ಮಂಗಳೂರು, ಎಪ್ರಿಲ್ 21, 2021 (ಕರಾವಳಿ ಟೈಮ್ಸ್) : ಕೊರೋನಾ ಎರಡನೇ ಅಲೆ ಜೋರಾಗಿರುವ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಎಲ್ಲ ವಿವಿಗಳೂ ಸೇರಿದಂತೆ ಬಹುತೇಕ ಶೈಕ್ಷಣಿಕ ಸಂಸ್ಥೆಗಳು ಪರೀಕ್ಷೆಗಳನ್ನು ಮುಂದೂಡಿದ್ದರೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ (ವಿಟಿಯು) ಪರೀಕ್ಷೆ ನಡೆಸಲು ಉತ್ಸುಕವಾಗಿರುವ ಬಗ್ಗೆ ವಿದ್ಯಾರ್ಥಿ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಬಗ್ಗೆ ಪತ್ರಿಕೆ ಸಮಗ್ರ ವರದಿ ಪ್ರಕಟಿಸಿತ್ತು.
ಇದೀಗ ಪರಿಷ್ಕøತ ಸುತ್ತೋಲೆ ಹೊರಡಿಸಿರುವ ವಿಟಿಯು ಕೊರೋನಾ ಬಾಧಕವಾಗುವ ವಿದ್ಯಾಥಿಗಳಿಗೆ ಪರೀಕ್ಷೆಯಿಂದ ವಿನಾಯಿತಿ ನೀಡಲಾಗಿದೆ ಎಂದು ಹೇಳಿಕೊಂಡಿದೆ. ಇದು ವಿದ್ಯಾರ್ಥಿಗಳ ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಕೊರೋನಾ ಬಾಧಿತವಾಗುವ ವಿದ್ಯಾರ್ಥಿಗಳು ಅಂದರೆ ಅಪಾಯಕಾರಿ ಝೋನ್ ಹಾಗೂ ಪಾಸಿಟಿವ್ ವರದಿ ಬಂದ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುವುದು ಕಡ್ಡಾಯವಲ್ಲ. ಮುಂದಿನ ಸೆಮಿಸ್ಟರ್ ವೇಳೆ ಪರೀಕ್ಷೆ ತೆಗೆದುಕೊಳ್ಳಲು ಅವಕಾಶ ನೀಡಲಾಗುವುದು. ಇದನ್ನು ಮೊದಲ ಪ್ರಯತ್ನ ಎಂದೇ ಪರಿಗಣಿಸಲಾಗುವುದು ಎಂಬ ಗೊಂದಲದ ಸುತ್ತೋಲೆ ಹೊರಡಿಸಿದೆ. ವಿಟಿಯು ಸುತ್ತೋಲೆ ಪ್ರಕಾರ ಇತರ ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಳ್ಳುವುದು ಕಡ್ಡಾಯವಾಗಿದ್ದು, ಇದೊಂದು ವಿದ್ಯಾರ್ಥಿಗಳನ್ನು ವಿಭಜಿಸುವ ಹಾಗೂ ಗೊಂದಲಕ್ಕೆ ದೂಡುವ ಕ್ರಮವಾಗಿದೆ. ಅಲ್ಲದೆ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ಯಾವುದೇ ಕಾಳಜಿ ಹೊಂದಿಲ್ಲದ ವಿಟಿಯು ತಕ್ಷಣ ಪರೀಕ್ಷಾ ಸುತ್ತೋಲೆಯನ್ನು ಮರು ಪರಿಶೀಲನೆ ನಡೆಸಿ ಎಲ್ಲಾ ವಿದ್ಯಾರ್ಥಿಗಳಿಗೂ ಅನುಕೂಲವಾಗುವಂತೆ ಪರೀಕ್ಷೆಗಳನ್ನು ಮುಂದೂಡಿ ಸರಕಾರದ ಕಠಿಣ ನಿಯಮಕ್ಕೆ ಬದ್ದತೆ ಪ್ರದರ್ಶಿಸುವುದರ ಜೊತೆಗೆ ವಿದ್ಯಾರ್ಥಿ ಸ್ನೇಹಿಯಾಗಿಯೂ ನಡೆದುಕೊಳ್ಳುವಂತೆ ನಗರದ ಶ್ರೀನಿವಾಸ್, ಸೈಂಟ್ ಜೋಸೆಫ್, ಪಿ.ಎ., ಬ್ಯಾರೀಸ್, ಯೆನಪೋಯ, ಸಹ್ಯಾದ್ರಿ ಮೊದಲಾದ ಖಾಸಗಿ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಪೋಷಕರು ಆಗ್ರಹಿಸಿದ್ದಾರೆ.
