ಬೆಂಗಳೂರು, ಎಪ್ರಿಲ್ 05, 2021 (ಕರಾವಳಿ ಟೈಮ್ಸ್) : ರಾಜ್ಯಾದ್ಯಂತ ಪರವಾನಿಗೆ ಭೂಮಾಪಕರು ಕೆಲವೊಂದು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕಳೆದ ಕೆಲ ದಿನಗಳಿಂದ ಮುಷ್ಕರ ಕೈಗೊಂಡಿದ್ದು, ಪರಿಣಾಮವಾಗಿ ಸರ್ವೆ ಕಾರ್ಯ ಸ್ಥಗಿತಗೊಂಡಿದೆ. ಇದು ಭೂಮಿ ಅಳತೆಗೆ ಸಂಬಂಧಿಸಿದಂತೆ ಸಾರ್ವಜನಿಕರನ್ನು ತೊಂದರೆಗೀಡುಮಾಡಿದೆ.
ಬಹಸಂಖ್ಯೆಯಲ್ಲಿರುವ ಪರವಾನಿಗೆ ಭೂಮಾಪಕರ ಮುಷ್ಕರದಿಂದಾಗಿ ಕೇವಲ ಸಂಖ್ಯೆಯಲ್ಲಿರುವ ಸರಕಾರಿ ಸರ್ವೆಯರ್‍ಗಳಿಂದ ಹಲವಾರು ಸಂಖ್ಯೆಯಲ್ಲಿರುವ ಸರ್ವೆ ಕಡತಗಳನ್ನು ನಿಗದಿತ ಸಮಯದಲ್ಲಿ ವಿಲೇವಾರಿ ಮಾಡಲಾಗದೆ ಇರುವುದರಿಂದ ಸಾರ್ವಜನಿಕರು ಭೂಮಿ ಸರ್ವೆಗೆ ಸಂಬಂಧಿಸಿದಂತೆ ತೀವ್ರ ಸಮಸ್ಯೆ ಎದುರಿಸುವಂತಾಗಿದೆ.
ಪರವಾನಿಗೆ ಭೂಮಾಪಕರು ತಮ್ಮನ್ನು ಖಾಯಂಗೊಳಿಸುವಂತೆ ಹಾಗೂ ಒಂದು ಜಾಗದಿಂದ ಇನ್ನೊಂದು ಸ್ಥಳಕ್ಕೆ ಪದೇ ಪದೇ ವರ್ಗಾವಣೆ ಮಾಡುವುದನ್ನು ನಿಲ್ಲಿಸುವಂತೆ ಇವೇ ಮೊದಲಾದ ಬೇಡಿಕೆಗಳ ಈಡೇರಿಕೆಗೆ ಸರಕಾರಕ್ಕೆ ಆಗ್ರಹಿಸಿ ಕಳೆದ ಕೆಲ ದಿನಗಳಿಂದ ಮುಷ್ಕರ ಕೈಗೊಂಡ ಪರಿಣಾಮ ಇದೀಗ ಪ್ರತಿ ತಾಲೂಕುಗಳಲ್ಲೂ ಸರ್ವೆ ಕಾರ್ಯ ಭಾಗಶಃ ಸ್ಥಗಿತಗೊಂಡಂತಾಗಿದೆ.
ಈ ಹಿಂದೆಯೂ ಕೆಲ ವರ್ಷಗಳ ಹಿಂದೆ ಇದೇ ಪರವಾನಿಗೆ ಭೂಮಾಪಕರು ಹಲವು ದಿನಗಳ ಕಾಲ ನಿರಂತರ ಮುಷ್ಕರ ಕೈಗೊಂಡಿದ್ದರು. ಆ ಸಂದರ್ಭದಲ್ಲೂ ಭೂಮಿ ಸರ್ವೆ ಕಾರ್ಯಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರು ತೀವ್ರ ಸಮಸ್ಯೆ ಎದುರಿಸಿದ್ದರು. ಬಳಿಕ ಸರಕಾರ ಇವರ ಕೆಲ ಬೇಡಿಕೆಗಳನ್ನು ಈಡೇರಿಸಿದ ಪರಿಣಾಮ ಅವರು ಮತ್ತೆ ಕೆಲಸಕ್ಕೆ ಬಂದಿದ್ದರು. ಇದೀಗ ಮತ್ತೆ ಪರವಾನಿಗೆ ಭೂಮಾಪಕರ ಮುಷ್ಕರದಿಂದಾಗಿ ಸಾರ್ವಜನಿಕರು ಮತ್ತೊಮ್ಮೆ ಸಮಸ್ಯೆ ಎದುರಿಸುತ್ತಿರುವ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ತಕ್ಷಣ ಸರಕಾರ ಮಧ್ಯ ಪ್ರವೇಶಿಸಿ ಒಂದೋ ಇಂತಹ ಪರವಾನಿಗೆ ಸರ್ವೆಯರ್ ಗಳ ಬೇಡಿಕೆಗಳನ್ನು ಈಡೇರಿಸಿ ಕೆಲಸಕ್ಕೆ ಹಾಜರಾಗುವಂತೆ ಕ್ರಮ ಕೈಗೊಳ್ಳಬೇಕು ಅಥವಾ ಈ ಎಲ್ಲಾ ಪರವಾನಿಗೆ ಭೂಮಾಪಕರ ವಿರುದ್ದ ಸೂಕ್ತ ಕ್ರಮ ಕೈಗೊಂಡು ಸಾರ್ವಜನಿಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
0 comments:
Post a Comment