‘ಆರೋಗ್ಯ ತುರ್ತು ಪರಿಸ್ಥಿತಿ’ ನಿರ್ಮಾಣವಾಗದಂತೆ ಜಾಗೃತಿ ಅತೀ ಅಗತ್ಯ
ಬಂಟ್ವಾಳ, ಮೇ 01, 2021 (ಕರಾವಳಿ ಟೈಮ್ಸ್) : ನಗರ ಪ್ರದೇಶಗಳಲ್ಲಿ ಕೋವಿಡ್ 2ನೇ ಅಲೆ ಗಂಭೀರಾವಸ್ಥೆ ಪಡೆದುಕೊಳ್ಳುತ್ತಿದ್ದು, ಯಾವುದೇ ಕಾರಣಕ್ಕೂ ಆರೋಗ್ಯ ತುರ್ತು ಪರಿಸ್ಥಿತಿ ಉಂಟಾಗದಂತೆ ಪುರವಾಸಿಗಳು ಸ್ವಯಂ ನಿಯಂತ್ರಣ ಹೇರಿಕೊಂಡು ಸರಕಾರ ಹಾಗೂ ಅಧಿಕಾರಿಗಳೊಂದಿಗೆ ಸಹಕರಿಸುವ ಮೂಲಕ ಮಹಾಮಾರಿಯ ನಿರ್ಮೂಲನೆಗೆ ಕೈ ಜೋಡಿಸುವಂತೆ ಬಂಟ್ವಾಳ ಪುರಸಭಾಧ್ಯಕ್ಷ ಮುಹಮ್ಮದ್ ಶರೀಫ್ ಶಾಂತಿಅಂಗಡಿ ಅವರು ಸಾರ್ವಜನಿಕರಿಗೆ ಕರೆ ನೀಡಿದ್ದಾರೆ.
ಸೋಮವಾರ ಸಚಿವರು ಹಾಗೂ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಕೋವಿಡ್ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಬಂಟ್ವಾಳ ಸಮುದಾಯ ಆರೋಗ್ಯ ಕೇಂದ್ರ, ಕೈಕಂಬ ನಗರ ಆರೋಗ್ಯ ಪ್ರಾಥಮಿಕ ಕೇಂದ್ರ, ತಾಲೂಕು ಆರೋಗ್ಯಾಧಿಕಾರಿ ಕಛೇರಿಗೆ ಭೇಟಿ ನೀಡಿ ಪುರಸಭಾ ವ್ಯಾಪ್ತಿಯ ಕೋವಿಡ್ ಪಾಸಿಟಿವ್ ಸಕ್ರಿಯ ಪ್ರಕರಣಗಳ ಬಗ್ಗೆ ಹಾಗೂ ಪುರಸಭಾ ವ್ಯಾಪ್ತಿಯಲ್ಲಿ ಅಧಿಕಾರಿಗಳು ಕೋವಿಡ್ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ಪಡೆದು ಮಾತನಾಡಿದ ಅವರು ಈಗಾಗಲೇ ಕೋವಿಡ್ 2ನೇ ಅಲೆ ಕೈ ಮೀರಿ ಹೋಗುತ್ತಿದ್ದು, ಪಾಸಿಟಿವ್ ಸಕ್ರಿಯ ಪ್ರಕರಣಗಳ ಸಂಖ್ಯೆ ಉಲ್ಬಣಗೊಳ್ಳುತ್ತಿದೆ. ಈ ಹಿನ್ನಲೆಯಲ್ಲಿ ಪರಿಸ್ಥಿತಿ ವಿಷಮ ಹಂತಕ್ಕೆ ತಲುಪುವುದನ್ನು ತಡೆಯುವ ನಿಟ್ಟಿನಲ್ಲಿ ನಾವೆಲ್ಲರೂ ಹೊಂದಾಣಿಕೆಯಿಂದ ಸ್ವಯಂ ನಿಯಂತ್ರಣ ಹೇರಿಕೊಂಡು ಕೋವಿಡ್ ನಿಯಂತ್ರಣಾ ಕ್ರಮಗಳನ್ನು ಪ್ರತಿಯೊಬ್ಬರು ಸ್ವತಃ ಪಾಲನೆ ಮಾಡಲೇಬೇಕಿದೆ. ಈ ಬಗ್ಗೆ ಯಾವುದೇ ರಾಜಿ ಮಾಡಿಕೊಳ್ಳದೆ ಸರಕಾರದ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಕರೆ ನೀಡಿದರು. ಯಾವುದೇ ಕಾರಣಕ್ಕೂ ಜನ ಅತ್ಯಂತ ಅನಿವಾರ್ಯ ಪರಿಸ್ಥಿತಿ ಹೊರತುಪಡಿಸಿ ಮನೆಯಿಂದ ಹೊರಬರಲೇ ಬಾರದು. ಮನೆಯಲ್ಲೇ ಗರಿಷ್ಠ ಪ್ರಮಾಣದಲ್ಲಿ ತಮ್ಮ ಕೆಲಸ ಕಾರ್ಯಗಳನ್ನು ನಿರ್ವಹಿಸುವ ಮೂಲಕ ಮಹಾಮಾರಿಯನ್ನು ಒದ್ದೋಡಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕಾಗಿದೆ ಎಂದ ಅಧ್ಯಕ್ಷ ಶರೀಫ್ ಪುರಸಭಾ ವ್ಯಾಪ್ತಿಯ ಎಲ್ಲಾ ವಾರ್ಡ್‍ಗಳ ಸದಸ್ಯರು ತಮ್ಮ ತಮ್ಮ ವಾರ್ಡ್ ವ್ಯಾಪ್ತಿಯ ಜನರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿಕೊಂಡು ಕಾರ್ಯನಿರ್ವಹಿಸಬೇಕಾಗಿದೆ. ಕೋವಿಡ್ ಮಾರ್ಗಸೂಚಿಯನ್ನು ತಪ್ಪದೇ ಪಾಲಿಸುವ ಮೂಲಕ ಜನರೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಂಡು ಜನರ ಆಗು-ಹೋಗುಗಳಿಗೆ ಸ್ಪಂದಿಸಬೇಕು ಎಂದು ಎಲ್ಲ ಸದಸ್ಯರನ್ನು ಅಧ್ಯಕ್ಷನ ನೆಲೆಯಲ್ಲಿ ವಿನಂತಿ ಮಾಡುತ್ತಿದ್ದೇನೆ ಎಂದು ಕೋರಿದರು. ಪುರಸಬಾ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ ಈ ಸಂದರ್ಭ ಜೊತೆಗಿದ್ದರು.
0 comments:
Post a Comment