ಮತ್ತೆ ಮುಸ್ಲಿಂ ಉಮ್ಮತ್ತನ್ನು ಸ್ವಾಗತಿಸಿದ ಪವಿತ್ರ ರಮಳಾನ್ : ಕೈಗೊಳ್ಳುವ ಪ್ರತಿಯೊಂದು ಸತ್ಕರ್ಮಗಳೂ ಲೋಕ ಪ್ರತಿಷ್ಠೆಯನ್ನು ಬದಿಗೊತ್ತಿ ದೇವಸಂಪ್ರೀತಿಗಾಗಿರಲಿ - Karavali Times ಮತ್ತೆ ಮುಸ್ಲಿಂ ಉಮ್ಮತ್ತನ್ನು ಸ್ವಾಗತಿಸಿದ ಪವಿತ್ರ ರಮಳಾನ್ : ಕೈಗೊಳ್ಳುವ ಪ್ರತಿಯೊಂದು ಸತ್ಕರ್ಮಗಳೂ ಲೋಕ ಪ್ರತಿಷ್ಠೆಯನ್ನು ಬದಿಗೊತ್ತಿ ದೇವಸಂಪ್ರೀತಿಗಾಗಿರಲಿ - Karavali Times

728x90

13 April 2021

ಮತ್ತೆ ಮುಸ್ಲಿಂ ಉಮ್ಮತ್ತನ್ನು ಸ್ವಾಗತಿಸಿದ ಪವಿತ್ರ ರಮಳಾನ್ : ಕೈಗೊಳ್ಳುವ ಪ್ರತಿಯೊಂದು ಸತ್ಕರ್ಮಗಳೂ ಲೋಕ ಪ್ರತಿಷ್ಠೆಯನ್ನು ಬದಿಗೊತ್ತಿ ದೇವಸಂಪ್ರೀತಿಗಾಗಿರಲಿ



ಎಪ್ರಿಲ್ 13, 2021 (ಕರಾವಳಿ ಟೈಮ್ಸ್)


ಪವಿತ್ರ ಇಸ್ಲಾಮಿನ ಕಡ್ಡಾಯ ಕರ್ಮಗಳಲ್ಲೊಂದಾಗಿರುವ ರಂಝಾನ್ ತಿಂಗಳು ಮುಸ್ಲಿಂ ಉಮ್ಮತ್ತನ್ನು ಮತ್ತೆ ಸ್ವಾಗತಿಸಿದೆ. ಉಪವಾಸ ವೃತಾಚರಣೆ ಪ್ರಾರಂಭವಾಗಿದೆ. ಇಸ್ಲಾಮೀ ಕ್ಯಾಲೆಂಡರ್ ಪ್ರಕಾರ 9ನೇ ತಿಂಗಳಾಗಿರುವ ಪವಿತ್ರ ರಂಝಾನ್‍ನಲ್ಲಿ ಉಪವಾಸ ವೃತವನ್ನು ಆಚರಿಸುವುದು ಪ್ರಾಯ ಪೂರ್ತಿಯಾಗಿರುವ, ಬುದ್ದಿ ಇರುವ ಪ್ರತಿಯೊಬ್ಬ ಮುಸಲ್ಮಾನನಿಗೂ ಕಡ್ಡಾಯವಾಗಿದೆ. ಮಾನವ ಸಮುದಾಯದ ಅದರಲ್ಲೂ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಅನುಯಾಯಿಗಳಾದ ನಮಗೆ ಅಲ್ಲಾಹನು ಅನುಗ್ರಹೀತವಾಗಿ ದಯಪಾಲಿಸಿರುವ ಪುಣ್ಯ ಮಾಸವನ್ನು ಅತ್ಯುತ್ತಮ ರೀತಿಯಲ್ಲಿ ವ್ಯಯಿಸುವುದು ವಿಶ್ವಾಸಿಗಳ ಪಾಲಿಗೆ ಪರಮ ಜವಾಬ್ದಾರಿಯಾಗಿದೆ. 

