ಬೆಂಗಳೂರು, ಎಪ್ರಿಲ್ 20, 2021 (ಕರಾವಳಿ ಟೈಮ್ಸ್) : ಕೊರೋನಾ ಎರಡನೇ ಅಲೆ ಜೋರಾಗಿರುವ ಹಿನ್ನಲೆಯಲ್ಲಿ ಎಪ್ರಿಲ್ 21 ರಿಂದ ರಾಜ್ಯಾದ್ಯಂತ ವಾರಾಂತ್ಯ ಕಫ್ರ್ಯೂ ಹಾಗೂ ರಾತ್ರಿ ಕಫ್ರ್ಯೂ ವಿಧಿಸಿ ರಾಜ್ಯ ಸರಕಾರ ನೂತನ ಮಾರ್ಗಸೂಚಿ ಹೊರಡಿಸಿರುವ ಹೊರತಾಗಿಯೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ (ವಿಟಿಯು) ಪರೀಕ್ಷೆ ನಡೆಸಲು ಸರಕಾರ ಗ್ರೀನ್ ಸಿಗ್ನಲ್ ನೀಡಿದ್ದು ಇದೀಗ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಮಂಗಳವಾರ ರಾಜ್ಯಪಾಲರ ನೇತೃತ್ವದಲ್ಲಿ ನಡೆದ ಸರ್ವ ಪಕ್ಷ ಸಭೆಯ ಬಳಿಕ ಕಠಿಣ ನಿಯಮದ ಹೊಸ ಮಾರ್ಗಸೂಚಿ ಹೊರಡಿಸಲಾಗಿದ್ದು, ಈ ಆದೇಶ ಮೇ 4 ರವರೆಗೆ ಜಾರಿಯಲ್ಲಿರಲಿದೆ. ಈ ಅವಧಿಯಲ್ಲಿ ಶಾಲಾ-ಕಾಲೇಜುಗಳನ್ನು ಸಂಪೂರ್ಣವಾಗಿ ಬಂದ್ ಮಾಡಲು ಆದೇಶ ನೀಡಲಾಗಿದೆ. ಆದಾಗ್ಯೂ ಎಪ್ರಿಲ್ 19 ರಿಂದ ಆರಂಭವಾಗುವ ವಿಟಿಯು ಪರೀಕ್ಷೆ ನಡೆಸಲು ಸರಕಾರ ಅನುಮತಿ ನೀಡಿರುವುದು ಚರ್ಚೆಗೆ ಕಾರಣವಾಗಿದೆ.
ಎಪ್ರಿಲ್ 19 ರಿಂದ ವಿಟಿಯು ಪರೀಕ್ಷೆ ಆರಂಭವಾಗಲಿದ್ದು, ಶನಿವಾರ ಹಾಗೂ ಭಾನುವಾರ ಹೊರತುಪಡಿಸಿ ಉಳಿದ ದಿನಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದು ವಿಟಿಯು ಕುಲಪತಿ ಡಾ ಕರಿಸಿದ್ದಪ್ಪ ತಿಳಿಸಿದ್ದಾರೆ. ಈಗಾಗಲೇ ಕೊರೋನಾ ಆರ್ಭಟ ಹಿನ್ನಲೆಯಲ್ಲಿ ರಾಜ್ಯದ ವಿವಿಧ ವಿವಿಗಳು, ಯುಜಿಸಿ ನೆಟ್ ಹಾಗೂ ಯುಪಿಎಸ್ ಮೊದಲಾದ ಪರೀಕ್ಷೆಗಳನ್ನೂ ಕೂಡಾ ಮುಂದೂಡಲಾಗಿದೆ. ಇದರ ಹೊರತಾಗಿಯೂ ವಿಟಿಯು ಪರೀಕ್ಷೆ ನಡೆಸುವ ದರ್ದು ಇದೆಯೇ ಎಂಬ ಪ್ರಶ್ನೆ ವಿದ್ಯಾರ್ಥಿ ಪೋಷಕರಿಂದ ಕೇಳಿ ಬರುತ್ತಿದೆ.
0 comments:
Post a Comment