ಉಪ್ಪಿನಂಗಡಿ, ಎಪ್ರಿಲ್ 05, 2021 (ಕರಾವಳಿ ಟೈಮ್ಸ್) : ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ಶಿರಾಡಿ ಗ್ರಾಮದ, ಉದನೆ ಬಳಿ ಸೋಮವಾರ ಮುಂಜಾನೆ ಈಚರ್ ಹಾಗೂ ಟಾಟಾ ಏಸ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಮೂಲತಃ ಬಂಟ್ವಾಳ ತಾಲೂಕಿನ ನಂದಾವರ ನಿವಾಸಿ, ಪ್ರಸ್ತುತ ಕುಕ್ಕಾಜೆಯಲ್ಲಿ ವಾಸವಾಗಿರುವ ಹನೀಫ್ (52) ಅವರು ಮೃತಪಟ್ಟಿದ್ದು, ಪಾಣೆಮಂಗಳೂರು ನೆಹರುನಗರ ನಿವಾಸಿಗಳಾದ ಕರೀಂ ಹಾಗೂ ರಫೀಕ್ ಎಂಬವರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕರೀಂ ಅವರ ಪಾಲುದಾರಿಕೆಯ ಪಿ.ಎಸ್ ಬೀಡಿಗಳನ್ನು ಹೇರಿಕೊಂಡು ಬೀಡಿ ಲೈನಿಗೆ ತೆರಳುತ್ತಿದ್ದ ಟಾಟಾ ಏಸ್ ವಾಹನಕ್ಕೆ ವಿರುದ್ದ ದಿಕ್ಕಿನಲ್ಲಿ ಬಂದ ಎಳನೀರು ಸಾಗಾಟದ ಈಚರ್ ವಾಹನ ಡಿಕ್ಕಿಯಾಗಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಅಪಘಾತದ ತೀವ್ರತೆಗೆ ಟಾಟಾ ಏಸ್ ವಾಹನದ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು, ಚಾಲಕ ಹನೀಫ್ ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಅದೇ ವಾಹನದಲ್ಲಿದ್ದ ಇನ್ನಿಬ್ಬರು ಪ್ರಯಾಣಿಕರಾದ ಕರೀಂ ಹಾಗೂ ರಫೀಕ್ ಅವರು ಗಂಭೀರ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
0 comments:
Post a Comment