ಬಂಟ್ವಾಳ, ಮೇ 29, 2021 (ಕರಾವಳಿ ಟೈಮ್ಸ್) : ಕೊರೋನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಪುರಸಭೆಯಲ್ಲಿ ಶುಕ್ರವಾರ ಕರೆಯಲಾಗಿದ್ದ ವಿಶೇಷ ತುರ್ತು ಸಭೆಯಲ್ಲಿ ಆಡಳಿತ-ವಿಪಕ್ಷ ಸದಸ್ಯರು ಪರಸ್ಪರ ಆರೋಪ-ಪ್ರತ್ಯಾರೋಪ ಮಾಡುತ್ತಾ ಸಭಾಂಗಣದಲ್ಲೆ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ ಘಟನೆ ನಡೆದಿದೆ.
ಇದುವರೆಗೆ ಬಂಟ್ವಾಳ ಪುರಸಭೆಯಲ್ಲಿ ಕೋವಿಡ್ ಟಾಸ್ಕ್ ಫೋರ್ಸ್ ಸಮಿತಿಯನ್ನೇ ರಚಿಸದ ಬಗ್ಗೆ ಅಧ್ಯಕ್ಷ ಹಾಗೂ ಆಡಳಿತ-ವಿಪಕ್ಷ ಸದಸ್ಯರ ಆಕ್ರೋಶದ ಹಿನ್ನಲೆಯಲ್ಲಿ ಸ್ವತಃ ಶಾಸಕ ರಾಜೇಶ್ ನಾಯಕ್ ಅವರು ಕಳೆದ ಬುಧವಾರದಿಂದ ಐದೈದು ವಾರ್ಡ್‍ಗಳ ಸದಸ್ಯರ ಸಭೆಯನ್ನು ಪುರಸಭೆಯಲ್ಲಿ ಕರೆದ ಬಳಿಕ ಪುರಸಭಾಧ್ಯಕ್ಷ ಮುಹಮ್ಮದ್ ಶರೀಫ್ ಶಾಂತಿಅಂಗಡಿ ಅವರು ಶುಕ್ರವಾರ ಪುರಸಭೆಯ ಎಲ್ಲಾ ಚುನಾಯಿತ ಪ್ರತಿನಿಧಿಗಳ ತುರ್ತು ವಿಶೇಷ ಸಭೆ ಕರೆದಿದ್ದರು. ಸಭೆಯಲ್ಲಿ ವಿಷಯಗಳು ಚರ್ಚೆಗೊಳ್ಳುತ್ತಿರುವಂತೆ ಹಿರಿಯ ಸದಸ್ಯ ಗೋವಿಂದ ಪ್ರಭು ಅವರು ಪುರಸಭಾಡಳಿತ ವಿಫಲಗೊಂಡಿದೆ ಎಂಬ ಧಾಟಿಯಲ್ಲಿ ಮಾತನಾಡಿದ್ದು, ಆಡಳಿತ ಪಕ್ಷದ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಅವರನ್ನು ಕೆರಳಿಸಿತು. ಈ ಸಂದರ್ಭ ಗೋವಿಂದ ಪ್ರಭು ಜೊತೆ ನೇರ ಮಾತಿನ ವಿನಿಮಯಕ್ಕಿಳಿದ ಸಿದ್ದೀಕ್ ಅವರು ಪುರಸಭಾಡಳಿತ ವಿಫಲಗೊಂಡಿಲ್ಲ. ರಾಜ್ಯ ಸರಕಾರದಿಂದ ಪುರಸಭೆಗೆ ಯಾವುದೇ ಅನುದಾನವಾಗಲೀ, ಸಹಕಾರವಾಗಲೀ ದೊರೆತಿಲ್ಲ. ಹೀಗಿದ್ದರೂ ಸಭೆ ಕರೆದು ಚರ್ಚಿಸುವಂತೆ ಅಧಿಕಾರಿಗಳಿಗೆ ಪುರಸಭಾಧ್ಯಕ್ಷರು ಹೇಳಿದರೂ ಅಧಿಕಾರಿಗಳು ಕೇಳುತ್ತಿಲ್ಲ ಎಂದು ಎದಿರೇಟು ನೀಡಿದರು. ಈ ಸಂದರ್ಭ ಗೋವಿಂದ ಪ್ರಭು ಹಾಗೂ ಹರಿಪ್ರಸಾದ್ ಅವರು ಲಸಿಕೆ ವಿಚಾರದಲ್ಲಿ ಕಾಂಗ್ರೆಸ್ ಅಪಪ್ರಚಾರ ಮಾಡಿದ್ದರಿಂದ ಆರಂಭದಲ್ಲಿ ಯಾರೂ ಕೂಡಾ ಲಸಿಕೆ ಪಡೆಯಲು ಮುಂದೆ ಬಂದಿಲ್ಲ ಎಂದು ಆರೋಪಿಸಿದರೆ, ಇದಕ್ಕೆ ಪ್ರತಿಕ್ರಯಿಸಿದ ಸಿದ್ದೀಕ್ ಅವರು ಕಾಂಗ್ರೆಸ್ ನಾಯಕರೂ ಎಲ್ಲಿಯಾದರೂ ಲಸಿಕೆ ಪಡೆಯದೆ ಇರುವುದು ಹಾಗೂ ಆ ಬಗ್ಗೆ ಅಪಪ್ರಚಾರ ಮಾಡಿದ್ದಿದ್ದರೆ ಸಾಬೀತುಪಡಿಸಿ ಎಂದು ಸವಾಲೆಸೆದರು.
