ಬೆಂಗಳೂರು, ಮೇ 05, 2021 (ಕರಾವಳಿ ಟೈಮ್ಸ್) : ಬಿಬಿಎಂಪಿ ಬೆಡ್ ಬ್ಲಾಕ್ ದಂಧೆಗೆ ಕೋಮು ಬಣ್ಣ ಬಳಿದು ಸಾಮಾಜಿಕ ಜಾಲತಾಣದಲ್ಲಿ ಟೀಕೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಜಂಟಿ ಆಯುಕ್ತ ಸರ್ಫರಾಜ್ ಖಾನ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಕೊವಿಡ್ ಪೀಡಿತರಿಗೆ ಬೆಡ್ ಹಂಚುವ ಬಿಬಿಎಂಪಿ ವಾರ್ ರೂಮಿನಲ್ಲಿ ನಡೆದಿದೆ ಎನ್ನಲಾದ ಹಗರಣದ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ನನ್ನ ಹೆಸರನ್ನು ಸೇರಿಸಿಕೊಂಡ ಒಂದು ಸಂದೇಶ ಓಡಾಡುತ್ತಿರುವುದು ನನಗೆ ಅಪಾರವಾದ ನೋವು ತಂದಿದೆ ಎಂದವರು ಬಹಿರಂಗ ಪತ್ರ ಬರೆದ್ದಾರೆ.
ಕೋವಿಡ್ ಪೀಡಿತರಿಗೆ ಬೆಡ್ ಹಂಚುವ ಬಿವಿಎಂಪಿ ವಾರ್ ರೂಮಿನಲ್ಲಿ ನಡೆದಿದೆ ಎನ್ನಲಾದ ಹಗರಣದ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ನನ್ನ ಹೆಸರನ್ನು ಸೇರಿಸಿಕೊಂಡ ಒಂದು ಸಂದೇಶ ಓಡಾಡುತ್ತಿರುವುದು ನನಗೆ ಅಪಾರವಾದ ನೋವು ತಂದಿದೆ. ವಾರ್ ರೂಮಿನಲ್ಲಿ ನನ್ನ ಯಾವುದೇ ಪಾತ್ರವಿಲ್ಲ ಮಾತ್ರವಲ್ಲ ಅಲ್ಲಿ ಯಾವುದೇ ವೈದ್ಯರೂ ನನಗೆ ಗೊತ್ತಿಲ್ಲ. ಹೀಗಿದ್ದರೂ ನನ್ನನ್ನೂ ಆರೋಪಿಯನ್ನಾಗಿಸಿರುವುದು ನನಗೆ ಆಘಾತ ತಂದಿದೆ. ವಾರ್ ರೂಮನ್ನು ನಡೆಸುತ್ತಿರುವುದು ವಿಶೇಷ ಆರೋಗ್ಯ ಆಯುಕ್ತರು. ನನ್ನ ಕಾರ್ಯವೇನಿದ್ದರೂ ಬಿಬಿಎಂಪಿ ಕೋವಿಡ್ ಕೇರ್ ಸೆಂಟರ್‍ಗಳ ಉಸ್ತುವಾರಿ ಮತ್ತು ಘನ ತ್ಯಾಜ್ಯ ಇಲಾಖೆಯ ನಿರ್ವಹಣೆ. ವಾರ್ ರೂಮ್‍ಗೆ ಬೇಕಾದ ವೈದ್ಯರು ಅಥವಾ ಸಿಬ್ಬಂದಿಯ ನೇಮಕ ಮಾಡಿಕೊಳ್ಳುವ ಕೆಲಸ ಆರೋಗ್ಯ ಇಲಾಖೆಯ ಮತ್ತು ಆಯಾ ಬಿಬಿಎಂಪಿ ವಲಯಗಳ ಕೆಲಸವಾಗಿದೆ. ಇದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ.
ಈ ವಿಷಯಕ್ಕೆ ಕೋಮು ಬಣ್ಣ ಹಚ್ಚಿರುವುದು ಮತ್ತು ಅದರಲ್ಲಿ ಆ ಇಲಾಖೆಗೆ ಯಾವ ರೀತಿಯಲ್ಲಿಯೂ ಸಂಬಂಧವೇ ಇರದ ನನ್ನ ಹೆಸರು ಸೇರಿಸಿರುವುದು ನನಗೆ ನಿಜಕ್ಕೂ ನೋವು ತಂದಿದೆ. ಎಲ್ಲಾ ಕೊವಿಡ್ ಕೇರ್ ಕೇಂದ್ರಗಳಿಗೆ ಆಕ್ಸಿಜನ್, ಆಕ್ಸಿಜನ್ ಕಾನ್ಸಂಟ್ರೇಟರುಗಳನ್ನು ವ್ಯವಸ್ಥೆ ಮಾಡಿ ಅಮೂಲ್ಯ ಜೀವಗಳನ್ನು ಉಳಿಸಲು ನಾನು ಹಗಲು ರಾತ್ರಿ ಎನ್ನದೇ ಕೆಲಸ ಮಾಡುತ್ತಿದ್ದೇನೆ.