ಪೂರ್ವಿಕ ಪ್ರವಾದಿಗಳ ಅನುಯಾಯಿಗಳು ಈ ಲೋಕದಲ್ಲಿ ಸಾವಿರಾರು ವರ್ಷಗಳ ಕಾಲ ಬಾಳಿ ಬದುಕಿದ್ದು, ಅಷ್ಟೂ ವರ್ಷಗಳಲ್ಲಿ ಅವರು ಸೃಷ್ಟಿಕರ್ತನ ಆರಾಧನೆಯಲ್ಲಿ ತಲ್ಲೀನರಾಗುತ್ತಿದ್ದರು. ಆದರೆ ಅಂತ್ಯ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂರವರ ಅನುಯಾಯಿಗಳಾದ ನಮ್ಮ ಆಯುಷ್ಯವಾದರೋ ಕೇವಲ ಅರುವತ್ತೋ-ಎಪ್ಪತ್ತೋ ವರ್ಷಗಳ ಮಧ್ಯೆ ಇರುವ ಅಲ್ಪಾವಧಿಯಾಗಿದೆ. ಹೀಗಿರುತ್ತಾ ಪೂರ್ವಿಕ ಪ್ರವಾದಿಗಳ ಅನುಯಾಯಿಗಳ ದೀರ್ಘಾಯುಷ್ಯದ ಸತ್ಕರ್ಮಗಳೊಂದಿಗೆ ನಮ್ಮ ಅಲ್ಪಾಯುಷ್ಯದ ಆರಾಧನೆಗಳು ಸಮಾನವಾಗಲು ಅಲ್ಲಾಹನು ನಮಗೆ ಕೆಲವೊಂದು ಪುಣ್ಯವೇರಿದ ತಿಂಗಳು, ದಿವಸಗಳು ಹಾಗೂ ಸಮಯಗಳನ್ನು ನಿಗದಿಪಡಿಸಿದ್ದಾನೆ. ಅಂತಹ ಸಂದರ್ಭಗಳನ್ನು ಸಮರ್ಪಕವಾಗಿ ನಾವು ಬಳಸಿಕೊಂಡಿದ್ದೇ ಆದರೆ ಸಾವಿರಾರು ವರ್ಷಗಳ ಕಾಲ ಬಾಳಿ ಬದುಕಿ ಆರಾಧನಾ ಕರ್ಮಗಳನ್ನು ಕೈಗೊಂಡ ಪೂರ್ವಿಕ ಮಹಾನುಭಾವರ ಸತ್ಕರ್ಮಗಳನ್ನು ಮೀರಿದ ಪ್ರತಿಫಲವನ್ನು ಪಡೆಯುವ ಸದಾವಕಾಶ ನಮ್ಮ ಮುಂದಿದೆ. ಅವುಗಳಲ್ಲಿ ಪ್ರಮುಖ ಒಂದಾಗಿದೆ ಪವಿತ್ರ ರಂಝಾನ್ ತಿಂಗಳು. 

ರಮಳಾನ್ ಎಂಬುದರ ಭಾವಾರ್ಥವೇ ಸುಡುವುದು ಎಂದರ್ಥ. ಈ ತಿಂಗಳಲ್ಲಿ ಮುಸಲ್ಮಾನನೊಬ್ಬ ಎಲ್ಲಾ ಕೆಡುಕುಗಳಿಂದ ದೂರವಿದ್ದು, ಅಂತಃಶುದ್ದಿಯಿಂದ ಉಪವಾಸ ವೃತವನ್ನು ಅಲ್ಲಾಹನ ಸಂಪ್ರೀತಿಯ ಉದ್ದೇಶದಿಂದ ಆಚರಿಸಿದರೆ ಆತನ ಜೀವಿತದಲ್ಲಿ ಆತ ಕೈಗೊಂಡ ಸಕಲ ಪಾಪಗಳನ್ನು ಅಲ್ಲಾಹನು ಸುಟ್ಟು ಹಾಕುವನು. ಅಲ್ಲದೆ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂರವರು ಹದೀಸ್‍ವೊಂದರಲ್ಲಿ ಸ್ಪಷ್ಟವಾಗಿ ಹೇಳುತ್ತಾರೆ : “ಪವಿತ್ರ ರಮಳಾನಿನ ಆಗಮನದೊಂದಿಗೆ ವ್ಯಕ್ತಿಯೊಬ್ಬ ಸಂತೋಷದಿಂದ ಪುಳಕಿತಗೊಳ್ಳುತ್ತಾನೋ ಆತನ ಶರೀರವನ್ನು ಅಲ್ಲಾಹನು ಎಲ್ಲಾ ನರಕಗಳಿಂದ ನಿಷಿದ್ದಗೊಳಿಸುತ್ತಾನೆ”. ಎಂದರೆ ಕೇವಲ ರಮಳಾನಿನ ಆಗಮನದೊಂದಿಗೇ ಮುಸಲ್ಮಾನನೊಬ್ಬನ ವಿಜಯ ಪ್ರಾರಂಭವಾಗುತ್ತದೆ. ನಂತರ ಈ ತಿಂಗಳಲ್ಲಿ ಕೈಗೊಳ್ಳುವ ಎಲ್ಲಾ ಸತ್ಕರ್ಮಗಳಿಗೂ ಉಳಿದ ಸಮಯಗಳಲ್ಲಿ ಕೈಗೊಳ್ಳುವ ಸತ್ಕರ್ಮಗಳಿಗಿಂತ ದುಪ್ಪಟ್ಟು ಪ್ರತಿಫಲವನ್ನು ಪಡೆಯುತ್ತಾನೆ. ರಮಳಾನಿನಲ್ಲಿ ಒಂದು ಕಡ್ಡಾಯ ಕರ್ಮವನ್ನು ಕೈಗೊಂಡರೆ ವರ್ಷದ ಇತರ ಸಮಯಗಳಲ್ಲಿ ಕೈಗೊಳ್ಳುವ 70 ಸತ್ಕರ್ಮಗಳ ಪ್ರತಿಫಲವೂ, ಐಚ್ಛಿಕ ಕರ್ಮವನ್ನು ಕೈಗೊಂಡರೆ ಉಳಿದ ಸಮಯಗಳಲ್ಲಿ ಕೈಗೊಳ್ಳುವ ಕಡ್ಡಾಯ ಕರ್ಮದ ಪ್ರತಿಫಲವೂ ಪ್ರಾಪ್ತವಾಗುತ್ತದೆ. 