ಈ ಸಂದರ್ಭ ಆಡಳಿತ-ವಿಪಕ್ಷ ಪಕ್ಷ ಸದಸ್ಯರುಗಳ ನಡುವೆ ಮಾತಿನ ವಿನಿಮಯ ತಾರಕಕ್ಕೇರಿದ್ದು, ಒಂದು ಹಂತದಲ್ಲಿ ಗೋವಿಂದ ಪ್ರಭು ಅವರು ಎದಿರೇಟು ನೀಡುತ್ತಿದ್ದ ಸಿದ್ದೀಕ್ ಅವರನ್ನು ಹೊರಗೆ ಬರುವಂತೆ ಪಂಥಾಹ್ವಾನ ನೀಡಿದ್ದು ಸಿದ್ದೀಕ್ ಅವರನ್ನು ಮತ್ತಷ್ಟು ಕೆರಳಿಸಿತು. ಸವಾಲು ಸ್ವೀಕರಿಸಿದ ಸಿದ್ದೀಕ್ ಅವರು ಕುಳಿತ ಆಸನದಿಂದ ಎದ್ದು ನೇರವಾಗಿ ಗೋವಿಂದ ಪ್ರಭು ಅವರಿದ್ದಲ್ಲಿ ಬಂದು, ನೀವೊಬ್ಬರು ಹಿರಿಯ ಸದಸ್ಯರಾಗಿದ್ದು, ಮರ್ಯಾದೆ ಕೊಟ್ಟು ಮಾತನಾಡಿ, ತಪ್ಪಿ ಮಾತನಾಡಿದಲ್ಲಿ, ಕೈ ತೋರಿಸಿ ಮಾತನಾಡಿದಲ್ಲಿ ಸುಮ್ಮನಿರಲು ಸಾಧ್ಯವಿಲ್ಲ ಎಂದು ಏರು ಧ್ವನಿಯಲ್ಲಿ ಮಾತನಾಡಿದರು. ಈ ಸಂದರ್ಭ ಬಿಜೆಪಿ ಸದಸ್ಯ ಹರಿಪ್ರಸಾದ್ ಅವರು ಗೋವಿಂದ ಪ್ರಭು ಜೊತೆ ಸೇರಿ ಮಾತನಾಡಿದರೆ, ಆಡಳಿತ ಪಕ್ಷದ ಸದಸ್ಯರು ಸಿದ್ದೀಕ್ ಜೊತೆಗೂಡಿ ವಿಪರೀತ ಮಾತಿನ ವಿನಿಮಯ ನಡೆದು ಇಡೀ ಸಭೆ ಒಂದು ಕ್ಷಣ ಆತಂಕದ ಕ್ಷಣವನ್ನು ಎದುರಿಸುವಂತಾಯಿತು. ಸಭೆಯಲ್ಲಿದ್ದ ತಾಲೂಕು ತಹಶೀಲ್ದಾರ್ ರಶ್ಮಿ ಎಸ್ ಆರ್, ತಾಲೂಕು ಆರೋಗ್ಯಾಧಿಕಾರಿ ಡಾ ದೀಪಾ ಪ್ರಭು, ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಸಹಿತ ಮೊದಲಾದ ಅಧಿಕಾರಿಗಳು ಪುರಪಿತೃಗಳ ಮಾತಿನ ರಂಪಾಟಕ್ಕೆ ಮೂಕ ಸಾಕ್ಷಿಯಾದರು.
ಬಳಿಕ ಮಧ್ಯಪ್ರವೇಶಿಸಿದ ತಹಶೀಲ್ದಾರ್ ರಶ್ಮಿ ಅವರು ಕಳೆದು ಹೋದ ಘಟನೆಗಳ ಬಗ್ಗೆ ಚರ್ಚಿಸದೆ ಮುಂದಿನ ದಿನಗಳಲ್ಲಿ ಪುರಸಭಾ ವ್ಯಾಪ್ತಿಯಲ್ಲಿ ಕೊರೋನಾ ನಿಯಂತ್ರಣದ ಬಗ್ಗೆ ಯಾವ ರೀತಿ ಕ್ರಮ ಕೈಗೊಳ್ಳಬಹುದು ಎಂಬ ಬಗ್ಗೆ ಚರ್ಚಿಸಿ ಎಂದು ಸಲಹೆ ನೀಡಿ ಚರ್ಚೆಗೆ ತೆರೆ ಎಳೆದರು.
ಪುರಸಭಾ ಸದಸ್ಯರುಗಳಾದ ಮೂನಿಶ್ ಅಲಿ, ಜನಾರ್ದನ ಚೆಂಡ್ತಿಮಾರ್, ಗಂಗಾಧರ ಪೂಜಾರಿ ಅವರು ಪುರಸಭಾಧಿಕಾರಿಗಳು ಯಾವುದೇ ಮಾಹಿತಿಗಳನ್ನು ಸದಸ್ಯರ ಗಮನಕ್ಕೆ ತಾರದೇ ಇರುವುದರಿಂದ ಸದಸ್ಯರು ಜವಾಬ್ದಾರಿ ಅರಿತು ಕೆಲಸ ಮಾಡಲು ಅಡ್ಡಿಯಾಗಿದೆ ಎಂದು ಆರೋಪಿಸಿದರು.
0 comments:
Post a Comment