ಬೆಂಗಳೂರು, ಮೇ 03, 2021 (ಕರಾವಳಿ ಟೈಮ್ಸ್) : ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ನಡೆದ ದುರಂತದಲ್ಲಿ 24 ರೋಗಿಗಳು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ರಾಜ್ಯ ಸರಕಾರ ತನಿಖೆಗೆ ಆದೇಶ ನೀಡಿದೆ. ಆಕ್ಸಿಜನ್ ಕೊರತೆಯಿಂದ 24 ಮಂದಿ ರೋಗಿಗಳು ಮೃತಪಟ್ಟಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದೆಯಾದರೂ ಈ ಬಗ್ಗೆ ಸಮಗ್ರ ಹಾಗೂ ಕೂಲಂಕುಷ ತನಿಖೆ ನಡೆಸಲು ತೀರ್ಮಾನ ಕೈಗೊಂಡಿರುವ ಸರಕಾರ ಐಎಎಸ್ ಅಧಿಕಾರಿ, ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಅವರನ್ನು ತನಿಖಾಧಿಕಾರಿಯನ್ನಾಗಿ ನೇಮಕ ಮಾಡಿದೆ.
ಮೂರೇ ದಿನಗಳಲ್ಲಿ ಈ ಬಗ್ಗೆ ತನಿಖೆ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸುವಂತೆ ಶಿವಯೋಗಿ ಕಳಸದ ಅವರಿಗೆ ಸರಕಾರ ಸೂಚಿಸಿದೆ. ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ, ರಾಜ್ಯಾದ್ಯಂತ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಪೂರೈಕೆಯನ್ನು ಹೆಚ್ಚಿಸಲಾಗಿದೆ, ಬೇಡಿಕೆಗಳನ್ನು ಈಡೇರಿಸಲು ಸಾಧ್ಯವಾದಷ್ಟು ಪ್ರಯತ್ನಿಸುತ್ತಿದ್ದೇವೆ. ಪರಿಸ್ಥಿತಿ ಸಹಜತೆಗೆ ತರಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದೇವೆ ಎಂದಿದ್ದಾರೆ.
0 comments:
Post a Comment