ಬಂಟ್ವಾಳ, ಮೇ 26, 2021 (ಕರಾವಳಿ ಟೈಮ್ಸ್) : ಕೊರೋನಾ ಸಂದರ್ಭ ಎಲರ್ಟ್ ಆಗಿರಬೇಕಾಗಿದ್ದ ಅಧಿಕಾರಿಗಳು ಸಂಪೂರ್ಣವಾಗಿ ಮಕಾಡೆ ಮಲಗಿದ್ದರೆ ಏನಾಗುತ್ತದೆ ಎಂಬುದಕ್ಕೆ ಬಂಟ್ವಾಳ ಪುರಸಭೆಯೇ ಸಾಕ್ಷಿಯಾಗಿದ್ದು, ಕೊರೋನಾ ಎದುರಿಸುವಲ್ಲಿ ಟಾಸ್ಕ್ ಫೋರ್ಸ್ ಸಮಿತಿಯೇ ರಚಿಸದೆ ಮಲಗಿದ ಸ್ಥಿತಿಯಲ್ಲಿದ್ದ ಇಲ್ಲಿನ ಪುರಸಭಾಧಿಕಾರಿಗಳಿಗೆ ಕೊನೆಗೂ ಶಾಸಕ ಯು ರಾಜೇಶ್ ನಾಯಕ್ ಸಕತ್ ಆಗಿಯೇ ಝಾಡಿಸಿದ್ದಾರೆ.
ಕೋವಿಡ್ 2ನೇ ಅಲೆ ವ್ಯಾಪಕತೆಯ ಸಂದರ್ಭ ನಿಯಂತ್ರಣಕ್ಕಾಗಿ ಸರಕಾರ ಲಾಕ್ ಡೌನ್ ಘೋಷಿಸಿದ್ದು, ಎಲ್ಲಾ ಸ್ಥಳೀಯಾಡಳಿತಗಳು ಚುನಾಯಿತ ಜನಪ್ರತಿನಿಧಿಗಳ ನೇತೃತ್ವದಲ್ಲಿ ಅಲ್ಲಿನ ಅಧಿಕಾರಿಗಳು ಟಾಸ್ಕ್ ಫೋರ್ಸ್ ಸಮಿತಿ ರಚನೆ ಮಾಡಿ ಆಹೋರಾತ್ರಿ ಕೆಲಸ ಮಾಡಿದ್ದರೆ, ಬಂಟ್ವಾಳ ಪುರಸಭೆಯ ಅಧ್ಯಕ್ಷರು, ಸದಸ್ಯರುಗಳು ಟಾಸ್ಕ್ ಫೋರ್ಸ್ ಸಮಿತಿ ರಚಿಸಿ ಕಾರ್ಯಪ್ರವೃತ್ತರಾಗುವಂತೆ ನಿರಂತರ ಒತ್ತಾಯಿಸುತ್ತಿದ್ದರೂ ಇಲ್ಲಿನ ಅಧಿಕಾರಿಗಳು ಮಾತ್ರ ಇದಕ್ಕೂ ನಮಗೂ ಏನೂ ಸಂಬಂಧವೇ ಇಲ್ಲ ಎಂಬಂತೆ ವರ್ತಿಸಿದ್ದರು. ಇದನ್ನು ಮನಗಂಡ ಶಾಸಕ ಯು ರಾಜೇಶ್ ನಾಯಕ್ ಕೊನೆಗೂ ತಾನೇ ಖುದ್ದು ಎಚ್ಚೆತ್ತುಕೊಂಡು ಪುರಸಭೆಯ ಐದೈದು ವಾರ್ಡ್‍ಗಳ ಸದಸ್ಯರುಗಳ ಸಭೆಯನ್ನು ಬುಧವಾರದಿಂದ ಕರೆದಿದ್ದು, ಪ್ರಥಮ ಸಭೆಗೆ ಹಾಜರಾದ ನಾಲ್ಕು ವಾರ್ಡ್‍ಗಳ ಸದಸ್ಯರುಗಳು ಇಲ್ಲಿನ ಅಧಿಕಾರಿಗಳ ಏಕಚಕ್ರಾಧಿಪತ್ಯದ ವಿರುದ್ದ ಶಾಸಕರಿಗೆ ಆಕ್ರೋಶಿತರಾಗಿಯೇ ದೂರಿಕೊಂಡರು. ಪುರಸಭಾಧಿಕಾರಿಗಳು ಚುನಾಯಿತ ಜನಪ್ರತಿನಿಧಿಗಳಾದ ನಮಗೆ ಯಾವುದೇ ಮಾಹಿತಿ ನೀಡುತ್ತಿಲ್ಲ, ಪ್ರತಿನಿಧಿಗಳನ್ನು ಲೆಕ್ಕಕ್ಕೇ ತೆಗೆದುಕೊಳ್ಳುತ್ತಿಲ್ಲ ಎಂದು ದೂರಿದರು. ಕಾರಿನಲ್ಲಿ ತೆರಳಿ ಅಂಗಡಿ ಮಾಲಕರಿಗೆ ದಂಡ ವಿಧಿಸಿದ್ದು ಬಿಟ್ಟರೆ ಪುರಸಭಾಧಿಕಾರಿಗಳು ಪುರವಾಸಿಗಳ ಯೋಗಕ್ಷೇಮದ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದ ಸದಸ್ಯರು ದಂಡ ವಿಧಿಸುವುದು ಮಾತ್ರ ತಮ್ಮ ಪಾಲಿನ ಕೊರೋನಾ ಕರ್ತವ್ಯ ಎಂದು ಕೊಂಡಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪುರಸಭಾಧ್ಯಕ್ಷ ಹಾಗೂ ಸದಸ್ಯರುಗಳ ದೂರಿನಿಂದ ತೀವ್ರ ಕೆಂಡಾಮಂಡಲರಾದ ಶಾಸಕ ರಾಜೇಶ್ ನಾಯಕ್ ಪುರಸಭಾ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಅವರನ್ನು ತರಾಟೆಗೆಳೆದುಕೊಂಡರು. ಪುರಸಭಾ ಅಧ್ಯಕ್ಷರು ಹಾಗೂ ಸದಸ್ಯರುಗಳಿಗೇ ಮಾಹಿತಿ ಇಲ್ಲದಿದ್ದಲ್ಲಿ ಸಭೆ ನಡೆಸುವುದಾದರೂ ಹೇಗೆ? ಸಭೆ ನಡೆಸುವ ಉದ್ದೇಶ ಆದರೂ ಏನು ಎಂದು ಪ್ರಶ್ನಿಸಿದರಲ್ಲದೆ ತಮ್ಮೊಳಗಿನ ಯಾವುದೇ ಶೀತಲ ಸಮರ ಇದ್ದರೂ ಎಲ್ಲವನ್ನೂ ದೂರ ಇಟ್ಟು ಜನರ ಜೀವ ಉಳಿಸುವ ದೃಷ್ಟಿಯಿಂದ ಒಟ್ಟಾಗಿ ಕಾರ್ಯನಿರ್ವಹಿಸಿ ಎಂದು ಸಲಹೆ ನೀಡಿದರು. ತಮ್ಮ ಪ್ರತಿಷ್ಠೆ-ಅಹಂಗಳಿಗಾಗಿ ಜನರ ಜೀವದೊಂದಿಗೆ ಚೆಲ್ಲಾಟ ಆಡದಿರಿ ಎಂದು ಶಾಸಕರು ಅಧಿಕಾರಿಗಳಿಗೆ ಖಡಕ್ ಕ್ಲಾಸ್ ತೆಗೆದುಕೊಂಡರು. ನಾಲ್ಕು ವಾರ್ಡ್‍ಗಳ ಸದಸ್ಯರುಗಳಾದ ಗಂಗಾಧರ ಪೂಜಾರಿ, ಜನಾರ್ದನ ಚೆಂಡ್ತಿಮಾರ್, ಮೀನಾಕ್ಷಿ ಗೌಡ, ರೇಖಾ ಪೈ ಹಾಜರಾಗಿದ್ದರೆ, 1ನೇ ವಾರ್ಡ್ ಸದಸ್ಯ ವಾಸು ಪೂಜಾರಿ ಸಭೆಗೆ ಗೈರಾಗಿದ್ದರು.
ಪುರಸಭೆಯ ಪ್ರತೀ ವಾರ್ಡಿನ ಟಾಸ್ಕ್ ಫೋರ್ಸ್ ಸಮಿತಿಗೆ ಆಯಾ ವಾರ್ಡಿನ ಚುನಾಯಿತ ಸದಸ್ಯರುಗಳೇ ಅಧ್ಯಕ್ಷರಾಗಿದ್ದು, ಅಧಿಕಾರಿಗಳು ಅವರಿಗೆ ಎಲ್ಲಾ ಬೆಳವಣಿಗೆಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತಾ ಕೊರೋನಾ ನಿಗ್ರಹಿಸುವಲ್ಲಿ ಒಟ್ಟಾಗಿ ಕಾರ್ಯನಿರ್ವಹಿಸಬೇಕು ಎಂದು ಶಾಸಕ ನಾಯಕ್ ಹಿತವಚನಗೈದರು.
ಸಭೆಯಲ್ಲಿ ಪುರಸಭಾಧ್ಯಕ್ಷ ಮುಹಮ್ಮದ್ ಶರೀಫ್ ಶಾಂತಿಅಂಗಡಿ, ಉಪಾಧ್ಯಕ್ಷೆ ಜೆಸಿಂತಾ ಡಿ’ಸೋಜ, ಬುಡಾ ಅಧ್ಯಕ್ಷ ದೇವದಾಸ ಶೆಟ್ಟಿ, ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ, ತಾಲೂಕು ತಹಶೀಲ್ದಾರ್ ರಶ್ಮಿ ಎಸ್ ಆರ್, ತಾಲೂಕು ಆರೋಗ್ಯಾಧಿಕಾರಿ ಡಾ ದೀಪಾ ಪ್ರಭು, ಬಂಟ್ವಾಳ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ ಅಶ್ವಿನಿ, ಸಿಡಿಪಿಒ ಗಾಯತ್ರಿ ಕಂಬಳಿ ಮೊದಲಾದವರು ಭಾಗವಹಿಸಿದ್ದರು.
0 comments:
Post a Comment