ಬೆಂಗಳೂರು, ಮೇ 12, 2021 (ಕರಾವಳಿ ಟೈಮ್ಸ್) : ರಾಜ್ಯದಲ್ಲಿ ಕೊರೋನಾ ವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆ ಮುಂದೂಡಿಕೆಯಾದ ಹಿನ್ನೆಲೆಯಲ್ಲಿ ಜುಲೈ 7 ಮತ್ತು 8 ರಂದು ನಿಗದಿಯಾಗಿದ್ದ 2021ನೇ ಸಾಲಿನ ವೃತ್ತಿಪರ ಕೋರ್ಸುಗಳ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಯನ್ನು ಆಗಸ್ಟ್ ತಿಂಗಳಿಗೆ ಮುಂದೂಡಲಾಗಿದೆ.
ಜುಲೈ 7 ಹಾಗೂ ಜುಲೈ 8 ರಂದು ನಿಗದಿಪಡಿಸಲಾಗಿದ್ದ 2021ನೇ ಸಾಲಿನ ಪ್ರವೇಶ ಪರೀಕ್ಷೆಯನ್ನು ಮತ್ತು ಜುಲೈ 9 ರಂದು ನಡೆಯಬೇಕಿದ್ದ ಕನ್ನಡ ಭಾಷಾ ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬುಧವಾರ ತಿಳಿಸಿದೆ.
ಪ್ರಸ್ತುತ ಸಿಇಟಿ ಪರೀಕ್ಷೆಯನ್ನು ಆಗಸ್ಟ್ 28 ಮತ್ತು ಆಗಸ್ಟ್ 29 ರಂದು ಮತ್ತು ಕನ್ನಡ ಭಾಷಾ ಪರೀಕ್ಷೆಯನ್ನು ಆಗಸ್ಟ್ 30 ರಂದು ನಡೆಸಲಾಗುವುದು ಹಾಗೂ ಸದ್ಯದಲ್ಲಿಯೇ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.
ಕನ್ನಡ ಪರೀಕ್ಷೆಯನ್ನು ಹೊರನಾಡು ಹಾಗೂ ಗಡಿನಾಡು ಕನ್ನಡಿಗ ಅಭ್ಯರ್ಥಿಗಳು ಬರೆಯಲಿದ್ದಾರೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಎಂಜಿನಿಯರಿಂಗ್, ಕೃಷಿ ವಿಜ್ಞಾನ, ಪಶುವೈದ್ಯ, ಯೋಗ ಮತ್ತು ನ್ಯಾಚುರೋಪಥಿ, ಬಿ ಫಾರ್ಮ, ಫಾರ್ಮ-ಡಿ ಸೇರಿದಂತೆ ಇತರ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕಾಗಿ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಆಯೋಜಿಸುತ್ತಿದೆ.
0 comments:
Post a Comment