ಹಜ್ ಭವನವನ್ನು 140 ಬೆಡ್ ವ್ಯವಸ್ಥೆಯುಳ್ಳ ಆಕ್ಸಿಜನ್ ಸೌಲಭ್ಯವುಳ್ಳ ಕೊವಿಡ್ ಕೇರ್ ಕೇಂದ್ರವಾಗಿ ನಾನು ಪರಿವರ್ತಿಸಿದ್ದೇನೆ. ಅಷ್ಟಲ್ಲದೇ ಹಜ್ ಕಮಿಟಿ ನಿಧಿಯಿಂದಲೇ 50 ಐಸಿಯುಗಳನ್ನು ಇಲ್ಲಿ ಹಾಕಿಸಿದ್ದೇನೆ. ನಾನು ಹೇಳಬಯಸುವುದೇನೆಂದರೆ ಈ ಹಜ್ ಭವನದಲ್ಲಿ ಸೇರಿಸಿಕೊಂಡು ಆರೈಕೆ ಮಾಡುತ್ತಿರುವ ಕೋವಿಡ್ ರೋಗಿಗಳಲ್ಲಿ 90% ರೋಗಿಗಳು ಇತರೆ ಧರ್ಮದ ನನ್ನ ಸಹೋದರರಾಗಿದ್ದಾರೆ, ಕೇವಲ 10% ರೋಗಿಗಳು ಮಾತ್ರ ಮುಸ್ಲಿಮರಾಗಿದ್ದಾರೆ.
ನಾನು ನಂಬಿಕೊಂಡು ಬಂದ ಮತ್ತು ಈಗಲೂ ನಂಬಿರುವ ತತ್ವ ಏನೆಂದರೆ ಅಲ್ಲಾಹ್ ಇರಲಿ, ಈಶ್ವರನಿರಲಿ, ಜೀಸಸ್ ಇರಲಿ ದೇವರೆಂಬುವನು ಎಲ್ಲರಿಗೂ ಒಬ್ಬನೇ. ನಾಮ ಹಲವು. ಮತ್ತು ನಾವೆಲ್ಲರೂ ಅವನ ಮಕ್ಕಳು. ಕಳೆದ ವರ್ಷ ನಾನು ಬಡವರಿಗೆ ಮತ್ತು ಅಗತ್ಯವಿರುವ ಜನರಿಗೆ ಆಹಾರದ ಕಿಟ್‍ಗಳನ್ನು ಒದಗಿಸಲು ಕೆಲಸ ಮಾಡಿದ್ದೆ. ಆಗ ಅವರೆಲ್ಲಾ ಯಾವ ಧರ್ಮದವರು ಯಾವ ಪ್ರದೇಶದವರು ಎಂದು ನಾನು ನೋಡಲಿಲ್ಲ. ಸಾವಿರಾರು ವಲಸೆ ಕಾರ್ಮಿಕರೊಂದಿಗೆ ನಿಂತು ಅವರಿಗೆ ಅಗತ್ಯ ಆಹಾರ ನೀಡಿ ಧೈರ್ಯ ಹೇಳುವ ಕೆಲಸ ಮಾಡಿದೆ. ಅವರಿಗೆ ತಂತಮ್ಮ ಊರುಗಳಿಗೆ ತಲುಪುವಂತೆ ರೈಲು ಪ್ರಯಾಣ ಮಾಡಲು ಸಹಕರಿಸಿದೆ. ಇದೆಲ್ಲಾ ಮಾಡುವಾಗಲೂ ನಾನು ಅವರು ಯಾವ ಧರ್ಮದವರು ಎಂದಾಗಲೀ ಯಾವ ಊರೆಂದಾಲೀ ನೋಡಲಿಲ್ಲ. ನನ್ನ ದೃಷ್ಟಿಯಲ್ಲಿ ಅವರೆಲ್ಲರೂ ಬಹಳ ಕಷ್ಟದಲ್ಲಿರುವ ನನ್ನ ಸಹೋದರ ಸಹೋದರಿಯರಾಗಿದ್ದರು. ಅವರು ಆದಷ್ಟು ಬೇಗ ತಮ್ಮ ಊರುಗಳಿಗೆ ಮರಳಿ ತಮ್ಮ ಪ್ರೀತಿಪಾತ್ರರನ್ನು ಸೇರಿಕೊಳ್ಳಲಿ ಎನ್ನುವುದಷ್ಟೇ ನನ್ನ ಕಾಳಜಿಯಾಗಿತ್ತು. ಇದರ ಪರಿಣಾಮವಾಗಿ ನನ್ನ ಇಡೀ ಕುಟುಂಬದವರಿಗೆ ನನ್ನಿಂದಾಗಿ ಕೊವಿಡ್ ಸೋಂಕು ತಗುಲಿತ್ತು.
ನಾನೂ ಸಹ ನಿಮ್ಮಲ್ಲಿ ಒಬ್ಬನಾಗಿರುವುದಕ್ಕೆ ಮತ್ತು ಯಾರೋ ಹೊರಗಿನ ವ್ಯಕ್ತಿ ಅಲ್ಲ ಎನ್ನುವುದಕ್ಕೆ ಇಷ್ಟು ಸಾಕ್ಷಿ ಸಾಲದೆ? ಯಾವತ್ತಿಗೂ ನನ್ನ ಬದ್ಧತೆ ನನ್ನ ದೇಶ, ನನ್ನ ಸರಕಾರ ಮತ್ತು ಈ ದೇಶದ ಸಂವಿಧಾನಕ್ಕೆ. ಕೆಲವು ಜನರ ಅಜ್ಞಾನ ಮತ್ತು ಮೂರ್ಖತನ ನಿಜಕ್ಕೂ ನನಗೆ ನೋವುಂಟುಮಾಡಿದೆ. ಇದರ ಕುರಿತು ಕಾನೂನು ಪ್ರಕಾರ ತನಿಖೆ ನಡೆದು, ಇಂತಹ ಕಷ್ಟದ ಸಮಯದಲ್ಲಿ ಸಹ ವಿಷವನ್ನು ಹರಡುತ್ತಿರುವವರ ಮೇಲೆ ಕ್ರಮ ಜರುಗಿಸಲಿ ಎಂದು ಆಶಿಸುತ್ತೇನೆ ಎಂದವರು ಪತ್ರ ಬರೆದುಕೊಂಡಿದ್ದಾರೆ.
0 comments:
Post a Comment