ರಮಳಾನಿನಲ್ಲಿ ಕೈಗೊಳ್ಳುವ ಉಪವಾಸ ವೃತವು ಕೇವಲ ಅನ್ನಾಹಾರ, ಪಾನೀಯಾದಿಗಳನ್ನು ತೊರೆಯುವುದಕ್ಕೆ ಮಾತ್ರ ಸೀಮಿತಗೊಳಿಸದೆ, ಸಕಲ ದೇಹೇಚ್ಚೆಗಳಿಂದ ದೂರವಿದ್ದರೆ ಮಾತ್ರ ಉಪವಾಸ ವೃತದ ಪರಿಪೂರ್ಣ ಪ್ರತಿಫಲ ದೊರೆಯಲು ಸಾಧ್ಯ. ಶರೀರದ ಯಾವುದಾದರೊಂದು ಅಂಗದ ಮುಖಾಂತರ ಕೈಗೊಳ್ಳುವ ಒಂದು ಸಣ್ಣ ತಪ್ಪಾದರೂ ಅದು ಅಂದಿನ ಆತನ ಉಪವಾಸದ ಪ್ರತಿಫಲದಲ್ಲಿ ಕೊರತೆಯನ್ನು ಅನುಭವಿಸುವಂತೆ ಮಾಡುತ್ತದೆ. ರಮಳಾನಿನ ರಾತ್ರಿ ಸಮಯದಲ್ಲಿ ತರಾವೀಹ್ ಎಂಬ ಸುನ್ನತ್ ನಮಾಜ್ ಪ್ರತ್ಯೇಕ ಸುನ್ನತಾಗಿದ್ದು, ಸಾಮಾನ್ಯವಾಗಿ ಎಲ್ಲ ಮಸೀದಿಗಳಲ್ಲೂ ಅದನ್ನು ಸಾಮೂಹಿಕವಾಗಿ ನೆರವೇರಿಸಲಾಗುತ್ತದೆ. ಕಳೆದ ಬಾರಿ ಕೋವಿಡ್ ಮಹಾ ಸಾಂಕ್ರಾಮಿಕ ರೋಗ ಕಾರಣದಿಂದಾಗಿ ಜಗತ್ತಿನಲ್ಲೇ ಮಸೀದಿಗಳು ಮುಚ್ಚಲ್ಪಟ್ಟು ಮಸೀದಿಗಳಲ್ಲಿನ ಸಾಮೂಹಿಕ ನಮಾಝಿಗೆ ತಡೆಯಾಗಿತ್ತು. ಆದರೆ ಆಧ್ಯಾತ್ಮಿಕ ಬೋಧವಿರುವ ಸರ್ವರೂ ಮಸೀದಿಯಲ್ಲಿ ನಮಾಝ್ ನಿರ್ವಹಿಸುತ್ತಿದ್ದ ಅದೇ ಸಮಯವನ್ನು ವ್ಯರ್ಥ ಮಾಡದೆ ತಮ್ಮ ತಮ್ಮ ಮನೆಗಳಲ್ಲಿ ಏಕಾಂಗಿಯಾಗಿಯೋ ಅಥವಾ ಮನೆ ಮಂದಿಯೊಂದಿಗೆ ಸಾಮೂಹಿಕವಾಗಿಯೋ ನೆರವೇರಿಸುವ ಮೂಲಕ ಆ ಪುಣ್ಯವನ್ನು ತಮ್ಮದಾಗಿಸಿಕೊಳ್ಳುವ ಪ್ರಯತ್ನ ನಡೆಸಿದ್ದರು. ಕನಿಷ್ಠ ಪಕ್ಷ ಅಂತಹ ಸತ್ಕರ್ಮಗಳಲ್ಲಾದರೂ ಪಾಲ್ಗೊಳ್ಳುವ ಮೂಲಕ ರವiಳಾನ್ ತಿಂಗಳ ಸಾರ್ಥಕತೆಗೆ ಪ್ರಯತ್ನಿಸಬೇಕಾಗಿದೆ. 

