ಬೆಂಗಳೂರು, ಎಪ್ರಿಲ್ 27, 2021 (ಕರಾವಳಿ ಟೈಮ್ಸ್) : ವಿದ್ಯಾರ್ಥಿಗಳ, ಪೋಷಕರ ಆಕ್ರೋಶ ಹಾಗೂ ಮಾಧ್ಯಮ ವರದಿಗಳ ಪರಿಣಾಮವಾಗಿ ಕೊನೆಗೂ ಉನ್ನತ ಶಿಕ್ಷಣ ಇಲಾಖೆ ಎಚ್ಚೆತ್ತುಕೊಂಡು ತನ್ನ ಹಠಮಾರಿ ಧೋರಣೆಯಿಂದ ಹಿಂದಕ್ಕೆ ಸರಿದಿದ್ದು, ಪರಿಣಾಮ ಎಪ್ರಿಲ್ 27 ರಿಂದ ಆರಂಭಗೊಳ್ಳಬೇಕಿದ್ದ ಇಂಜಿನಿಯರ್ ಹಾಗೂ ಡಿಪ್ಲೊಮಾ ಪರೀಕ್ಷೆಗಳನ್ನು ಮುಂದೂಡಿ ವಿಟಿಯು ಆದೇಶ ಹೊರಡಿಸಿದೆ.
ಎಪ್ರಿಲ್ 27 ರ ರಾತ್ರಿ 9 ಗಂಟೆಯಿಂದ ಮುಂದಿನ 14 ದಿನ ರಾಜ್ಯಾದ್ಯಂತ ಕೊರೊನಾ ಕರ್ಫ್ಯೂ ವಿಧಿಸಿ ರಾಜ್ಯ ಸರಕಾರ ಸೋಮವಾರ ಆದೇಶ ಹೊರಡಿಸಿದ ಹಿನ್ನಲೆಯಲ್ಲಿ ವಿಟಿಯು ಈ ಕ್ರಮ ಕೈಗೊಂಡಿದೆ.
ಈ ಬಗ್ಗೆ ಪ್ರತಿಕ್ರಯಿಸಿರುವ ರಾಜ್ಯದ ಉಪ ಮುಖ್ಯಮಂತ್ರಿಯೂ ಆಗಿರುವ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು, ಎಂಜಿನಿಯರಿಂಗ್, ಪಾಲಿಟೆಕ್ನಿಕ್‍ನ ಎಲ್ಲ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಕೊರೋನಾ ದ್ವಿತೀಯ ಅಲೆ ಜೋರಾಗಿರುವ ಮಧ್ಯೆ ಜನರ ಹಿತಕ್ಕಾಗಿ ಈಗಾಗಲೆ ಮುಖ್ಯಮಂತ್ರಿಗಳು ಪೂರ್ಣ ಕರ್ಫ್ಯೂ ಜಾರಿಗೊಳಿಸಿದ್ದಾರೆ. ಈ ಹಿನ್ನಲೆಯಲ್ಲಿ ವಿದ್ಯಾರ್ಥಿಗಳ ಕ್ಷೇಮಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.
ಪರೀಕ್ಷೆಗಳು ಮುಂದಿನ ದಿನಗಳಲ್ಲಿ ನಡೆಯುವ ಬಗ್ಗೆ ದಿನಾಂಕವನ್ನು ಕರ್ಫ್ಯೂ ಮುಕ್ತಾಯಗೊಂಡ ಬಳಿಕ ಘೋಷಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಕೊರೊನಾ ವ್ಯಾಪಕತೆ ಹಿನ್ನಲೆಯಲ್ಲಿ ಈಗಾಗಲೇ ಸಿಬಿಎಸ್ ಇ ಹತ್ತನೇ ತರಗತಿ ಪರೀಕ್ಷೆ ರದ್ದುಗೊಳಿಸಿ, ಹನ್ನೆರಡನೇ ತರಗತಿ ಪರೀಕ್ಷೆ ಮುಂದೂಡಿದೆ. ಅದೇ ರೀತಿ ರಾಜ್ಯದ ವಿವಿಧ ವಿವಿ ಗಳು ಕೂಡಾ ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ಪರೀಕ್ಷೆ ಮುಂದೂಡಿ ಆದೇಶಿಸಿದೆ. ಆದರೆ ವಿಟಿಯು ಮಾತ್ರ ಯಾವುದೇ ಕಾರಣಕ್ಕೂ ಪರೀಕ್ಷೆ ಮುಂದೂಡಲ್ಲ. ಹಾಜರಾಗದ ವಿದ್ಯಾರ್ಥಿಗಳಿಗೆ ಮುಂದಿನ ಫಸ್ಟ್ ಎಟೆಂಪ್ಟ್ ಅವಕಾಶ ನೀಡಲಾಗುವುದು ಎಂಬ ಗೊಂದಲದ ಸೂಚನೆ ನೀಡಿ ಹಠಮಾರಿ ಧೊರಣೆ ತಳೆದಿತ್ತು. ಈ ಬಗ್ಗೆ ವಿದ್ಯಾರ್ಥಿಗಳು ಹಾಗೂ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಮಾಧ್ಯಮಗಳ ಗಮನವನ್ನೂ ಸೆಳೆದಿದ್ದರು. ಈ ಬಗ್ಗೆ ಕರಾವಳಿ ಟೈಮ್ಸ್ ಕೂಡಾ ಸರಣಿ ವರದಿ ಪ್ರಕಟಿಸಿ ಸರಕಾರದ ಗಮನ ಸೆಳೆಯುವ ಪ್ರಯತ್ನ ನಡೆಸಿತ್ತು.
ಇದೀಗ ಕೊನೆಗೂ ಎಚ್ಚೆತ್ತುಕೊಂಡಿರುವ ವಿಟಿಯು ಹಾಗೂ ಸರಕಾರ ಮಂಗಳವಾರದಿಂದ ಆರಂಭವಾಗಲಿದ್ದ ಇಂಜಿನಿಯರಿಂಗ್ ಹಾಗೂ ಡಿಪ್ಲೊಮಾ ಪರೀಕ್ಷೆಗಳನ್ನು ಮುಂದೂಡಿ ಆದೇಶ ಹೊರಡಿಸಿದೆ.
0 comments:
Post a Comment