ ರೀತಿಯ ಹೋರಾಟ ಹಾಗೂ ಪ್ರತಿಭಟನೆಗಳನ್ನು ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಸಿದ್ದಾರೆ.
0 comments:
Post a Comment