ಪವಿತ್ರ ರಂಝಾನ್ ಈಗಾಗಲೇ ನಮ್ಮನ್ನು ಸ್ವಾಗತಿಸಿದೆ. ರಂಝಾನ್ ತಿಂಗಳ ಪ್ರತಿಯೊಂದು ದಿವಸಗಳು, ಸಮಯಗಳು, ಕ್ಷಣಗಳೂ ಮುಸ್ಲಿಂ ಉಮ್ಮತ್ತಿನ ಪಾಲಿಗೆ ಅತ್ಯಂತ ಬೆಲೆಬಾಳುವಂತದ್ದು ಎಂಬುದನ್ನು ಮನಗಾಣಬೇಕಿದೆ. ಪವಿತ್ರ ರಂಝಾನ್ ನಮ್ಮನ್ನು ಬೀಳ್ಕೊಡುವಾಗ ಯಾವತ್ತೂ ಶಪಿಸುತ್ತಾ ಬೀಳ್ಕೊಡುವ ಸನ್ನಿವೇಶ ನಿರ್ಮಾಣವಾಗಬಾರದು. ಒಂದು ವೇಳೆ ರಂಝಾನ್ ತಿಂಗಳು ಮುಸ್ಲಿಮನನ್ನು ಶಪಿಸುತ್ತಾ ವಿದಾಯ ಕೋರಿದರೆ ಅದು ಆತನ ಇಡೀ ಪಾರತ್ರಿಕ ಜೀವನದ ವಿನಾಶಕ್ಕೆ ಸಾಕಾದೀತು. ರಂಝಾನ್ ತಿಂಗಳಿನಲ್ಲಿ ಕಳೆದು ಹೋಗುವ ಪ್ರತಿಯೊಂದು ಅತ್ಯಮೂಲ್ಯ ಕ್ಷಣವೂ ನಮ್ಮ ಜೀವನದಲ್ಲಿ ಮತ್ತೊಮ್ಮೆ ಮರಳಿ ಪಡೆಯಬಹುದು ಎಂಬ ವಿಶ್ವಾಸ ನಮಗ್ಯಾರಿಗೂ ಇರುವುದಿಲ್ಲ. ಅಂದರೆ ಕಾಲವು ಅಂತಿಮ ಘಟ್ಟಕ್ಕೆ ಸಮೀಪಿಸುತ್ತಿದೆ. ಅಂತ್ಯ ದಿವಸದ ಎಲ್ಲ ಪ್ರಮುಖ ಲಕ್ಷಣಗಳನ್ನು ನಾವು ನಮ್ಮ ಕಣ್ಣಲ್ಲಿ ಕಾಣಲು ಆರಂಭಿಸಿದ್ದೇವೆ. ಅವುಗಳಲ್ಲಿ ಪ್ರಮುಖ ಒಂದಾಗಿದೆ ಮಾನವನ ಮರಣ ಅಧಿಕಗೊಳ್ಳುವುದು. ಇದನ್ನು ಇಂದು ನಾವು ವ್ಯಾಪಕವಾಗಿ ಅನುಭವ ವೇದ್ಯವಾಗಿ ಕಾಣುತ್ತಿದ್ದೇವೆ. ಯಾವುದೇ ರೋಗ ಲಕ್ಷಣಗಳಿಲ್ಲದೆ, ಮರಣದ ಬಗ್ಗೆ ನಿರೀಕ್ಷಿಸಿಯೇ ಇರದಂತಹ ಅದೆಷ್ಟೋ ಮಂದಿಗಳು ದಿನದಿಂದ ದಿನಕ್ಕೆ ನಮ್ಮಿಂದ ಕಣ್ಮರೆಯಾಗುತ್ತಿದ್ದಾರೆ. ಕಳೆದ ವರ್ಷದ ಕೋವಿಡ್ ಮಾರಕ ಕಾಯಿಲೆ ಬಾಧಿಸಿದ ಬಳಿಕ ಅದೆಷ್ಟೋ ಬಂಧು-ಮಿತ್ರರು, ನೆರೆ-ಕರೆ ಸೇರಿದಂತೆ ಹಲವು ಮಂದಿ ಕ್ಷಣಮಾತ್ರದಲ್ಲಿ ಮಣ್ಮರೆಯಾಗಿದ್ದಾರೆ ಎಂಬುದು ಎಲ್ಲರಿಗೂ ತಿಳಿದುರವಂತದ್ದೆ, ಇಂದಲ್ಲ ನಾಳೆ ನಮಗೂ ಇದೇ ಗತಿ ಎಂಬುದನ್ನು ಯಾವತ್ತೂ ನಾವು ಯೋಚಿಸಿದ್ದೇ ಇಲ್ಲ. ಅಂತಹ ಯೋಚನೆಯನ್ನು ಕೈಗೊಳ್ಳುವ ಅವಕಾಶ ನಮಗೆ ಒದಗಿ ಬಂದೇ ಇಲ್ಲ ಎಂಬುದೇ ನಮ್ಮ ದೌರ್ಭಾಗ್ಯ. 