ಈಗಾಗಲೇ ನಗರದ ಹಲವು ಕಾಲೇಜುಗಳಲ್ಲಿರುವ ಕೇರಳ ಮೂಲದ ಹಾಗೂ ಸ್ಥಳೀಯ ವಿದ್ಯಾರ್ಥಿಗಳಿಗೆ ಕೊರೋನಾ ಪಾಸಿಟಿವ್ ವರದಿ ಬಂದಿರುವ ಹಿನ್ನಲೆಯಲ್ಲಿ ಫಿಸಿಕಲ್ ತರಗತಿಗಳನ್ನು ಬಂದ್ ಮಾಡಲಾಗಿದೆ. ಹಾಗೂ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ವಿಶೇಷ ಕಾಳಜಿ ವಹಿಸುವಂತೆ ಕಾಲೇಜು ಆಡಳಿತ ಮಂಡಳಿಗೆ ಆರೋಗ್ಯ ಇಲಾಖೆ ಸೂಚನೆಯನ್ನೂ ನೀಡಿದೆ. ಈ ನಿಟ್ಟಿನಲ್ಲಿ ಈ ಒಂದು ಸಂಧಿಗ್ಧ ಸಮಯದಲ್ಲಿ ಪರೀಕ್ಷೆ ನಡೆಸುವ ಸಾಹಸಕ್ಕೆ ವಿಟಿಯು ಕೈ ಹಾಕದೆ ಪರೀಕ್ಷೆ ಮುಂದೂಡಿ ವಿದ್ಯಾರ್ಥಿಗಳ ಹಿತಕ್ಕೆ ಪೂರಕವಾಗಿ ಕ್ರಮ ಕೈಗೊಳ್ಳಬೇಕು ಎಂದು ವಿದ್ಯಾರ್ಥಿ ಸಮೂಹ ಆಗ್ರಹಿಸಿದೆ.
ಎಪ್ರಿಲ್ 19 ರಿಂದ ವಿಟಿಯು ಪರೀಕ್ಷೆ ಆರಂಭವಾಗಿದ್ದು, ಶನಿವಾರ ಹಾಗೂ ಭಾನುವಾರ ಹೊರತುಪಡಿಸಿ ಉಳಿದ ದಿನಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದು ವಿಟಿಯು ಕುಲಪತಿ ಡಾ ಕರಿಸಿದ್ದಪ್ಪ ತಿಳಿಸಿದ್ದರು. ಈ ಬಗ್ಗೆ ವಿದ್ಯಾರ್ಥಿಗಳು ಹಾಗೂ ಪೋಷಕರ ಆಕ್ರೋಶದ ಹಿನ್ನಲೆಯಲ್ಲಿ ಆದೇಶ ಪರಿಶೀಲಿಸಿ ಕೋವಿಡ್ ಬಾಧಕ ಇರುವ ವಿದ್ಯಾರ್ಥಿಗಳು ಪರೀಕ್ಷೆಯಿಂದ ವಿನಾಯಿತಿ ಪಡೆದುಕೊಳ್ಳಬಹುದು ಎಂಬ ಪರಿಷ್ಕøತ ಸುತ್ತೋಲೆ ಹೊರಡಿಸಿದೆ. ಇದೀಗ ಪರಿಷ್ಕøತ ಸುತ್ತೋಲೆಯನ್ನೂ ರದ್ದುಗೊಳಿಸಿ ಪರೀಕ್ಷೆ ಮುಂದೂಡುವಂತೆ ವಿದ್ಯಾರ್ಥಿಗಳು ಹಾಗೂ ಪೋಷಕರು ಆಗ್ರಹಿಸಿದ್ದಾರೆ.
0 comments:
Post a Comment