ಬೆಂಗಳೂರು, ಎಪ್ರಿಲ್ 13, 2021 (ಕರಾವಳಿ ಟೈಮ್ಸ್) : ಮುಸ್ಲಿಮರ ಪವಿತ್ರ ಮಾಸ ರಂಝಾನ್ ಕರಾವಳಿ ಭಾಗಗಳಲ್ಲಿ ಮಂಗಳವಾರದಿಂದ ಪ್ರಾರಂಭಗೊಂಡಿದ್ದು, ರಾಜ್ಯ ರಾಜಧಾನಿ ಸೇರಿದಂತೆ ಇತರೆಡೆಗಳಲ್ಲಿ ಬುಧವಾರದಿಂದ ಪ್ರಾರಂಭಗೊಳ್ಳಲಿದೆ. ರಂಝಾನ್ ತಿಂಗಳಲ್ಲಿ ಮಸೀದಿಗಳು ಸಾಮೂಹಿಕ ಪ್ರಾರ್ಥನೆಗಾಗಿ ತುಂಬಿ ತುಳುಕಲಿದ್ದು, ಸಾಮೂಹಿಕ ಇಫ್ತಾರ್ ಕೂಟಗಳು ಅಲ್ಲಲ್ಲಿ ನಡೆಯುವ ಹಿನ್ನಲೆಯಲ್ಲಿ ವೇಗವಾಗಿ ಹೆಚ್ಚಾಗುತ್ತಿರುವ ಕೊರೊನಾ 2ನೇ ಅಲೆ ಪ್ರಕರಣಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಇದೀಗ ರಂಝಾನ್ ತಿಂಗಳ ಇಫ್ತಾರ್, ಸಾಮೂಹಿಕ ನಮಾಝ್ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಹೊಸ ಮಾರ್ಗಸೂಚಿ ಪ್ರಕಟಿಸಿದೆ.
ಸರಕಾರದ ಹೊಸ ಮಾರ್ಗಸೂಚಿಯಂತೆ ಸಾಮೂಹಿಕ ಇಫ್ತಾರ್ ಕೂಟಗಳನ್ನು ಆಯೋಜಿಸುವಂತಿಲ್ಲ. ಮಸೀದಿಗಳಲ್ಲೂ ನಿಯಮ ಮೀರಿ ಸಾಮೂಹಿಕ ನಮಾಝ್ ಮಾಡುವಂತಿಲ್ಲ. ಪ್ರತಿ ಸಮಯಗಳ ನಮಾಝಿಗೆ 5 ನಿಮಿಷ ಮುಂಚಿತವಾಗಿ ಮಸೀದಿ ತೆರೆಯುವುದು ಸೇರಿದಂತೆ ಹಲವು ನಿಯಮಗಳನ್ನು ಘೋಷಿಸಲಾಗಿದೆ.
ಕಂಟೈನ್ಮೆಂಟ್ ವಲಯದಲ್ಲಿರುವ ಮಸೀದಿಗಳು ಬಂದ್ ಮಾಡುವಂತೆ ಸೂಚಿಸಲಾಗಿದ್ದು, ಕಂಟೈನ್ಮೆಂಟ್ ವಲಯದ ಹೊರಗೆ ಇರುವ ಮಸೀದಿಗಳು ಮಾರ್ಗಸೂಚಿ ಪ್ರಕಾರವೇ ತೆರೆಯಬೇಕಾಗಿದೆ. ಇಫ್ತಾರ್ ಮನೆಯಲ್ಲೇ ಆಗಿರಬೇಕು. ಸಾಮಾಜಿಕ ಅಂತರ, ಮಾಸ್ಕ್ ಸೇರಿದಂತೆ ಕೊರೊನಾ ನಿಯಮಗಳನ್ನು ಪಾಲಿಸಿ ಮಸೀದಿಗಳಲ್ಲಿ ನಮಾಝ್ ನಿರ್ವಹಿಸಬೇಕು. ನಮಾಝಿಗೆ ಪ್ರತಿಯೊಬ್ಬರು ಪ್ರತ್ಯೇಕ ಸ್ವಂತ ಚಾದರ್‍ಗಳನ್ನು ತಾವುಗಳೆ ತರಬೇಕು, ಮಸೀದಿಯ ವಸ್ತ್ರ, ಚಾಪೆ ಇತ್ಯಾದಿ ಬಳಸುವಂತಿಲ್ಲ. ವುಝೂ ಮನೆಯಲ್ಲೇ ಮಾಡಿಕೊಂಡು ಬರಬೇಕು, ನಮಾಝ್ ವೇಳೆ ಕನಿಷ್ಟ ಎರಡು ಮೀಟರ್ ಅಂತರ ಕಾಯ್ದುಕೊಳ್ಳಬೇಕು. ಎರಡು ಮೀಟರ್ ಅಂತರಕ್ಕೆ ಮಸೀದಿಗಳಲ್ಲಿ ಮಾರ್ಕಿಂಗ್ ಮಾಡಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಅಗತ್ಯವಿದ್ದರೆ ಶುಕ್ರವಾರದ ಜುಮಾ ನಮಾಝ್‍ಗಾಗಿ ಮೂರು ಪಾಳಿ ಮಾಡಿಕೊಳ್ಳಬಹುದಾಗಿದೆ ಎಂದು ಸೂಚಿಸಲಾಗಿದೆ. ಇಫ್ತಾರ್‍ಗಾಗಿ ಮಸೀದಿ ಹಾಗೂ ಇತರ ಸಾರ್ವಜನಿಕ ಸ್ಥಳಗಳಿಗೆ ಆಹಾರ ಪದಾರ್ಥಗಳನ್ನು ತರುವುದನ್ನು ನಿರ್ಬಂಧಿಸಲಾಗಿದೆ. ಉಪವಾಸವನ್ನು ಮನೆಯಲ್ಲಿಯೇ ಬಿಡಬೇಕು. ಸಾಮೂಹಿಕ ಪ್ರಾರ್ಥನೆ ಸಮಯದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ. ಮಸೀದಿಗೆ ಬರುವಾಗ ಸರದಿ ಅನುಸಿರಿಸಬೇಕು, ಮಾಸ್ಕ್ ಕಡ್ಡಾಯ, ಪ್ರತಿ ಹೊತ್ತಿನ ನಮಾಝ್ ಬಳಿಕ ಸ್ಯಾನಿಟೈಸರ್ ಅಳವಡಿಕೆ ಕಡ್ಡಾಯವಾಗಿದೆ. ಅಲ್ಲದೆ 60 ವರ್ಷದ ಮೇಲ್ಪಟ್ಟವರು, ಮಕ್ಕಳು ಹಾಗೂ ಗರ್ಭಿಣಿಯರಿಗೆ ಮಸೀದಿಗೆ ಬರುವಂತಿಲ್ಲ ಎಂದು ಮಾರ್ಗಸೂಚಿಯಲ್ಲಿ ವಿವರಿಸಲಾಗಿದೆ.
0 comments:
Post a Comment