ಆದುದರಿಂದ ನಮ್ಮ ಪಾಲಿಗೆ ವರದಾನವಾಗಿ ಆಗಮಿಸಿರುವ ಪರಿಶುದ್ದ ರಮಳಾನ್ ತಿಂಗಳಿನ ಪ್ರತೀ ಕ್ಷಣವೂ ಯಾವುದೇ ಕಾರಣಕ್ಕೂ ಪೆÇೀಲಾಗದೆ ಅಲ್ಲಾಹನ ಸಂಪ್ರೀತಿ ಗಳಿಕೆಯ ನಿಟ್ಟಿನಲ್ಲಿ ಉತ್ತಮ ರೀತಿಯಲ್ಲಿ ಬಳಸಿಕೊಳ್ಳಲು ಪ್ರಯತ್ನಿಸಬೇಕಾಗಿದೆ. ನಾವು ನಿರ್ವಹಿಸುವ ಸಕಲ ಸತ್ಕರ್ಮಗಳು ಲೋಕಮಾನ್ಯತೆ, ಹೆಸರು, ಪ್ರತಿಷ್ಠೆಗಳ ಉದ್ದೇಶಗಳಿಂದ ಮುಕ್ತಗೊಂಡು ದೇವ ಸಂಪ್ರೀತಿಯ ಏಕಮಾತ್ರ ಉದ್ದೇಶವನ್ನು ಹೊಂದುವಂತಾಗಬೇಕಿದೆ. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ ಪವಿತ್ರ ರಮಳಾನ್ ತಿಂಗಳನ್ನು ಪೂರ್ತಿಯಾಗಿ ಸದುಪಯೋಗಪಡಿಸಿಕೊಳ್ಳಲು ಸರ್ವ ಶಕ್ತನಾದ ಅಲ್ಲಾಹು ನಮಗೆಲ್ಲರಿಗೂ ಅನುಗ್ರಹಿಸಲಿ.... ಆಮೀನ್.. ಯಾ ರಬ್ಬಲ್ ಆಲಮೀನ್ .....

- ಪಿ.ಎಂ.ಎ. ಪಾಣೆಮಂಗಳೂರು.

  • Blogger Comments
  • Facebook Comments

0 comments:

Post a Comment

Item Reviewed: ಮತ್ತೆ ಮುಸ್ಲಿಂ ಉಮ್ಮತ್ತನ್ನು ಸ್ವಾಗತಿಸಿದ ಪವಿತ್ರ ರಮಳಾನ್ : ಕೈಗೊಳ್ಳುವ ಪ್ರತಿಯೊಂದು ಸತ್ಕರ್ಮಗಳೂ ಲೋಕ ಪ್ರತಿಷ್ಠೆಯನ್ನು ಬದಿಗೊತ್ತಿ ದೇವಸಂಪ್ರೀತಿಗಾಗಿರಲಿ Rating: 5 Reviewed By: karavali Times
Scroll to Top