ಬೆಂಗಳೂರು, ಎಪ್ರಿಲ್ 26, 2021 (ಕರಾವಳಿ ಟೈಮ್ಸ್) : ಕರ್ನಾಟಕದಲ್ಲಿ ಕೊರೊನಾ ಸೋಂಕಿನ ರೌದ್ರಾವತರಾಕ್ಕಿಂತಲೂ ಆಕ್ಸಿಜನ್ ಕೊರತೆ ಬಗ್ಗೆ ಜನ ಹೆಚ್ಚು ಆತಂಕಿರಾಗಿದ್ದರೂ ರಾಜ್ಯ ಸರಕಾರ ಮಾತ್ರ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುವ ಮೂಲಕ ಜನರಲ್ಲಿ ಭ್ರಮೆ ಮೂಡಿಸುವ ಪ್ರಯತ್ನ ನಡೆಸುತ್ತಿದೆ. ರಾಜ್ಯ ಸರಕಾರ ಜನಪ್ರತಿನಿಧಿಗಳಿಗೂ ರಾಜ್ಯದ ಪರಿಸ್ಥಿತಿ ಬಗ್ಗೆ ಸಮರ್ಪಕ ಮಾಹಿತಿ ನೀಡುತ್ತಿಲ್ಲ. ವಿರೋಧ ಪಕ್ಷಗಳಿಗೆ ಬೆಲೆ ನೀಡದಿದ್ದರೂ ಪರವಾಗಿಲ್ಲ. ಜನರ ಹಿತವನ್ನಾದರೂ ಗಮನದಲ್ಲಿಟ್ಟುಕೊಂಡು ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ಪಡೆದು ಸಮರ್ಪಕ ಮಾಹಿತಿಯನ್ನು ಸರಕಾರ ಹಂಚಿಕೊಳ್ಳಬೇಕು ಎಂದು ಮಂಗಳೂರು ಶಾಸಕ, ಮಾಜಿ ಆರೋಗ್ಯ ಸಚಿವ ಯು ಟಿ ಖಾದರ್ ಆಗ್ರಹಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿಕೊಂಡಿರುವ ಖಾದರ್ ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಹೆಚ್ಚಾಗುತ್ತಿದ್ದು, ವೈದ್ಯಕೀಯ ಸೌಲಭ್ಯದ ಕೊರತೆ ದಿನೇ ದಿನೇ ಹೆಚ್ಚಾಗುತ್ತಿದೆ. ಆದರೂ ಬಿಜೆಪಿ ಸರಕಾರ ಮಾತ್ರ ‘ಆಲ್ ಇಸ್ ವೆಲ್’ ಎಂಬ ಭ್ರಮಾ ಲೋಕ ಮೂಡಿಸುತ್ತಿದೆ ಎಂದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯದ ಜನರನ್ನು ಕತ್ತಲಲ್ಲಿಟ್ಟು ಪದೇ ಪದೇ ಆದೇಶ ಮಾಡುವ ಸರಕಾರ, ಕನಿಷ್ಠ ಶಾಸಕರಿಗಾದರೂ ಆಕ್ಸಿಜನ್ ಸೇರಿದಂತೆ ವ್ಯವಸ್ಥೆ ಹಾಗೂ ಲಭ್ಯತೆಯ ಮಾಹಿತಿ ನೀಡಲಿ ಎಂದು ಸಲಹೆ ನೀಡಿದ್ದಾರೆ.
0 comments:
Post a Comment